ಬೆಂಗಳೂರು: ಇಂದು ವಿಧಾನಸಭಾ ಅಧಿವೇಶನದಲ್ಲಿ ನಮ್ಮ ಬಿಜೆಪಿಯ 18 ಜನ ಶಾಸಕರನ್ನು ಅಮಾನತುಗೊಳಿಸುವ ವಿಧಾನಸಭಾ ಅಧ್ಯಕ್ಷರ ನಿರ್ಧಾರ ಖಂಡನೀಯ. ಇದು ಪ್ರಜಾಪ್ರಭುತ್ವ, ಸಂವಿಧಾನ ವಿರೋಧಿ ನಡೆಯಾಗಿದೆ ಎಂದು ವಿಧಾನಪರಿಷತ್‌ನ ಬಿಜೆಪಿ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯದ ಸಚಿವರಿಗೆ, ಶಾಸಕರಿಗೆ ಹನಿಟ್ರ್ಯಾಪ್ ಮಾಡಿದ್ದಾರೆ. ಮುಸ್ಲಿಂರಿಗೆ ಶೇ. 4 ರಷ್ಟು ಸರ್ಕಾರಿ ಗುತ್ತಿಗೆಯಲ್ಲಿ ಮೀಸಲಾತಿ, SCP/TSP ಅನುದಾನ ದುರ್ಬಳಕೆ, ಸಿಎಂ ಮಂಡಿಸಿರುವ ಸಾಲದ ಬಜೆಟ್ ಎಂದು ಸೇರಿದಂತೆ ಅನೇಕ ವಿಷಯಗಳನ್ನು ಮುಂದಿಟ್ಟುಕೊಂಡು ಸರ್ಕಾರದ ಜನವಿರೋಧಿ ನಿಲುವುಗಳನ್ನು ವಿರೋಧ ಪಕ್ಷವಾಗಿ ಪ್ರಶ್ನಿಸಿ, ಪ್ರತಿಭಟನೆ ಮಾಡುತ್ತಿರುವ ಸಂದರ್ಭದಲ್ಲಿ ನಮ್ಮಪಕ್ಷದ 18 ಶಾಸಕರ ಅಮಾನತು ಮಾಡಿರುವುದು ಸಂವಿಧಾನ ವಿರೋಧಿಯಾಗಿದೆ ಎಂದು ಗುಡುಗಿದ್ದಾರೆ.
ಪ್ರತಿಭಟನೆ ಮಾಡುವುದು ಸದಸ್ಯರ ಹಕ್ಕು. ಆ ಹಕ್ಕನ್ನು ಕಸಿದುಕೊಳ್ಳುತ್ತಿರುವ ಈ ತುಘಲಕ್ ಸರ್ಕಾರದ ದಬ್ಬಾಳಿಕೆಗೆ ನಾವು ಬಗ್ಗಲ್ಲ. ಪ್ರಜಾಪ್ರಭುತ್ವದ ದೇಗುಲದಲ್ಲೇ ಜನಪ್ರತಿನಿಧಿಗಳ ಬಾಯಿ ಮುಚ್ಚಿಸಿ ಹೊರಹಾಕುವ ನಿರ್ಧಾರ ಪ್ರಜಾತಂತ್ರ ವ್ಯವಸ್ಥೆಯ ಮೇಲಿನ ದಬ್ಬಾಳಿಕೆಯ ಕ್ರಮವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.