ಬೆಂಗಳೂರಿನಲ್ಲಿ ಅಮೆರಿಕದ ಕಾನ್ಸುಲೇಟ್ ಆರಂಭಗೊಳ್ಳುವ ಸುದ್ದಿ ಸೋಮವಾರವಷ್ಟೇ ಪ್ರಕಟಗೊಂಡಿದೆ. ಈ ನಡುವೆ ಸ್ಪೇನ್ ಶೀಘ್ರದಲ್ಲೇ ಬೆಂಗಳೂರಿನಲ್ಲಿ ರಾಯಭಾರ ಕಚೇರಿ (S :panish consulate) ಸ್ಥಾಪಿಸಲಿದೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಮಂಗಳವಾರ ಪ್ರಕಟಿಸಿದ್ದಾರೆ. ಇದು ಭಾರತ ಮತ್ತು ಸ್ಪೇನ್ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ಸಕಾರಾತ್ಮಕ ಹೆಜ್ಜೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಮ್ಯಾಡ್ರಿಡ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಜೈಶಂಕರ್, “ಬಾರ್ಸಿಲೋನಾದ ಜನರು ಬೆಂಗಳೂರಿನಲ್ಲಿ ರಾಯಭಾರ ಕಚೇರಿ ಸ್ಥಾಪನೆಯನ್ನು ಮೆಚ್ಚುತ್ತಾರೆ ಎಂದು ನಾನು ಭಾವಿಸುತ್ತೇನೆ. ಈ ಬೆಳವಣಿಗೆಗಳು ನಮ್ಮ ಸಂಬಂಧಗಳು ಇನ್ನಷ್ಟು ಹೆಚ್ಚುತ್ತಿರುವುದನ್ನು ಪ್ರತಿಬಿಂಬಿಸುತ್ತವೆ. ಆರ್ಥಿಕವಾಗಿ ಸಹಭಾಗಿತ್ವವು ಸಾಂಸ್ಕೃತಿಕ, ಪ್ರವಾಸೋದ್ಯಮ ಮತ್ತು ಎಐ ಸಹಯೋಗಗಳ ಮೇಲೆ ಕೇಂದ್ರೀಕರಿಸಿದೆ ಎಂದು ಹೇಳಿದರು.
ಕಳೆದ ದಶಕದಲ್ಲಿ ಭಾರತೀಯ ವಲಸಿಗರು ಜಾಗತಿಕವಾಗಿ ನೀಡುತ್ತಿರುವ ಕೊಡುಗೆಗಳು ಹೆಚ್ಚುತ್ತಿರುವುದನ್ನು ಜೈಶಂಕರ್ ಒತ್ತಿ ಹೇಳಿದರು. ವಲಸಿಗರ ಮೇಲೆ ಭಾರತ ಸರ್ಕಾರದ ಗಮನ ಹೆಚ್ಚಿಸಿದ್ದಕ್ಕಾಗಿ ಅವರು ಪ್ರಧಾನಿ ನರೇಂದ್ರ ಮೋದಿಯನ್ನು ಶ್ಲಾಘಿಸಿದರು.
ಎರಡು ದಿನಗಳ ಭೇಟಿಯಾಗಿ ಸ್ಪೇನ್‌ಗೆ ತೆರಳಿರುವ ಸಚಿವರು ಮಂಗಳವಾರ ಭಾರತೀಯ ವಲಸಿಗರನ್ನುದ್ದೇಶಿಸಿ ಮಾತನಾಡಿ, ಸಾಂಸ್ಕೃತಿಕ ವಿನಿಮಯ, ಪ್ರವಾಸೋದ್ಯಮ ಮತ್ತು ಉಭಯ ದೇಶಗಳ ನಡುವಿನ ಕೃತಕ ಬುದ್ಧಿಮತ್ತೆಯ ಸಾಧನೆಯನ್ನು ಹಂಚಿಕೊಳ್ಳುವುದಕ್ಕೆ ಒತ್ತು ನೀಡಲಾಗಿದೆ ಎಂದು ಹೇಳಿದರು.
ಅಮೆರಿಕ ರಾಯಭಾರ ಕಚೇರಿ ಆರಂಭ
ಅಂದ ಹಾಗೆ ಬೆಂಗಳೂರಿನಲ್ಲಿ ಯುಎಸ್ ಕಾನ್ಸುಲೇಟ್ ಆರಂಭಗೊಳ್ಳಲಿದೆ. ಹೀಗಾಗಿ ಬೆಂಗಳೂರಿಗರು ವೀಸಾ ಸೇವೆಗಳಿಗಾಗಿ ನಿವಾಸಿಗಳು ಚೆನ್ನೈ ಅಥವಾ ಹೈದರಾಬಾದ್‌ಗೆ ಪ್ರಯಾಣಿಸುವ ಅಗತ್ಯ ಇರುವುದಿಲ್ಲ. ಆರಂಭದಲ್ಲಿಅದು ವಿಠಲ್ ಮಲ್ಯ ರಸ್ತೆಯಲ್ಲಿರುವ ಜೆಡಬ್ಲ್ಯೂ ಮ್ಯಾರಿಯಟ್ ಹೋಟೆಲ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಮುಂದೆ ಅದು ಸಂಪೂರ್ಣ ಸುಸಜ್ಜಿತ ಸೌಲಭ್ಯಕ್ಕೆ ಪರಿವರ್ತನೆಗೊಳ್ಳುತ್ತವೆ. ವಿಶೇಷವೆಂದರೆ, ಬೆಂಗಳೂರಿನ ಯುನೈಟೆಡ್ ಸ್ಟೇಟ್ಸ್ ಕಮರ್ಷಿಯಲ್ ಸರ್ವಿಸ್ (ಯುಎಸ್‌ಸಿಎಸ್) ಪ್ರಸ್ತುತ ಅದೇ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದೆ.