ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಕೇವಲ ಎರಡೇ ಎಸೆತಗಳನ್ನು ಎದುರಿಸಿ ಪೆವಿಲಿಯನ್ ಸೇರಿದ ಭಾರತದ ಉಪನಾಯಕ ಶುಭ್ಮನ್ ಗಿಲ್ ವಿರುದ್ಧ ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಟಕ್‌ನಲ್ಲಿ ಮಂಗಳವಾರ (ಡಿಸೆಂಬರ್ 9) ನಡೆದ ಪಂದ್ಯದಲ್ಲಿ ಗಿಲ್ ಕೇವಲ 4 ರನ್‌ಗಳಿಸಿ ಔಟಾಗಿದ್ದು, ಅವರ ಸ್ಥಾನದ ಬಗ್ಗೆ ಮತ್ತೆ ಚರ್ಚೆ ಹುಟ್ಟುಹಾಕಿದೆ. ಕುತ್ತಿಗೆ ನೋವಿನ ಸಮಸ್ಯೆಯಿಂದಾಗಿ ಸುಮಾರು ಒಂದು ತಿಂಗಳ ಕಾಲ ತಂಡದಿಂದ ಹೊರಗುಳಿದಿದ್ದ ಗಿಲ್, ದಕ್ಷಿಣ ಆಫ್ರಿಕಾ ವಿರುದ್ಧದ ಈ ಸರಣಿಯಲ್ಲಿ ಕಮ್‌ಬ್ಯಾಕ್ ಮಾಡಿದ್ದರು. ಆದರೆ, ಅವರ ವೈಫಲ್ಯ ಅಭಿಮಾನಿಗಳ ತಾಳ್ಮೆ ಕೆಡಿಸಿದೆ.
ಮ್ಯಾಗಿ ಮಾಡೋಕು ಮುಂಚೆ ಔಟ್!
ಲುಂಗಿ ಎನ್‌ಗಿಡಿ ಅವರ ಓವರ್‌ನಲ್ಲಿ ಮೊದಲ ಎಸೆತವನ್ನೇ ಬೌಂಡರಿಗೆ ಅಟ್ಟಿದ್ದ ಗಿಲ್, ಮುಂದಿನ ಎಸೆತದಲ್ಲಿ ನೇರವಾಗಿ ಹೊಡೆಯಲು ಹೋಗಿ ಮಾರ್ಕೊ ಜಾನ್ಸನ್‌ಗೆ ಕ್ಯಾಚ್ ನೀಡಿದರು. ಕ್ರೀಸ್‌ನಲ್ಲಿ ಅವರು ಕಳೆದ ಅಲ್ಪ ಸಮಯವನ್ನು ಉಲ್ಲೇಖಿಸಿ ಅಭಿಮಾನಿಗಳು ಟ್ರೋಲ್ ಮಾಡಿದ್ದಾರೆ. “ನೀವು ಮ್ಯಾಗಿ ನೂಡಲ್ಸ್ ಮಾಡುವಷ್ಟರಲ್ಲಿ ಗಿಲ್ ಬ್ಯಾಟಿಂಗ್ ಮುಗಿಸಿರುತ್ತಾರೆ,” ಎಂದು ಕೆಲವರು ವ್ಯಂಗ್ಯವಾಡಿದ್ದಾರೆ.
ಗಿಲ್ ಟಿ20 ಫಾರ್ಮ್ ಬಗ್ಗೆ ಪ್ರಶ್ನೆ
ತಂಡದ ಉಪನಾಯಕರಾಗಿರುವ ಗಿಲ್, ಟಿ20 ಕ್ರಿಕೆಟ್‌ನಲ್ಲಿ ಆರಂಭಿಕ ಆಟಗಾರನಾಗಿ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ. ಇದರಿಂದಾಗಿ ಸಂಜು ಸ್ಯಾಮ್ಸನ್ ಅವರಂತಹ ಆಟಗಾರರು ಕೆಳಕ್ರಮಾಂಕಕ್ಕೆ ಇಳಿಯುವಂತಾಗಿದೆ. ಆದರೆ, ಗಿಲ್ ಈ ವರ್ಷ ಟಿ20ಯಲ್ಲಿ ಒಂದೇ ಒಂದು ಅರ್ಧಶತಕವನ್ನೂ ಗಳಿಸಿಲ್ಲ. ಕಳೆದ 13 ಪಂದ್ಯಗಳಲ್ಲಿ ಅವರು ಕೇವಲ 263 ರನ್ ಗಳಿಸಿದ್ದು, ಸರಾಸರಿ 26.3 ಮತ್ತು ಸ್ಟ್ರೈಕ್ ರೇಟ್ 143.71 ರಷ್ಟಿದೆ. “ಗಿಲ್ ಟಿ20 ಫಾರ್ಮ್ಯಾಟ್‌ಗೆ ಸೂಕ್ತವಲ್ಲ, ಅವರು ಯಶಸ್ವಿ ಜೈಸ್ವಾಲ್, ಇಶಾನ್ ಕಿಶನ್ ಅಥವಾ ಸಂಜು ಸ್ಯಾಮ್ಸನ್ ಅವರಂತಹ ಅರ್ಹ ಆಟಗಾರರ ಅವಕಾಶವನ್ನು ಕಸಿದುಕೊಳ್ಳುತ್ತಿದ್ದಾರೆ,” ಎಂದು ಅಭಿಮಾನಿಗಳು ಕಿಡಿಕಾರಿದ್ದಾರೆ.
ವಿಶೇಷವೆಂದರೆ, ಈ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅವರಿಗೆ ತಂಡದಲ್ಲಿ ಸ್ಥಾನ ಸಿಕ್ಕಿರಲಿಲ್ಲ. ಅವರ ಬದಲಿಗೆ ಜಿತೇಶ್ ಶರ್ಮಾ ಅವರನ್ನು ಆಡಿಸಲಾಗಿತ್ತು.
ಮುಂದಿನ ಪಂದ್ಯ ತವರಿನಲ್ಲಿ
ಸರಣಿಯ ಮುಂದಿನ ಪಂದ್ಯ ಗುರುವಾರ (ಡಿಸೆಂಬರ್ 11) ಪಂಜಾಬ್‌ನ ಮುಲ್ಲನ್‌ಪುರದಲ್ಲಿ ನಡೆಯಲಿದೆ. ಅದು ಗಿಲ್ ಅವರ ತವರು ರಾಜ್ಯವಾಗಿದ್ದು, ಅಲ್ಲಿಯಾದರೂ ಅವರು ತಮ್ಮ ಬ್ಯಾಟಿಂಗ್ ಫಾರ್ಮ್ ಕಂಡುಕೊಳ್ಳುತ್ತಾರಾ ಎಂದು ಕಾದು ನೋಡಬೇಕಿದೆ.
ಇದನ್ನೂ ಓದಿ : ಯಶ್-ರಾಧಿಕಾ ದಾಂಪತ್ಯಕ್ಕೆ 9 ವರ್ಷಗಳ ಸಂಭ್ರಮ | ರಾಕಿಂಗ್ ಸ್ಟಾರ್‌ರನ್ನ ಈ ರೀತಿಯಲ್ಲಿ ನೋಡ್ತಾರಂತೆ ಸಿಂಡ್ರೆಲಾ!



















