ನವದೆಹಲಿ: ಶಿಕ್ಷಕರ ಕಿರುಕುಳಕ್ಕೆ ಬೇಸತ್ತು 10ನೇ ತರಗತಿಯ ವಿದ್ಯಾರ್ಥಿಯೊಬ್ಬ ಮೆಟ್ರೋ ನಿಲ್ದಾಣದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ . 16 ವರ್ಷದ ಈ ಬಾಲಕ, ತನ್ನ ಸಾವಿಗೆ ಶಾಲೆಯ ಶಿಕ್ಷಕರೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟಿದ್ದಾನೆ. ಇದೀಗ ಆತನ ತಂದೆ ಶಾಲೆಯ ಮೂವರು ಶಿಕ್ಷಕರು ಹಾಗೂ ಶಾಲೆಯ ಪ್ರಾಂಶುಪಾಲರ ವಿರುದ್ಧ ಮಾನಸಿಕ ಕಿರುಕುಳದ ದೂರು ದಾಖಲಿಸಿದ್ದಾರೆ.
ಡೆತ್ ನೋಟ್‌ನಲ್ಲಿ ಕರುಳು ಹಿಂಡುವ ಮಾತು
ವಿದ್ಯಾರ್ಥಿಯ ಶಾಲಾ ಬ್ಯಾಗ್‌ನಲ್ಲಿ ಸಿಕ್ಕಿದ ಡೆತ್ ನೋಟ್‌ನಲ್ಲಿ, “Sorry mummy, aapka itni bar dil toda, ab last bar todunga. School ki teachers ab hai hi aise, kya bolu (ಕ್ಷಮಿಸು ಅಮ್ಮ, ನಿನ್ನ ಮನಸ್ಸನ್ನು ಹಲವು ಬಾರಿ ನೋಯಿಸಿದ್ದೇನೆ. ಈಗ ಕೊನೆಯ ಬಾರಿಗೆ ನೋವು ಕೊಡುತ್ತಿದ್ದೇನೆ. ಶಾಲೆಯ ಶಿಕ್ಷಕರು ಈಗ ಇರೋದೇ ಹೀಗೆ, ನಾನೇನು ಹೇಳಲಿ?)” ಎಂದು ಬರೆಯಲಾಗಿದೆ. ತನ್ನ ದೇಹದ ಅಂಗಾಂಗಗಳು ಸರಿಯಾಗಿದ್ದರೆ, ಅವಶ್ಯಕತೆ ಇರುವವರಿಗೆ ದಾನ ಮಾಡಿ ಎಂದು ಸಹ ಆತ ಮನವಿ ಮಾಡಿಕೊಂಡಿದ್ದಾನೆ. ಅಲ್ಲದೆ, ಶಾಲೆಯ ಪ್ರಾಂಶುಪಾಲರು ಹಾಗೂ ಇಬ್ಬರು ಶಿಕ್ಷಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ಇದರಿಂದ ಬೇರೆ ಯಾವುದೇ ಮಗುವಿಗೆ ಇಂತಹ ಪರಿಸ್ಥಿತಿ ಬಾರದಿರಲಿ ಎಂಬುದು ನನ್ನ ಕೊನೆಯ ಆಸೆ ಎಂದು ಬರೆದಿದ್ದಾನೆ.
ತಂದೆಯ ಆರೋಪಗಳು
ಮಂಗಳವಾರ ಬೆಳಗ್ಗೆ ಶಾಲೆಗೆ ಹೋದ ಮಗ, ಮಧ್ಯಾಹ್ನ ರಾಜೇಂದ್ರ ಪ್ಲೇಸ್ ಮೆಟ್ರೋ ನಿಲ್ದಾಣದ ಬಳಿ ಗಾಯಗೊಂಡು ಬಿದ್ದಿರುವ ಬಗ್ಗೆ ತಂದೆಗೆ ಕರೆ ಬಂದಿದೆ . ಅವರು ಆಸ್ಪತ್ರೆಗೆ ತಲುಪುವಷ್ಟರಲ್ಲಿ ಬಾಲಕ ಮೃತಪಟ್ಟಿದ್ದ. ಕಳೆದ ನಾಲ್ಕು ದಿನಗಳಿಂದ ಶಿಕ್ಷಕರೊಬ್ಬರು ಶಾಲೆಯಿಂದ ಹೊರಹಾಕಿ ವರ್ಗಾವಣೆ ಪ್ರಮಾಣಪತ್ರ ನೀಡುವುದಾಗಿ ಬೆದರಿಕೆ ಹಾಕುತ್ತಿದ್ದರು ಎಂದು ತಂದೆ ಆರೋಪಿಸಿದ್ದಾರೆ. ನಾಟಕ ತರಗತಿಯ ವೇಳೆ, ಮಗ ಕೆಳಗೆ ಬಿದ್ದಾಗ ಶಿಕ್ಷಕಿಯೊಬ್ಬರು ಅವನನ್ನು ನಿಂದಿಸಿ, ಅಳುತ್ತಿದ್ದರೂ ಗೇಲಿ ಮಾಡಿದ್ದರು. ಈ ವೇಳೆ ಅಲ್ಲೇ ಇದ್ದ ಪ್ರಾಂಶುಪಾಲರು ಕೂಡ ಏನೂ ಕ್ರಮ ಕೈಗೊಂಡಿರಲಿಲ್ಲ ಎಂದು ತಂದೆ ದೂರಿನಲ್ಲಿ ತಿಳಿಸಿದ್ದಾರೆ.
ಪರೀಕ್ಷೆಗಾಗಿ ಮೌನವಾಗಿದ್ದ ಕುಟುಂಬ
ಕೆಲವೇ ತಿಂಗಳುಗಳಲ್ಲಿ 10ನೇ ತರಗತಿ ಪರೀಕ್ಷೆಗಳು ಇದ್ದ ಕಾರಣ ಈ ವಿಚಾರದಲ್ಲಿ ಯಾವುದೇ ಕ್ರಮ ಕೈಗೊಳ್ಳಲು ಕುಟುಂಬ ಹಿಂಜರಿದಿತ್ತು. “ಶಾಲೆಯಿಂದ 20 ಇಂಟರ್ನಲ್ ಅಂಕಗಳು ಬರುವುದರಿಂದ ನಾವು ವಿವಾದ ಸೃಷ್ಟಿಸುವುದು ಬೇಡ ಎಂದು ಸುಮ್ಮನಿದ್ದೆವು. ಅವನ ಕಲಿಕೆಗೆ ಯಾವುದೇ ತೊಂದರೆ ಕೊಡಲು ನಮಗೆ ಇಷ್ಟಪಡಲಿಲ್ಲ,” ಎಂದು ಮೃತ ಬಾಲಕನ ತಂದೆ ಹೇಳಿದ್ದಾರೆ. ತನ್ನ ಅಣ್ಣ ಮತ್ತು ತಂದೆಯ ಬಳಿ ಕ್ಷಮೆ ಕೋರಿರುವ ಬಾಲಕ, ತಾಯಿಗೆ ಧನ್ಯವಾದ ಹೇಳಿದ್ದಾನೆ. “ನನ್ನನ್ನು ಕ್ಷಮಿಸಿ, ಆದರೆ ಶಿಕ್ಷಕರು ನನ್ನೊಂದಿಗೆ ಈ ರೀತಿ ವರ್ತಿಸಿದ್ದಾರೆ” ಎಂದು ಹೇಳುವ ಮೂಲಕ ಡೆತ್ ನೋಟ್ ಕೊನೆಗೊಳ್ಳುತ್ತದೆ.
ಇದನ್ನೂ ಓದಿ: ಮಸೂದೆಗಳಿಗೆ ಒಪ್ಪಿಗೆ ನೀಡಲು ರಾಜ್ಯಪಾಲರಿಗೆ ಕಾಲಮಿತಿ ಇಲ್ಲ, ಆದರೆ ‘ವಿಳಂಬ’ ಸಲ್ಲ : ಸುಪ್ರೀಂ ಕೋರ್ಟ್


















