ಬೆಂಗಳೂರು : ಫಿಲಂ ಚೇಂಬರ್ ವಿರುದ್ಧ ಕರವೇ ಆಕ್ರೋಶ ವ್ಯಕ್ತಪಡಿಸಿದೆ. ಸೋನು ನಿಗಮ್ ಅವರಿಗೆ ನಿಷೇಧ ಹೇರಿರುವುದನ್ನು ವಾಪಾಸ್ ಪಡೆದಿರುವ ಫಿಲಂ ಚೇಂಬರ್ ಅಧ್ಯಕ್ಷರ ವಿರುದ್ಧ ಕರವೇ ಸಿಡಿದೆದ್ದಿದ್ದು, ಕನ್ನಡಕ್ಕೆ ಅಪಮಾನ ಮಾಡಿದವನಿಗೆ ಕ್ಷಮೆ ಕೊಟ್ಟವರು ಯಾರು ? ಎಂದು ಕಿಡಿ ಕಾರಿದೆ.
ಯಾವುದೇ ಕಾರಣಕ್ಕೂ ಸೋನು ನಿಗಮ್ ಹಾಡು ಹಾಡಿರುವ ಚಿತ್ರ ಬಿಡುಗಡೆ ಮಾಡುವುದಕ್ಕೆ ಬಿಡುವುದಿಲ್ಲವೆಂದು ಸವಾಲು ಎಸೆದಿದ್ದಲ್ಲದೇ, ಸೋನು ನಿಗಮ್ ನ ಕ್ಷಮಿಸುವುದಕ್ಕೆ ನೀವು ಯಾರು? ಅವರ ಮೇಲೆ ನಿರ್ಬಂಧ ಹೇರಿದ್ದು ಕನ್ನಡಿಗರು. ಅದನ್ನು ತೆರವು ಮಾಡುವುದಕ್ಕೆ ನೀವು ಯಾರು ? ಕೆಲಸಕ್ಕೆ ಬಾರದ ವಾಣಿಜ್ಯ ಮಂಡಳಿಗೆ ನಾಚಿಕೆ, ಮಾನ ಮರ್ಯಾದೆ ಇಲ್ವಾ ? ನಿಮ್ಮದು ವಾಣಿಜ್ಯ ಮಂಡಳಿ ಅಲ್ಲ,,, ವ್ಯಾಪಾರ ಮಂಡಳಿ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ಕರವೇ ನಾರಾಯಣ ಗೌಡ ಬಣ, ಫಿಲಂ ಚೇಂಬರ್ ಸೋನು ನಿಗಮ್ ವಿಚಾರದಲ್ಲಿ ತೆಗೆದುಕೊಂಡ ನಿರ್ಧಾರದ ವಿರುದ್ಧ ಆಕ್ರೋಶ ಹೊರಹಾಕಿದೆ. ಅಷ್ಟಲ್ಲದೇ, ಕರವೇ ಬೆಂಗಳೂರು ಜಿಲ್ಲಾ ಅಧ್ಯಕ್ಷ ಧರ್ಮರಾಜ್ ಕೂಡ ತೀವ್ರ ಆಕ್ರೋಶ ಹೊರ ಹಾಕಿದೆ.
ಪೆಹಲ್ಗಾಮ್ ದಾಳಿಗೆ ಕನ್ನಡಿಗರನ್ನ ಹೋಲಿಸಿ ಕನ್ನಡಿಗರ ಭಾವನೆಗೆ ಧಕ್ಕೆ ತಂದಿದ್ದ ಸೋನು ನಿಗಮ್ ಅವರನ್ನು ಚಂದನವದಿಂದ ಬಹಿಷ್ಕರಿಸಬೇಕು ಎಂಬ ಬಲವಾದ ಒತ್ತಾಯ ಕೇಳಿಬಂದ ಹಿನ್ನೆಲೆಯಲ್ಲಿ ಫಿಲಂ ಚೇಂಬರ್ ಅವರಿಗೆ ನಿಷೇಧ ಹೇರಿತ್ತು ಮಾತ್ರವಲ್ಲದೇ, ಕನ್ನಡಿಗರ ಕ್ಷಮೆಯಾಚಿಸಬೇಕು ಎಂದು ತಾಕೀತು ಮಾಡಿತ್ತು. ಕೆಲವು ದಿನಗಳ ಬಳಿಕ ಕನ್ನಡಿಗರ ಕ್ಷಮೆಯಾಚಿಸಿದ ಹಿನ್ನೆಲೆಯಲ್ಲಿ ಸೋನು ನಿಗಮ್ ಅವರನ್ನು ಚಂದನವನದ ಸಿನೆಮಾಗಳಲ್ಲಿ ಬಳಸಿಕೊಳ್ಳಬಹುದು ಎಂದು ಹೇಳಿತ್ತು. ಇದಕ್ಕೆ ಕರವೇ ತೀವ್ರ ಆಕ್ರೋಶ ಹೊರಹಾಕಿದೆ.


















