ಕುಂದಾಪುರ/ಉಡುಪಿ : ಕುಂದಾಪುರ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಸಂಸದರು ಮತ್ತು ಕುಂದಾಪುರ ಶಾಸಕರು ಗ್ರಾಮ ಪಂಚಾಯತುಗಳಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕಗಳ ಬಗ್ಗೆ ಸಭೆ ಕರೆದಿರುವುದು ಅತ್ಯಂತ ಸ್ವಾಗತಾರ್ಹ. ಆದರೆ ಘನ ತ್ಯಾಜ್ಯ ವಿಲೇವಾರಿ ಮಾಡುವಾಗ ಹಸಿಕಸ ಹಾಗೂ ಒಣಕಸ ವಿಲೆಯನ್ನು ಹೆಚ್ಚಿನ ಎಲ್ಲಾ ಗ್ರಾಮ ಪಂಚಾಯತುಗಳು ಸಾರ್ವಜನಿಕರಲ್ಲಿ ಜಾಗೃತಗೊಳಿಸುವುದರ ಮೂಲಕ ಕಸ ವಿಲೇವಾರಿಯನ್ನು ಕ್ರಮಬದ್ದವಾಗಿ ಹಾಗೂ ಯಶಸ್ವಿಯಾಗಿ ನಡೆಸುತ್ತಿವೆ. ಆದರೆ ಸಂಸದರ ಹಾಗೂ ಶಾಸಕರ ಸಭೆಯಲ್ಲಿ ಗ್ರಾಮ ಪಂಚಾಯತುಗಳಲ್ಲಿ ಎಸ್ ಎಲ್ ಆರ್ ಎಂ ಘಟಕ ಸ್ಥಾಪನೆಗೆ ಇರುವ ಸ್ಥಳದ ಸಮಸ್ಯೆಗಳು ಹೆಚ್ಚಿನ ಗ್ರಾಮ ಪಂಚಾಯತುಗಳಲ್ಲಿ ಇತ್ಯರ್ಥವಾಗಿದೆ ಎನ್ನುವುದು ಅವರ ಮಾಹಿತಿಯ ಕೊರತೆಯಿಂದ ಇರಬಹುದು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರೆ ಕೆ. ವಿಕಾಸ್ ಹೆಗ್ಡೆ ಹೇಳಿದ್ದಾರೆ.
ಇಂದಿಗೂ ಹಲವು ಗ್ರಾಮ ಪಂಚಾಯತುಗಳಲ್ಲಿ, ವಿಶೇಷವಾಗಿ ಕರಾವಳಿ ಭಾಗದ ಹೆಚ್ಚಿನ ಗ್ರಾಮ ಪಂಚಾಯತುಗಳಲ್ಲಿ ಎಸ್ ಎಲ್ ಆರ್ ಎಂ ಘಟಕ ನಿರ್ಮಾಣಕ್ಕೆ ಸ್ಥಳದ ಸಮಸ್ಯೆಯಿದೆ, ಇನ್ನು ಪುರಸಭೆಯವರು ಕಂದಾವರ ಗ್ರಾಮದಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ ಮಾಡಿದ್ದಾರೆ ಆದರೆ ಇವರು ಸುತ್ತಮುತ್ತಲಿನ ಗ್ರಾಮ ಪಂಚಾಯತುಗಳಿಗೆ ಅಲ್ಲಿ ಕಸ ಹಾಕಲು ಬಿಡುವುದಿಲ್ಲ. ಸಂಸದರು ಹಾಗೂ ಶಾಸಕರು ತ್ಯಾಜ್ಯ ವಿಲೆಯಲ್ಲಿ ಸಮಸ್ಯೆ ಆದರೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ಹೊಣೆ ಮಾಡುತ್ತೇವೆ ಎನ್ನುವುದು ಸರಿಯಲ್ಲ, ತ್ಯಾಜ್ಯ ವಿಲೆಗೆ ಅಗತ್ಯವಿರುವ ಸ್ಥಳದ ಸಮಸ್ಯೆಯನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಂದ ಪರಿಹರಿಸಲು ಸಾಧ್ಯವಿಲ್ಲ ಈ ಸಮಸ್ಯೆಯನ್ನು ಸಂಸದರು ಹಾಗೂ ಶಾಸಕರು ವಿಶೇಷ ಮುತುವರ್ಜಿವಹಿಸಿ ಬಗೆ ಹರಿಸುವುದು ಉತ್ತಮವೆಂದು ಅವರು ಪತ್ರಿಕಾ ಹೇಳಿಕೆ ಮೂಲಕ ಆಗ್ರಹಿಸಿದ್ದಾರೆ.