ರಾಯಚೂರು: ನಾಲ್ವರು ಬಾಣಂತಿಯರ ಸಾವಿನ ಪ್ರಕರಣ ವರದಿಯಾಗಿದ್ದ ಸಿಂಧನೂರು ತಾಲೂಕು ಆಸ್ಪತ್ರೆಯಲ್ಲಿ ಬಾಣಂತಿಯರಿಗೆ ನೀಡಿದ್ದ IV ರಿಂಗರ್ ಲ್ಯಾಕ್ಟೇಟ್ ದ್ರಾವಣವನ್ನು ಪರೀಕ್ಷೆಗೆ ಒಳಪಡಿಸಿದ್ದು, ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
IV ರಿಂಗರ್ ಲ್ಯಾಕ್ಟೇಟ್ ದ್ರಾವಣದಲ್ಲಿನ ಎಂಡೋ ಟಾಕ್ಸಿನ್ ಎಂಬ ಅಂಶ ಬಳಕೆಗೆ ಯೋಗ್ಯವಲ್ಲ (ನೆಗೆಟಿವ್) ಎಂಬುವುದು ಬೆಂಗಳೂರು ಮತ್ತು ಹೈದರಾಬಾದ್ನ ಲ್ಯಾಬ್ ಗಳ ವರದಿಯಿಂದ ಬಹಿರಂಗವಾಗಿದೆ. ರಾಯಚೂರು ಜಿಲ್ಲಾಡಳಿತ ಒಟ್ಟು ಮೂರು ಲ್ಯಾಬ್ಗಳಿಗೆ ತಲಾ 6 IV ರಿಂಗರ್ ಲ್ಯಾಕ್ಟೇಟ್ ದ್ರಾವಣ ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಿತ್ತು. ಬೆಂಗಳೂರಿನ ವೈದ್ಯಕೀಯ ಕಾಲೇಜು ನೀಡಿದ ವರದಿಯಲ್ಲಿ 6 ಸ್ಯಾಂಪಲ್ ಪೈಕಿ 4 ಸ್ಯಾಂಪಲ್ಗಳು ಉಪಯೋಗಕ್ಕೆ ಯೋಗ್ಯವಲ್ಲ, ಎರಡು ಉಪಯೋಗಕ್ಕೆ ಯೋಗ್ಯವಾಗಿವೆ ಎಂದು ತಿಳಿದು ಬಂದಿದೆ.
ಹೈದರಾಬಾದ್ನ ವಿಂಪ್ಟಾ ಲ್ಯಾಬ್ ವರದಿಯಲ್ಲಿ 6 ಸ್ಯಾಂಪಲ್ ಪೈಕಿ, ನಾಲ್ಕು ಉಪಯೋಗಕ್ಕೆ ಯೋಗ್ಯವಿದ್ದು, ಎರಡು ಯೋಗ್ಯವಲ್ಲ ಎಂದು ವರದಿ ಬಂದಿದೆ. ಈಗ ಸರ್ಕಾರದ ಡ್ರಗ್ ಕಂಟ್ರೋಲ್ ಲ್ಯಾಬ್ನ ವರದಿ ಮಾತ್ರ ಬಾಕಿ ಇದೆ. ರಾಯಚೂರು ಜಿಲ್ಲೆಯಲ್ಲಿ ಕಳೆದ 3 ತಿಂಗಳಲ್ಲಿ 10 ಬಾಣಂತಿಯರು ಸಾವನ್ನಪ್ಪಿದ್ದಾರೆ. ಆದರೆ, ಸಿಂಧನೂರು ಆಸ್ಪತ್ರೆ.ಯಲ್ಲೇ ನಾಲ್ವರು ಬಾಣಂತಿಯರು ಸಾವನ್ನಪ್ಪಿದ್ದಾರೆ.
ಸಿಂಧನೂರು ತಾಲೂಕು ಆಸ್ಪತ್ರೆಗೆ ಅಕ್ಟೋಬರ್ ತಿಂಗಳಲ್ಲಿ ದಾಖಲಾಗಿದ್ದ ನಾಲ್ವರು ಬಾಣಂತಿಯರು ಸಿಸೇರಿಯನ್ ನಂತರ ಸಾವನ್ನಪ್ಪಿದ್ದಾರೆ. ಬಳ್ಳಾರಿ, ರಾಯಚೂರು, ಬೆಳಗಾವಿ ಮತ್ತು ಹುಬ್ಬಳ್ಳಿಯಲ್ಲಿನ ಬಾಣಂತಿಯರ ಸಾವಿನ ಸಂಖ್ಯೆ ಬೆಳಕಿಗೆ ಬರುತ್ತಿದ್ದಂತೆ ಆರೋಗ್ಯ ಇಲಾಖೆ ತನಿಖೆ ನಡೆಸುತ್ತಿದೆ. ಆದರೆ, IV ರಿಂಗರ್ ಲ್ಯಾಕ್ಟೇಟ್ ದ್ರಾವಣ ಕಾರಣ ಎಂದು ತಿಳಿದು ಬಂದಿದ್ದು, ಸರ್ಕಾರ ಯಾವ ಕ್ರಮ ಕೈಗ1ಳ್ಳಲಿದೆ ಎಂಬುವುದನ್ನು ಕಾಯ್ದು ನೋಡಬೇಕಿದೆ.