ಬೆಂಗಳೂರು: ನಗರದಲ್ಲಿ ಸ್ವಚ್ಛತಾ ಕಾರ್ಯಗಳ ಗುಣಮಟ್ಟವನ್ನು ಹೆಚ್ಚಿಸಲು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತೆ ನಗರದ ವಿವಿಧ ವಾರ್ಡ್ ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಆಟೋ ಟಿಪ್ಪರ್ ವಾಹನಗಳ ಮಸ್ಟರಿಂಗ್ ಸಮಯವನ್ನು ಪರಿಷ್ಕರಿಸಲಾಗಿದೆ.
ಈ ಹಿಂದೆ ಬೆಳಿಗ್ಗೆ 6 ರಿಂದ 7:30 ರವರೆಗೆ ಘನತಾಜ್ಯ ಸಂಗ್ರಹಣೆ ಮಾಡಲಾಗುತ್ತಿತ್ತು. ಆದರೆ ಈಗ ಒಂದು ಗಂಟೆ ಮುಂಚಿತಗೊಳಿಸುವ ಮೂಲಕ ತ್ಯಾಜ್ಯ ಸಂಗ್ರಹಣೆಯನ್ನು ಜನರ ದೈನಂದಿನ ಕಾರ್ಯವೈಖರಿಯ ಜೊತೆಗೆ ಹೊಂದುವಂತೆ ಕ್ರಮ ಕೈಗೊಳ್ಳಲಾಗಿದೆ.
ಈ ಬದಲಾವಣೆಯ ಮೂಲಕ ನಿವಾಸಿಗಳು ಕೆಲಸಕ್ಕೆ ಹೊರಡುವ ಮೊದಲು ತ್ಯಾಜ್ಯವನ್ನು ನೀಡಲು ಅನುಕೂಲವಾಗುವುದರ ಜೊತೆಗೆ, ಸಾರ್ವಜನಿಕರಿಂದ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವ ಪ್ರಕರಣಗಳನ್ನು ತಡೆಗಟ್ಟಲಾಗುವುದು.
ಈ ಕ್ರಮವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೆ ತರಲು ಸಾರ್ವಜನಿಕರ ಸಹಕಾರವನ್ನು ನೀಡುವಂತೆ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾದ ಕರೀಗೌಡ ರವರು ಕೋರಿದ್ದಾರೆ.



















