ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಸೈನಿಕರ ಸ್ಥಿತಿ ಹದಗೆಟ್ಟು ಹೋಗಿದೆ. ಬಲೂಚಿಸ್ತಾನ, ಕರಾಚಿ ಸೇರಿ ಹಲವೆಡೆ ಉಗ್ರರು ಸೈನಿಕರನ್ನೇ ಗುರಿಯಾಗಿಸಿ ದಾಳಿ ಮಾಡುತ್ತಿರುವ ಕಾರಣ ಸೈನಿಕರು ಸಾಮೂಹಿಕವಾಗಿ ಸೇನೆಯನ್ನು ತೊರೆಯುತ್ತಿದ್ದಾರೆ. ಇದರ ಬೆನ್ನಲ್ಲೇ, ಪಾಕಿಸ್ತಾನ ಸೇನಾ ಮುಖ್ಯಸ್ಥ (Pakistan Army Chief) ಜನರಲ್ ಆಸಿಂ ಮುನೀರ್ (Asim Munir) ವಿರುದ್ಧವೇ ಕಿರಿಯ ಸೇನಾಧಿಕಾರಿಗಳು ದಂಗೆಯೆದ್ದಿದ್ದಾರೆ. ಇದರೊಂದಿಗೆ ಪಾಕ್ ಸೇನೆಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಬಯಲಾದಂತಾಗಿದೆ.
ಆಸಿಂ ಮುನೀರ್ ವಿರುದ್ಧ ಕಿರಿಯ ಸೈನಿಕರು ಬಂಡಾಯವೆದ್ದಿದ್ದು, ಕರ್ನಲ್ ಗಳು, ಮೇಜರ್ ಗಳು, ಕ್ಯಾಪ್ಟನ್ ಗಳು ಹಾಗೂ ಸೈನಿಕರು ಸೇನಾ ಮುಖ್ಯಸ್ಥನ ವಿರುದ್ಧವೇ ಪತ್ರ ಬರೆದಿದ್ದಾರೆ. “ಜನರಲ್ ಆಸಿಂ ಮುನೀರ್ ಅವರ ನಾಯಕತ್ವವು ವಿಫಲವಾಗಿದೆ. ಅವರ ನಾಯಕತ್ವದಲ್ಲಿ ಸೇನೆಯಲ್ಲಿ ಕೆಲಸ ಮಾಡಲು ನಮಗೆ ಇಷ್ಟವಿಲ್ಲ. ಹಾಗಾಗಿ, ಕೂಡಲೆ ಆಸಿಂ ಮುನೀರ್ ಅವರು ರಾಜೀನಾಮೆ ನೀಡಿ ಹೊರಡಬೇಕು. ಇಲ್ಲದಿದ್ದರೆ ಅವರು ಪರಿಣಾಮ ಎದುರಿಸಬೇಕಾಗುತ್ತದೆ” ಎಂಬುದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿದುಬಂದಿದೆ.
“ಸೇನೆಯಲ್ಲಿ ಆಸಿಂ ಮುನೀರ್ ಅವರು ರಾಜಕೀಯ ಮಾಡುತ್ತಿದ್ದಾರೆ. ಸ್ವಹಿತಾಸಕ್ತಿಯಿಂದ ಸೇನೆಯಲ್ಲಿ ಒಗ್ಗಟ್ಟು ಹಾಳಾಗುತ್ತಿದೆ. 1971ರಲ್ಲಿ ಸೇನೆಯಲ್ಲಿ ಉಂಟಾಗಿದ್ದ ಪರಿಸ್ಥಿತಿಯೇ ಈಗ ಉಂಟಾಗಿದೆ. 1971ರಲ್ಲಿ ಬೀರಿದ ಪರಿಣಾಮಗಳೇ ಈಗ ಬೀರಲು ನಾವು ಬಿಡುವುದಿಲ್ಲ. ಕೂಡಲೇ ಆಸಿಂ ಮುನೀರ್ ರಾಜೀನಾಮೆ ನೀಡಬೇಕು. ಇದು ನಿಮಗೆ ನಾವು ನೀಡುತ್ತಿರುವ ಮನವಿ ಪತ್ರವಲ್ಲ. ನಿಮ್ಮ ಜತೆ ನಾವು ಸಂಧಾನವನ್ನೂ ಮಾಡಿಕೊಳ್ಳುವುದಿಲ್ಲ. ನೀವು ರಾಜೀನಾಮೆ ನೀಡದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ” ಎಂದು ಕಿರಿಯ ಸೇನಾಧಿಕಾರಿಗಳು ಎಚ್ಚರಿಸಿದ್ದಾರೆ.
ಪಾಕಿಸ್ತಾನವು ಆರ್ಥಿಕವಾಗಿ ದಿವಾಳಿಯಾಗುತ್ತಿದೆ. ಅಸಮರ್ಥ ನಾಯಕತ್ವ , ಭಯೋತ್ಪಾದಕರ ಪಾಲನೆ-ಪೋಷಣೆಯಿಂದಾಗಿ ಪಾಕ್ ಅರಾಜಕತೆಯ ಮಡುವಿನಲ್ಲಿ ಸಿಲುಕಿದೆ. ಹಾಗೆ ನೋಡಿದರೆ, ಪಾಕಿಸ್ತಾನದಲ್ಲಿ ಸರ್ಕಾರಕ್ಕಿಂತ ಸೇನೆಯೇ ಬಲಿಷ್ಠವಾಗಿರುತ್ತಿದೆ. ಆದರೀಗ, ಸೇನೆಯಲ್ಲಿಯೇ ಮುಖ್ಯಸ್ಥನ ವಿರುದ್ಧ ಯೋಧರು ಬಂಡಾಯ ಎದ್ದಿದ್ದು, ಮತ್ತೊಂದು ಕ್ಷಿಪ್ರಕ್ರಾಂತಿ ಉಂಟಾದರೂ ಅಚ್ಚರಿ ಇಲ್ಲ ಎಂದು ಹೇಳಲಾಗುತ್ತಿದೆ.