ಉಜಿರೆ: ದೇಶದ ಅಸ್ತಿತ್ವ ಮತ್ತು ಮುಂದಿನ ಭವಿಷ್ಯದ ಸವಾಲುಗಳ ಬಗ್ಗೆ ಸಾಹಿತ್ಯ ಕೃತಿಗಳ ಮೂಲಕ ಸಮಾಜವನ್ನು ಜಾಗೃತಿಗೊಳಿಸಬೇಕು ಎಂದು ಹಿರಿಯ ಸಾಹಿತಿ ಪ್ರೊ. ಪ್ರೇಮಶೇಖರ ಹೇಳಿದ್ದಾರೆ.
ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವದ ಅಂಗವಾಗಿ ನಡೆದ ಸಾಹಿತ್ಯ ಸಮ್ಮೇಳನದ 93ನೇ ಅಧಿವೇಶನವನ್ನು ಉದ್ಘಾಟಿಸಿ ಮಾತನಾಡಿದ ಪ್ರೊ. ಪ್ರೇಮಶೇಖರ, ಇತ್ತೀಚೆಗೆ ಸಾಹಿತಿಗಳು ಬದುಕಿನ ವಾಸ್ತವದ ಬಗ್ಗೆ ಸಾಹಿತ್ಯ ಕೃತಿಗಳಲ್ಲಿ ಪ್ರತಿಬಿಂಬಿಸುವುದಿಲ್ಲ. ಏನು ನಡೆಯುತ್ತದೆಯೋ ಅದಕ್ಕೆ ವಿರುದ್ಧವಾಗಿ ಬರೆಯುತ್ತಾರೆ. ಬಹುಮಾನಕ್ಕಾಗಿ.ಕೀರ್ತಿಗಾಗಿ ಹಾಗೂ ಹಣ ಸಂಪಾದನೆಗಾಗಿ ಸಾಹಿತ್ಯಗಳನ್ನು ಬರೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರತಿದಿನ ಹೊಸವಿಚಾರ, ಹೊಸ ಪಾತ್ರಗಳು, ಹೊಸ ಸನ್ನಿವೇಶಗಳು ದೊರಕಿದಾಗ ಪರಕಾಯ ಪ್ರವೇಶ ಮಾಡಿ ಸಾಹಿತ್ಯ ಕೃತಿಗಳನ್ನು ಸಮಾಜದ ಪ್ರಗತಿಗಾಗಿ ಪ್ರೀತಿಯಿಂದ ಬರೆಯಬೇಕು. ಆಗ ಮಾತ್ರ ಸಾಹಿತಿಗಳು ಮಾನಸಿಕವಾಗಿ ಸದಾ ಚೈತನ್ಯಶೀಲರಾಗುತ್ತಾರೆ. ಕೇವಲ ಪ್ರೀತಿ, ಪ್ರೇಮ ಅಲ್ಲದೇ ಬದುಕಿನ ಸೋಲು. ಸವಾಲುಗಳು, ಅವಹೇಳನ, ಆತಂಕಗಳ ಬಗ್ಗೆಯೂ ಸಾಹಿತ್ಯ ರಚನೆ ಮಾಡಬೇಕು ಎಂದು ತಿಳಿಸಿದ್ದಾರೆ.
ಇಂದು ಮುದ್ರಣ ಕ್ಷೇ ತ್ರದಲ್ಲಿ ಕ್ರಾಂತಿಕಾರಿ ಸುಧಾರಣೆ ಹಾಗೂ ಆಧುನೀಕರಣದಿಂದಾಗಿ ಹೆಚ್ಚು ಕೃತಿಗಳು ಪ್ರಕಟವಾಗುತ್ತಿವೆ. ಇಂದು ಕಾದಂಬರಿ ಓದುವವರ ಸಂಖ್ಯೆ ಕಡಿಮೆಯಾಗಿದೆ. ಆದರೆ, ಕಥೆ ಬರೆಯುವವರ ಸಂಖ್ಯೆ ಮತ್ತು ಓದುವವರ ಸಂಖ್ಯೆ ಹೆಚ್ಚಾಗಿದೆ. ಕಥಾ ಸಾಹಿತ್ಯ ಅರ್ಥ ಪೂರ್ಣವಾಗಿ ಬೆಳೆಯುತ್ತಿದೆ. ಹೃದಯದಿಂದ, ಪ್ರೀತಿಯಿಂದ ಬಂದ ಆಲೋಚನೆಗಳನ್ನು ಬಳಸಿ ಉತ್ತಮ ಕಥೆಗಳನ್ನು ಬರೆಯಬಹುದು ಎಂದು ಸಲಹೆ ನೀ ಡಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ವವಾಣಿ ಪತ್ರಿಕೆಯ ಪ್ರಧಾನ ಸಂಪಾದಕ ವಿಶ್ವೇ ಶ್ವರ ಭಟ್ ಮಾತನಾಡಿ, ಕನ್ನಡ ಬೆಳೆಸಬೇಕಾದರೆ, ಕನ್ನಡ ಬಳಸಬೇಕು. ಕನ್ನಡಕ್ಕೆ ಸ್ವಂತ ಲಿಪಿ ಇದ್ದು, ಎಲ್ಲಾ ದೃಷ್ಟಿಯಿಂದಲೂ ಕನ್ನಡ ಅತ್ಯಂತ ಪರಿಪೂರ್ಣ, ಸಮೃದ್ಧ ಹಾಗೂ ಸುಂದರ ಭಾಷೆಯಾಗಿದೆ. ಆದರೆ, ಕನ್ನಡಕ್ಕೆ ದೊಡ್ಡ ಸವಾಲು ಭಾಷೆ. ಕನ್ನಡ ಉಳಿಸಬೇಕಾದರೆ ಭಾಷಾ ಶುದ್ಧಿಯೊಂದಿಗೆ ಮನೆಯಲ್ಲಿ ಹಾಗೂ ವ್ಯವಹಾರದಲ್ಲಿ ನಿತ್ಯವೂ ಶುದ್ಧ ಕನ್ನಡ ಬಳಸಬೇಕು. ಭಾಷೆ ಸ್ವಚ್ಛವಾಗಿದ್ದರೆ ಸಾಹಿತ್ಯವೂ ಸ್ವಚ್ಛವಾಗಿರುತ್ತದೆ ಎಂದಿದ್ದಾರೆ.
ಸಾಹಿತ್ಯ ಮತ್ತು ಜೀವನಕ್ಕೆ ಅವಿನಾಭಾವ ಸಂಬಂಧವಿದ್ದು ಸರ್ವರ ಹಿತವನ್ನು ಬಯಸುವ ಸಾಹಿತ್ಯ ಸಾತ್ವಿಕವಾದ ಸಭ್ಯ ಸುಸಂ ಸ್ಕೃತ ಸಮಾಜವನ್ನು ನಿರ್ಮಾಣ ಮಾಡುತ್ತದೆ ಎಂದು ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ವೀರೇಂದ್ರ ಹೆಗ್ಗಡೆ ರಾಮಾಯಣ ಮಹಾಭಾರತಗಳಿಂದ ಹಿಡಿದು ಆಧುನಿಕ ಸಾಹಿತ್ಯದ ತನಕ ಸಾಹಿತ್ಯವು ಆದರ್ಶ ಜೀವನವನ್ನು ರೂಪಿಸುತ್ತಾ ಬಂದಿದೆ. ಪುರಾಣಕಥೆಗಳು ಧಾರ್ಮಿಕ ಕಥೆಗಳು ಮಾನವನ ಮೇಲೆ ಗಾಢ ಪರಿಣಾಮ ಬೀರಿ ಸನ್ಮಾರ್ಗದಲ್ಲಿ ನಡೆಯಲು ಪ್ರೇರಣೆ ನೀಡುತ್ತವೆ. ಸಾಹಿತ್ಯವು ವಿವಿಧತೆಯಲ್ಲಿ ಏಕತೆಯನ್ನು ಸಾರುತ್ತದೆ. ಇಂದಿನ ಆಧುನಿಕ ಶಿಕ್ಷಣ ಪದ್ಧತಿಯಲ್ಲಿ ಸಾಹಿತ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ತಿಳಿಸಿದ್ದಾರೆ.
ಸಭ್ಯ ಸುಸಂಸ್ಕೃತ ಆರೋಗ್ಯ ಪೂರ್ಣ ಸಮಾಜ ನಿರ್ಮಾಣದಲ್ಲಿ ಸಾಹಿತ್ಯ ಪ್ರಮುಖ ಪಾತ್ರ ವಹಿಸುತ್ತದೆ. ಸರ್ವರ ಹಿತವನ್ನು ಬಯಸುವ ಸಾಹಿತ್ಯವೇ ಶ್ರೇಷ್ಠ ಸಾಹಿತ್ಯವಾಗಿದೆ. ಡಿಜಿಟಲ್ ಮಾಧ್ಯಮದ ಮೂಲಕ ಇಂದು ಅನೇ ಕ ಬರಹಗಾರರು ರೂಪುಗೊಳ್ಳುತ್ತಿದ್ದಾರೆ. ಅಂತರ್ಜಾಲದಲ್ಲಿ ಸಾಹಿತ್ಯ ಕಲೆ ಸಂಗೀತದ ಬಗ್ಗೆ ನಿರಂತರ ಚರ್ಚೆಗಳು ನಡೆಯುತ್ತಿವೆ. ಆಧುನಿಕ ತಂತ್ರಜ್ಞಾನದ ಬಳಕೆ ಹೊಸ ಮನ್ವಂತರವನ್ನೇ ಸೃಷ್ಟಿಸಿದೆ. ಗ್ರಾಮೀಣ ಪ್ರದೇಶಗಳಲ್ಲಿ 2200 ಗ್ರಂಥಾಲಯಗಳನ್ನು ಆರಂಭಿಸಿ ಓದುವ ಹವ್ಯಾಸ ಬೆಳೆಸಲಾಗುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಅಂತಿಮ ಘಟ್ಟದಲ್ಲಿ ಧರ್ಮಸ್ಥಳ ಕೇಸ್ | ಬೆಳ್ತಂಗಡಿ ಕೋರ್ಟ್ಗೆ ವರದಿ ಸಲ್ಲಿಕೆಗೆ ಎಸ್ಐಟಿ ಸಜ್ಜು..!



















