ಬೆಂಗಳೂರು: ಇಂದು ಗಾನ ಗಂಧರ್ವ, ವರನಟ ಡಾ.ರಾಜಕುಮಾರ್ ಅವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ವಿನಯ್ ವಾಸುದೇವ್ ನಿರ್ದೇಶನದ “ದಿ” ಸಿನಿಮಾ ತಂಡ ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ಡಾ. ರಾಜಕುಮಾರ್ ಸ್ಮಾರಕದ ಬಳಿ ಅನ್ನದಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಮಾತನಾಡಿದ ನಿರ್ದೇಶಕ ಹಾಗೂ ನಾಯಕ ವಿನಯ್ ವಾಸುದೇವ್, ಡಾ. ರಾಜಕುಮಾರ್ ಅವರು ಆದರ್ಶ ವ್ಯಕ್ತಿ. ಅಂತಹ ಮೇರುನಟನ ಜನ್ಮದಿನದಂದು ನಮ್ಮ ಚಿತ್ರತಂಡದ ಸದಸ್ಯರೆಲ್ಲರೂ ಸೇರಿ ರಾಜಕುಮಾರ್ ಅವರ ಸ್ಮಾರಕದ ಬಳಿ ಅನ್ನದಾನ ಮಾಡುವ ಮೂಲಕ ರಾಜಕುಮಾರ್ ಅವರ ಆಶೀರ್ವಾದ ಪಡೆಯಲಾಗಿದೆ ಎಂದಿದ್ದಾರೆ. ಡಾಲಾ ಶರಣ್, ಅಭಯ್ ಗಣೇಶ್, ಸತೀಶ್ ಕುಮಾರ್ ಟಿ.ಎಲ್, ಛಾಯಾಗ್ರಾಹಕ ಅಲೆನ್ ಭರತ್ ಸೇರಿದಂತೆ ಹಲವರು ಇದ್ದರು.

ವಿ.ಡಿ.ಕೆ ಸಿನಿಮಾಸ್ ಲಾಂಛನದಲ್ಲಿ ನಿರ್ಮಾಣವಾಗಿರುವ “ದಿ” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿ ಬಿಡುಗಡೆಯ ಹಂತ ತಲುಪಿದೆ. ಅಲೆನ್ ಭರತ್ ಛಾಯಾಗ್ರಹಣ, ಯು.ಎಂ ಸ್ಟೀವನ್ ಸತೀಶ್ ಸಂಗೀತ ನಿರ್ದೇಶನ ಹಾಗೂ ಸಿದ್ದಾರ್ಥ್ ಆರ್ ನಾಯಕ್ ಅವರ ಸಂಕಲನವಿರುವ ಈ ಚಿತ್ರದ ತಾರಾಬಳಗದಲ್ಲಿ ವಿನಯ್ ವಾಸುದೇವ್, ದಿಶಾ ರಮೇಶ್, ಹರಿಣಿ ಶ್ರೀಕಾಂತ್, ನಾಗೇಂದ್ರ ಅರಸ್, ಬಲಾ ರಾಜವಾಡಿ, ಕಾಮಿಡಿ ಕಿಲಾಡಿ ಚಂದ್ರು, ಡಾಲಾ ಶರಣ್, ಕಲಾರತಿ ಮಹಾದೇವ ಮುಂತಾದವರಿದ್ದಾರೆ.



















