ಮೈಸೂರು: ಕಾನೂನು ಎಷ್ಟೇ ಕಠಿಣವಾಗಿದ್ದರೂ ಕೆಲವು ಅನಿಷ್ಠ ಪದ್ಧತಿಗಳು ಮಾತ್ರ ನಡೆಯುತ್ತಲೇ ಇವೆ. ಸಿಎಂ ತವರು ಜಿಲ್ಲೆಯಲ್ಲಿ ಸಾಮಾಜಿಕ ಬಹಿಷ್ಕಾರದ ಸಂಗತಿ ಬೆಳಕಿಗೆ ಬಂದಿದೆ.
ಸಿಎಂ ಸಿದ್ದರಾಮಯ್ಯ ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರ ವರುಣಾ ವ್ಯಾಪ್ತಿಯಲ್ಲಿ ಬರುವ ಸಿದ್ದರಾಮಯ್ಯಹುಂಡಿ ಗ್ರಾಮದ ಹತ್ತಿರದ ಶ್ರೀನಿವಾಸಪುರ ಗ್ರಾಮದಲ್ಲಿ ಕುಟುಂಬವೊಂದಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿರುವ ಘಟನೆಯ ಬಗ್ಗೆ ವರದಿಯಾಗಿದೆ.
ದಲಿತ ಸಮುದಾಯದ ಕುಟುಂಬಕ್ಕೆ ಗ್ರಾಮಸ್ಥರು ಬಹಿಷ್ಕಾರ ಹಾಕಿದ್ದಾರೆ. ಸುರೇಶ್ ಎಂಬವರ ಕುಟುಂಬಕ್ಕೆ ಗ್ರಾಮದ ಹಿರಿಯರಾದ ಚಿಕ್ಕಂಡಯ್ಯ, ಬಸವಯ್ಯ, ಮೋಟ ಮಹದೇವಯ್ಯ, ಗ್ರಾಪಂ ಮಾಜಿ ಸದಸ್ಯ ಮಹದೇವ್ ಬಹಿಷ್ಕಾರ ಹಾಕಿದ್ದಾರೆ ಎಂದು ತಿಳಿದು ಬಂದಿದೆ.
ಕಳೆದ ಕೆಲವು ವರ್ಷಗಳ ಹಿಂದೆ ರಂಗನಾಥಪುರ ಗ್ರಾಮದ ಪ್ರಮೋದ್ ಹಾಗೂ ಸುರೇಶ್ ಮಧ್ಯೆ ಗಲಾಟೆ ನಡೆದಿತ್ತು. ಹೀಗಾಗಿ ನ್ಯಾಯ ಪಂಚಾಯಿತಿ ಮಾಡಲಾಗಿತ್ತು. ಪ್ರಮೋದ್ ಕಡೆಯವರು ಸುರೇಶ್ ಮನೆಗೆ ನುಗ್ಗಿ ಗಲಾಟೆ ಮಾಡಿದ್ದಲ್ಲದೆ ಮನೆಯ ವಸ್ತುಗಳನ್ನು ಹಾಳು ಮಾಡಿದ್ದರು. ಈ ಕುರಿತು ನ್ಯಾಯ ಪಂಚಾಯಿತಿ ಮಾಡಿ ಇಬ್ಬರಿಗೂ ದಂಡ ಹಾಕಲಾಗಿತ್ತು. ಪ್ರಮೋದ್ ಗೆ 25 ಸಾವಿರ ಹಾಗೂ ಸುರೇಶ್ ಗೆ 15 ಸಾವಿರ ರೂ. ದಂಡ ಹಾಕಲಾಗಿತ್ತು.
ಆದರೆ, ಸುರೇಶ್ ದಂಡ ಪಾವತಿಸಿಲ್ಲ ಎಂದು ಬಹಿಷ್ಕಾರ ಹಾಕಲಾಗಿದೆ ಎಂದು ತಿಳಿದು ಬಂದಿದೆ. ಸುರೇಶ್ ಹಾಗೂ ಅವರ ತಾಯಿ ಮಹದೇವಮ್ಮ ಅವರನ್ನು ಹೊರಗಿಟ್ಟಿದ್ದಾರೆ ಎನ್ನಲಾಗಿದೆ. ಈ ಕುಟುಂಬದೊಂದಿಗೆ ಯಾರೇ ಸಂಪರ್ಕ ಸಾಧಿಸಿದರೂ 5 ಸಾವಿರ ರೂ. ದಂಡ ವಿಧಿಸಲಾಗುವುದು ಎಂದು ಹಿರಿಯರು ಹೇಳಿದ್ದಾರೆ ಎಂದು ತಿಳಿದು ಬಂದಿದೆ.