ಬೆಂಗಳೂರು: ಕನ್ನಡ ಸಾಹಿತ್ಯ ಲೋಕದಲ್ಲಿ ಹೊಸ ಸಂಚಲನ ಮೂಡಿಸುವ ಉದ್ದೇಶದಿಂದ, ‘ಸಮಾಜಮುಖಿ’ ಪತ್ರಿಕೆಯು 2025ರ ನವೆಂಬರ್ 8 ಮತ್ತು 9ರಂದು ಬೆಂಗಳೂರಿನಲ್ಲಿ ‘ಸಮಾಜಮುಖಿ ಸಾಹಿತ್ಯ ಸಮ್ಮೇಳನ’ವನ್ನು ಆಯೋಜಿಸಿದೆ. ನಗರದ ಅರಮನೆ ರಸ್ತೆಯಲ್ಲಿರುವ ಸ್ಕೌಟ್ಸ್ ಮತ್ತು ಗೈಡ್ಸ್ ಆವರಣದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಈ ಸಮ್ಮೇಳನವು, ಕನ್ನಡ ಸಾಹಿತ್ಯದ ಗಂಭೀರ ಚರ್ಚೆ, ವಿಮರ್ಶೆ ಮತ್ತು ಸಂವಾದಕ್ಕೆ ಹೊಸ ವೇದಿಕೆಯನ್ನು ಕಲ್ಪಿಸುವ ಗುರಿ ಹೊಂದಿದೆ.
ಕಳೆದ ಎಂಟು ವರ್ಷಗಳಿಂದ ‘ಸಮಾಜಮುಖಿ ಪ್ರಕಾಶನ’ ಮತ್ತು ಅದರ ಸಹ ಸಂಸ್ಥೆಗಳು ಕನ್ನಡ ಸಾಹಿತ್ಯ, ಸಂಸ್ಕೃತಿ ಮತ್ತು ವೈಚಾರಿಕ ಚಿಂತನೆಗೆ ಮಹತ್ವದ ಕೊಡುಗೆ ನೀಡುತ್ತಾ ಬಂದಿವೆ. ಈ ಹಿನ್ನೆಲೆಯಲ್ಲಿ, ಪ್ರಚಲಿತ ಸಾಹಿತ್ಯ ಸಮ್ಮೇಳನಗಳ ರಾಜಕೀಯ ಹಸ್ತಕ್ಷೇಪ ಮತ್ತು ವಾಣಿಜ್ಯೀಕರಣದಿಂದ ಭಿನ್ನವಾದ, ಕೇವಲ ಸಾಹಿತ್ಯಿಕ ಮೌಲ್ಯಗಳಿಗೆ ಆದ್ಯತೆ ನೀಡುವ ಸಮ್ಮೇಳನ ಆಯೋಜಿಸಲಾಗುತ್ತಿದೆ. ಸೃಜನಶೀಲ ಮತ್ತು ವೈಚಾರಿಕ ಬರಹಗಾರರಿಗೆ ಸ್ಫೂರ್ತಿ ನೀಡುವುದು, ಕನ್ನಡದ ಪ್ರಸ್ತುತ ಬಿಕ್ಕಟ್ಟುಗಳನ್ನು ಚರ್ಚಿಸುವುದು ಹಾಗೂ ಮುಂದಿನ ದಶಕಗಳಿಗೆ ಮಾರ್ಗದರ್ಶನ ನೀಡುವುದು ಈ ಸಮ್ಮೇಳನದ ಪ್ರಮುಖ ಉದ್ದೇಶವಾಗಿದೆ.
“ಸಮ್ಮೇಳನದ ಸ್ವರೂಪ ಮತ್ತು ಕಾರ್ಯಕ್ರಮಗಳು”
ಸಮ್ಮೇಳನದಲ್ಲಿ ನಾಡಿನ ಹಿರಿಯ ಚಿಂತಕರು ಮತ್ತು ಸಾಹಿತಿಗಳು ಭಾಗವಹಿಸುವ ಮುಖ್ಯ ಗೋಷ್ಠಿಗಳು ನಡೆಯಲಿವೆ. ಇದರೊಂದಿಗೆ ನಾಲ್ಕು ಸಮಾನಾಂತರ ವೇದಿಕೆಗಳಲ್ಲಿ ವಿವಿಧ ವಿಷಯಗಳ ಕುರಿತು ಚರ್ಚೆಗಳು, ಕಾರ್ಯಾಗಾರಗಳು, ವಿಷಯ ಮಂಡನೆ ಮತ್ತು ಯುವ ಬರಹಗಾರರಿಗೆ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ವೇದಿಕೆಗಳಲ್ಲಿ ಸೃಜನಶೀಲ, ವೈಚಾರಿಕ, ಶಾಸ್ತ್ರೀಯ, ಕನ್ನಡೇತರ ಮತ್ತು ಅಂತರಶಿಸ್ತೀಯ ವಿಷಯಗಳ ಬಗ್ಗೆ ಗಂಭೀರ ಚರ್ಚೆಗಳು ನಡೆಯಲಿವೆ. ಒಂದು ವೇದಿಕೆಯನ್ನು ಸಂಪೂರ್ಣವಾಗಿ ಇಂಗ್ಲಿಷ್ ಭಾಷೆಯ ಚರ್ಚೆಗಾಗಿ ಮೀಸಲಿಡಲಾಗಿದೆ.
“ಭಾಗವಹಿಸುವಿಕೆ ಮತ್ತು ನೋಂದಣಿ”
ಈ ಸಮ್ಮೇಳನದಲ್ಲಿ ಸಾಹಿತಿಗಳು, ವಿಮರ್ಶಕರು, ವಿದ್ಯಾರ್ಥಿಗಳು, ಸಾಹಿತ್ಯಾಸಕ್ತರು ಸೇರಿದಂತೆ ಯಾರು ಬೇಕಾದರೂ ಭಾಗವಹಿಸಬಹುದು. ಭಾಗವಹಿಸುವ ಎಲ್ಲ ಪ್ರತಿನಿಧಿಗಳಿಗೆ ಎರಡು ದಿನಗಳ ಊಟ, ಉಪಾಹಾರದ ವೆಚ್ಚಕ್ಕಾಗಿ 300 ರೂಪಾಯಿ ನೋಂದಣಿ ಶುಲ್ಕ ನಿಗದಿಪಡಿಸಲಾಗಿದೆ. ಆಹ್ವಾನಿತ ಗಣ್ಯರಿಗೆ ಮತ್ತು ಬೆಂಗಳೂರಿನ ಹೊರಗಿನಿಂದ ಬರುವ ಆಹ್ವಾನಿತರಿಗೆ ಪ್ರಯಾಣ ಮತ್ತು ವಸತಿ ಸೌಕರ್ಯವನ್ನು ಒದಗಿಸಲಾಗುವುದು.
ಈ ಸಮ್ಮೇಳನದ ಒಟ್ಟು ಅಂದಾಜು ವೆಚ್ಚ 25 ಲಕ್ಷ ರೂಪಾಯಿ ಆಗಿದ್ದು, ಯಾವುದೇ ಸರ್ಕಾರಿ ಅನುದಾನವಿಲ್ಲದೆ, ಸಂಪೂರ್ಣವಾಗಿ ಸಾಹಿತ್ಯ ಪ್ರೇಮಿಗಳು ಮತ್ತು ದಾನಿಗಳ ದೇಣಿಗೆಯಿಂದ ಆಯೋಜಿಸಲಾಗುತ್ತಿದೆ. ಕನ್ನಡ ಸಾಹಿತ್ಯದ ಘನತೆಯನ್ನು ಎತ್ತಿಹಿಡಿಯಲು ಮತ್ತು ಸಮುದಾಯದ ಸಹಭಾಗಿತ್ವದಲ್ಲಿ ಒಂದು ಅರ್ಥಪೂರ್ಣ ಕಾರ್ಯಕ್ರಮವನ್ನು ರೂಪಿಸುವುದು ‘ಸಮಾಜಮುಖಿ’ ಬಳಗದ ಆಶಯವಾಗಿದೆ. ಈ ಸಮ್ಮೇಳನವು ಕನ್ನಡ ಸಾಹಿತ್ಯಕ್ಕೆ ಕನ್ನಡಿ ಹಿಡಿಯುವ ಮತ್ತು ದಾರಿದೀಪವಾಗುವ ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆಯಾಗಲಿದೆ.
“ಉದ್ದೇಶವೇನು?”
ಪ್ರಸ್ತುತ ಕನ್ನಡ ಸಾಹಿತ್ಯ ಸಂದರ್ಭವನ್ನು ಮರು-ವಿಮರ್ಶಿಸುವ ಅಗತ್ಯವಿದೆ. ಸೃಜನಶೀಲ ಹಾಗೂ ವೈಚಾರಿಕ ಸಾಹಿತ್ಯ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಬರಹಗಾರರಿಗೆ ಸ್ಫೂರ್ತಿ, ಚೈತನ್ಯ ಮತ್ತು ಬೆಂಬಲ ನೀಡುವಂತಹ ಒಂದು ಉತ್ತಮ ವೇದಿಕೆ ಬೇಕು ಎಂಬುದು ‘ಸಮಾಜಮುಖಿ ಬಳಗ’ದ ದೃಢವಾದ ಅಭಿಪ್ರಾಯ. ಈ ಸಾಹಿತ್ಯ ಸಮ್ಮೇಳನದ ಮೂಲ ಉದ್ದೇಶಗಳನ್ನು ಈಡೇರಿಸುವಂತಹ ಒಂದು ಸಾಹಿತ್ಯಿಕ ಸಂಭ್ರಮವನ್ನು ಆಯೋಜಿಸುವುದು ನಮ್ಮ ಗುರಿ. ವರ್ಷಕ್ಕೆ ಒಮ್ಮೆಯಾದರೂ ಕನ್ನಡದ ಎಲ್ಲ ಆರೋಗ್ಯವಂತ ಮತ್ತು ಕ್ರಿಯಾಶೀಲ ಮನಸ್ಸುಗಳನ್ನು ಒಂದೆಡೆ ಸೇರಿಸಿ, ಗಂಭೀರ ಸಮಾಲೋಚನೆಗೆ ವೇದಿಕೆ ಒದಗಿಸಬೇಕಿದೆ. ಜೊತೆಗೆ, ಮುಂಬರುವ ದಶಕಗಳಲ್ಲಿ ಕನ್ನಡ ಭಾಷೆ, ಸಾಹಿತ್ಯ ಹಾಗೂ ಕರ್ನಾಟಕದ ಬೆಳವಣಿಗೆ, ಸ್ಥಿತಿಗತಿ ಮತ್ತು ಸ್ಥಾನಮಾನಗಳ ಕುರಿತು ಅರ್ಥಪೂರ್ಣವಾಗಿ ಚರ್ಚಿಸುವುದು ಈ ವೇದಿಕೆಯ ನಿಲುವು.
ಸಾಹಿತ್ಯ ಸಂಭ್ರಮದಲ್ಲಿ ಪಾಲ್ಗೊಳ್ಳಲು ಈ ಕೆಳಗಿನ ಲಿಂಕ್ ಮೂಲಕ ಆನ್ಲೈನ್ ನೋಂದಣಿ ಮಾಡಿಕೊಳ್ಳಿ
https://samajamukhi.com/samajamukhi-form/