ಬೆಂಗಳೂರು | ಮುಡಾ ಮಾಜಿ ಆಯುಕ್ತ ಡಿ.ಬಿ. ನಟೇಶ್ ಅವರ ಹೆಸರಿನಲ್ಲಿ ಸ್ಫೋಟಕ ಆಡಿಯೋ ಬಿಡುಗಡೆ ಮಾಡಿ ಸಂಚಲನ ಮೂಡಿಸಿದ್ದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರಿಗೆ ಈಗ ಕಾನೂನಿನ ಸಂಕಷ್ಟ ಎದುರಾಗಿದೆ.
ನಕಲಿ ದಾಖಲೆ ಸೃಷ್ಟಿ ಮತ್ತು ಮಾನಹಾನಿಯ ಆರೋಪದ ಮೇಲೆ ಬೆಂಗಳೂರಿನ ಸಿಸಿಬಿ ಪೊಲೀಸರು ಎಫ್‌ಐಆರ್ ದಾಖಲಿಸಿ ಸ್ನೇಹಮಯಿ ಕೃಷ್ಣ ಅವರನ್ನು ನಿನ್ನೆ ಬಂಧಿಸಿದ್ದು, ಡಿಸಿಪಿ ಖಾಸಿಂ ನೇತೃತ್ವದಲ್ಲಿ ತಡರಾತ್ರಿಯವರೆಗೂ ಸುದೀರ್ಘ ವಿಚಾರಣೆ ನಡೆಸಲಾಗಿದೆ.
ಸ್ನೇಹಮಯಿ ಕೃಷ್ಣ ಅವರನ್ನು ಸೈಬರ್ ಕ್ರೈಂ ಠಾಣೆಯಲ್ಲಿ ರಾತ್ರಿಯಿಡೀ ವಿಚಾರಣೆ ನಡೆಸಲಾಗಿದೆ. ನಟೇಶ್ ಅವರ ಫೋಟೋಗಳನ್ನು ಬಳಸಿ ನಕಲಿ ಆಡಿಯೋ ಮತ್ತು ದಾಖಲೆಗಳನ್ನು ಸೃಷ್ಟಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಅಧಿಕಾರಿಯ ವ್ಯಕ್ತಿತ್ವಕ್ಕೆ ಧಕ್ಕೆ ತಂದಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
ಮೈಸೂರಿನ ನಿವಾಸದಲ್ಲಿ ಸಿಸಿಬಿ ಶೋಧ
ಬೆಂಗಳೂರಿನಲ್ಲಿ ನಿನ್ನೆ ಸಿಸಿಬಿ ಪೊಲೀಸರು ಸ್ನೇಹಮಯಿ ಕೃಷ್ಣ ಅವರನ್ನು ಬಂಧಿಸಿದ ಬೆನ್ನಲ್ಲೇ ಮೈಸೂರಿನಲ್ಲಿರುವ ಅವರ ಮನೆ ಮತ್ತು ಕಚೇರಿಯ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಸಿಸಿಬಿ ಪೊಲೀಸರು, ದಾಳಿಯಲ್ಲಿ ಪೆನ್‌ಡ್ರೈವ್, ಹಾರ್ಡ್ ಡಿಸ್ಕ್‌ನೊಂದಿಗೆ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಶುಕ್ರವಾರ ಮಧ್ಯಾಹ್ನ 2.30ರ ಹೊತ್ತಿಗೆ ಆಗಮಿಸಿದ 10 ಮಂದಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಇರುವ ತಂಡವು, ಚಾಮುಂಡಿ ಬೆಟ್ಟದ ತಪ್ಪಲಿನ ಭೈರವೇಶ್ವರ ನಗರದಲ್ಲಿರುವ ಮನೆ ಮತ್ತು ಕಚೇರಿ ಹಾಗೂ ಬಂಡಿಪಾಳ್ಯದಲ್ಲಿರುವ ಕೃಷ್ಣ ಅವರ ತಾಯಿ ಮನೆ ಮೇಲೆ ದಾಳಿ ನಡೆಸಿದ ಪೊಲೀಸರು ಸತತ ನಾಲ್ಕು ಗಂಟೆಗಳ ಕಾಲ ಶೋಧ ಕಾರ್ಯ ನಡೆಸಿ, ಬಳಿಕ ವಾಪಸ್ ತೆರಳಿದ್ದರು.
ಇದನ್ನೂ ಓದಿ : ಬಾಗಲಕೋಟೆಯಲ್ಲಿ ಭೀಕರ ಅಪಘಾತ | ಮಗು ಸೇರಿ ನಾಲ್ವರು ಬ*ಲಿ



















