ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖಾಧಿಕಾರಿಗಳಿಗೆ ಇದೀಗ ಸಂಕಷ್ಟ ಎದುರಾಗಿದೆ. ಈ ಕೇಸ್ನ ತನಿಖಾಧಿಕಾರಿಗಳಾದ PSI ವಿನಯ್ ಹಾಗೂ ACP ಚಂದನ್ ಇಬ್ಬರನ್ನೂ ಆರೋಪಿಗಳಾಗಿ ಮಾಡಬೇಕು ಎಂದು ಸಾಮಾಜಿಕ ಹೋರಾಟಗಾರ ಸ್ನೇಹಮಹಿ ಕೃಷ್ಣ, ADGP ಹಿತೇಂದ್ರ ಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸರ್ವಾಧಿಕಾರಿಗಳಂತೆ PSI ವಿನಯ್ ಹಾಗೂ ACP ಚಂದನ್ ನಡೆದುಕೊಂಡಿದ್ದಾರೆ. ಅಲ್ಲದೇ ಹಲವಾರು ಅಫರಾಧ ಕೃತ್ಯಗಳಲ್ಲಿ ಭಾಗಿಯಾಗಿ, ಸುಳ್ಳು ದೋಷಾರೋಪಣ ಪಟ್ಟಿ ಸಲ್ಲಿಕೆ ಮಾಡಿದ್ದಾರೆ. ಹೀಗಾಗಿ ಇಬ್ಬರನ್ನೂ ಪ್ರಕರಣದಲ್ಲಿ ಆರೋಪಿಯನ್ನಾಗಿ ಮಾಡಬೇಕು, ಅಲ್ಲದೇ CIDಗೆ ಈ ಕೇಸ್ನ್ನು ವರ್ಗಾಯಿಸುವಂತೆ ಸ್ನೇಹಮಹಿ ಕೃಷ್ಣ, ADGP ಹಿತೇಂದ್ರ ಕುಮಾರ್ ಅವರಿಗೆ ಮನವಿ ಮಾಡಿದ್ದಾರೆ.
ಕೆಲವು ಪೊಲೀಸ್ ಅಧಿಕಾರಿಗಳು ಕಾನೂನು ಮತ್ತು ತಮ್ಮ ಅಧಿಕಾರವನ್ನು ತಮ್ಮ ಆಟಿಕೆಯ ವಸ್ತುಗಳು ಎಂಬಂತೆ ಸರ್ವಾಧಿಕಾರಿಗಳ ರೀತಿಯಲ್ಲಿ ನಡೆದುಕೊಂಡು, ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್ನ ತನಿಖೆ ನಡೆಸಿ, ವಿನಯ್‌ರವರನ್ನು ರಕ್ಷಣೆ ಮಾಡುವ ಸಲುವಾಗಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ, ನೈಜ ಸಾಕ್ಷಾಧಾರಗಳನ್ನು ಮುಚ್ಚಿಟ್ಟು ತನಿಖಾಧಿಕಾರಿಗಳಾದ ಗಿರಿಶ್ ನಾಯಕ್ ಹಾಗೂ ಚಂದನ್‌ಕುಮಾರ್ ಸುಳ್ಳು ದೋಷಾರೋಪಣ ಪಟ್ಟಿ ಸಲ್ಲಿಸಿದ್ದಾರೆ. ಅವರ ವಿರುದ್ಧ ಪ್ರತ್ಯೇಕ ಮೊಕದ್ದಮೆ ದಾಖಲಿಸಿ, ಸೂಕ್ತ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸ್ನೇಹಮಹಿ ಕೃಷ್ಣ ಪತ್ರ ಬರೆದಿದ್ದಾರೆ.
ಪತ್ರದಲ್ಲಿ ಏನಿದೆ?
ಸರ್ವಾಧಿಕಾರಿಗಳಂತೆ ನಡೆದುಕೊಳ್ಳುವ ಅಧಿಕಾರಿಗಳನ್ನು ಕೆಲವು ಹಿರಿಯ ಅಧಿಕಾರಿಗಳೂ ಪರೋಕ್ಷವಾಗಿ ರಕ್ಷಣೆ ಮಾಡುತ್ತಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಎಂಬುವವರ ಸಾವಿಗೆ ಸಂಬಂಧಿಸಿದಂತೆ ನಾನು ನಿಮ್ಮ ಕಚೇರಿಗೆ ಭೇಟಿ ನೀಡಿ ದೂರರ್ಜಿ ನೀಡಿದ್ದೆ. ಈ ಪ್ರಕರಣದ ಗಂಭೀರತೆಯ ಬಗ್ಗೆ ತಿಳಿಸಿ, ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿಕೊಂಡಿದ್ದರೂ ಕೂಡ, ಇದುವರೆವಿಗೂ ಕ್ರಮ ತೆಗೆದುಕೊಂಡಿಲ್ಲ.’

ಈ ಹಿಂದೆ ಕಾನೂನು ಮತ್ತು ಸುವ್ಯವಸ್ಥೆಯ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರಾಗಿದ್ದ ರೂಪಕ್ ಕುಮಾರ್ ದತ್ತರವರನ್ನು ನಾನು ಖುದ್ದಾಗಿ ಭೇಟಿ ಮಾಡಿ. ಮೈಸೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಆಂಟೋ ಎಂಬುವವರ ಕೊಲೆಗೆ ಸಂಬಂಧಿಸಿದಂತೆ ನಾನು ನೀಡಿದ ದೂರರ್ಜಿ ಮತ್ತು ದಾಖಲೆಗಳನ್ನು ಸುಮಾರು ಒಂದೂ ಕಾಲು ಗಂಟೆ ಖುದ್ದಾಗಿ ಪರಿಶೀಲನೆ ನಡೆಸಿದ ಅವರು, ಸತ್ಯಾಸತ್ಯತೆಯನ್ನು ತಿಳಿದುಕೊಂಡು, ಮಾರನೇ ದಿನವೇ ಮೈಸೂರು ಜಿಲ್ಲೆಯ ಪೊಲೀಸ್ ಅಧೀಕ್ಷಕರನ್ನು ತಮ್ಮ ಕಚೇರಿಗೆ ಕರೆಯಿಸಿಕೊಂಡು, ನನ್ನ ದೂರರ್ಜಿ ಮತ್ತು ದಾಖಲೆಗಳನ್ನು ಮುಂದಿಟ್ಟುಕೊಂಡು ಖುದ್ದಾಗಿ ಚರ್ಚೆ ನಡೆಸಿದ್ದಾರೆ. ಕೂಡಲೇ ನನ್ನ ದೂರರ್ಜಿಯಲ್ಲಿನ ಅಂಶಗಳ ಬಗ್ಗೆ ತುರ್ತಾಗಿ ಖುದ್ದು ವಿಚಾರಣೆಯನ್ನು ನಡೆಸಿ, ತುರ್ತು ವರದಿಯನ್ನು ತರಿಸಿಕೊಂಡು, ಪರಿಶೀಲನೆ ನಡೆಸಿದ್ದರು.

ನಾನು ಮಾಡಿರುವ ಆರೋಪ ನಿಜ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದ್ದರಿಂದ, ಕೂಡಲೇ ಸಿಐಡಿಯವರಿಗೆ ತನಿಖೆ ನಡೆಸುವಂತೆ ಮತ್ತು ಆ ಪ್ರಕರಣದ ತನಿಖಾಧಿಕಾರಿಯನ್ನು ಅಮಾನತ್ತು ಮಾಡಲು ಆದೇಶಗಳನ್ನು ಹೊರಡಿಸಿದ್ದರು. ಇದರಂತೆ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ನಿಮ್ಮ ಕಚೇರಿಗೆ ನೀಡಿದ್ದ ದೂರರ್ಜಿಯ ಸಂಬಂಧ ಕ್ರಮ ತೆಗೆದುಕೊಳ್ಳಬೇಕಾಗಿತ್ತು ಎಂದು ಉಲ್ಲೇಖಿಸಲಾಗಿದೆ.

ಇದನ್ನೂ ಓದಿ : ಆಟೋ ಚಾಲಕರ ಸಂಘದ ಬ್ರ್ಯಾಂಡ್ ಅಂಬಾಸಿಡರ್ ಆದ ಡಿಂಪಲ್ ಕ್ವೀನ್



















