ಬೆಂಗಳೂರು : ನಕಲಿ ಆಡಿಯೋ ಹಾಗೂ ದಾಖಲಾತಿ ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡಿದ ಆರೋಪ ಪ್ರಕರಣದಡಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರನ್ನು ಬಂಧಿಸಿ ವಿಚಾರಣೆ ಪೂರ್ಣಗೊಳಿಸಿದ ಸಿಸಿಬಿ ಪೊಲೀಸರು, ಫೆ.24ರಂದು ವಿಚಾರಣೆಗೆ ಬರುವಂತೆ ಬಿಟ್ಟು ಕಳುಹಿಸಿದ್ಧಾರೆ.
ನಕಲಿ ದಾಖಲೆ ಹಾಗೂ ಆಡಿಯೋ ಬಳಸಿ ತಮ್ಮ ವಿರುದ್ಧ ಅಪಪ್ರಚಾರ ಮಾಡಿರುವುದಾಗಿ ಆರೋಪಿಸಿ ಮುಡಾ ಮಾಜಿ ಆಯುಕ್ತ ಡಿ.ಬಿ. ನಟೇಶ್ ಅವರು ಸಿಸಿಬಿ ಸೈಬರ್ ಕ್ರೈಂ ಪೊಲೀಸರಿಗೆ ಸ್ನೇಹಮಯಿ ಕೃಷ್ಣ ವಿರುದ್ದ ಫೆ.18ರಂದು ದೂರು ನೀಡಿದ್ದರು. ಈ ಸಂಬಂಧ ಸ್ನೇಹಮಯಿ ಕೃಷ್ಣ ಅವರನ್ನು ಸಿಸಿಬಿ ಪೊಲೀಸರು ಶುಕ್ರವಾರ ವಶಕ್ಕೆ ಪಡೆದುಕೊಂಡಿದ್ದರು. ವಿಚಾರಣೆ ಬಳಿಕ ಈ ಪ್ರಕರಣದಲ್ಲಿ ವಿನೋದ್ ಎಂಬುವನನ್ನು ಬಂಧಿಸಿದ್ದಾರೆ.
ನಟೇಶ್ ಹಾಗೂ ಮೈಸೂರು ಮೂಲದ ವಿನೋದ್ ಎಂಬಾತನ ಹಣಕಾಸು ವ್ಯವಹಾರದಲ್ಲಿ ಇಬ್ಬರ ನಡುವೆ ವೈಮನಸ್ಸು ಮೂಡಿತ್ತು. ನಟೇಶ್ ಅವರೊಂದಿಗಿನ ವೈಷ್ಯಮದ ಲಾಭ ಪಡೆಯಲು ಸ್ನೇಹಮಯಿ ಕೃಷ್ಣರನ್ನು ವಿನೋದ್ ಬಳಸಿಕೊಂಡಿದ್ದ ಎನ್ನಲಾಗಿದೆ. ಮುಂಬಡ್ತಿಗಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ನಟೇಶ್ 1.60 ಕೋಟಿ ಲಂಚ ನೀಡಿರುವುದಾಗಿ ತಪ್ಪು ಮಾಹಿತಿ ನೀಡಿದ್ದ. ಈ ಮಾಹಿತಿ ಆಧರಿಸಿ ಸ್ನೇಹಮಯಿ ಕೃಷ್ಣ, ಶಾಲಿನಿ ರಜನೀಶ್ ಮೇಲೆ ಲಂಚದ ಆರೋಪ ಹೊರಿಸಿದ್ದರು ಎಂದು ವಿಚಾರಣೆಯಲ್ಲಿ ತಿಳಿದುಬಂದಿದೆ. ಈ ಸಂಬಂಧ ಆರೋಪಿ ವಿನೋದ್ ಎಂಬುವನನ್ನು ಬಂಧಿಸಲಾಗಿದೆ. ಪ್ರಕರಣ ಸಂಬಂಧ ವಶದಲ್ಲಿದ್ದ ಸ್ನೇಹಮಯಿ ಕೃಷ್ಣರನ್ನು ಬಿಟ್ಟು ಕಳುಹಿಸಿ ಫೆ.24ರಂದು ವಿಚಾರಣೆ ಬರುವಂತೆ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.
ಸಿಎಸ್ ಶಾಲಿನಿ ರಜನೀಶ್ಗೆ ಕ್ಷಮೆ
ವಿಚಾರಣೆ ಮುಗಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಸ್ನೇಹಮಯಿ ಕೃಷ್ಣ, “ಕೆಎಎಸ್ ಅಧಿಕಾರಿ ನಟೇಶ್ ಅವರು ನನ್ನ ವಿರುದ್ಧ ಸುಳ್ಳು ದೂರು ನೀಡಿದ್ದಾರೆ. ಈ ಸಂಬಂಧ ಸಿಸಿಬಿ ಪೊಲೀಸರು ತನ್ನನ್ನು ವಿಚಾರಣೆ ನಡೆಸಿದ್ಧಾರೆ. ಬಿಡುಗಡೆಗೊಳಿಸಿದ ಆಡಿಯೋದಲ್ಲಿ ನಟೇಶ್ ಮಾತನಾಡಿದ್ದಾರೆ. ಆದರೆ ಮುಂಬಡ್ತಿ ವಿಚಾರ ಸಂಬಂಧ ಶಾಲಿನಿ ರಜನೀಶ್ ಲಂಚ ಪಡೆದಿದ್ದಾರೆ ಎಂದು ವಿನೋದ್ ತನಗೆ ಸುಳ್ಳು ಮಾಹಿತಿ ನೀಡಿದ್ದ. ವಿಚಾರಣೆಯಲ್ಲಿ ಹಣವನ್ನು ಪ್ರಭಾವಿ ವ್ಯಕ್ತಿಗಳಿಗೆ ನೀಡಿರುವುದು ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ. ಹೀಗಾಗಿ ಮುಖ್ಯ ಕಾರ್ಯದರ್ಶಿ ಅವರಿಗೆ ಕ್ಷಮೆ ಕೇಳುವೆ. ನಟೇಶ್ ಹಾಗೂ ವಿನೋದ್ ಮಧ್ಯೆ ಹಣಕಾಸಿನ ವಿಚಾರಕ್ಕೆ ಮನಸ್ತಾಪವಿತ್ತು. ತನ್ನನ್ನು ಸಂಪರ್ಕಿಸಿ ಶಾಲಿನಿ ರಜನೀಶ್ ಬಗ್ಗೆ ವಿನೋದ್ ಸುಳ್ಳು ಮಾಹಿತಿ ನೀಡಿದ್ದ. ಈ ಮೂಲಕ ತನ್ನನ್ನು ದುರ್ಬಳಕೆ ಮಾಡಿಕೊಂಡಿದ್ದ. ಬಂಧನದಲ್ಲಿರುವ ವಿನೋದ್ ನೀಡಿದ ದಾಖಲಾತಿ ಆಧರಿಸಿ ಸಿಎಸ್ ವಿರುದ್ಧ ಗಂಭೀರ ಆರೋಪ ಮಾಡಿದ್ದೆ” ಎಂದರು.
ಇದನ್ನೂ ಓದಿ : ಟ್ರಂಪ್‌ಗೆ ಮಣ್ಣು ಮುಕ್ಕಿಸಿದ ಭಾರತೀಯ ಮೂಲದ ವಕೀಲ | ಯಾರು ಈ ನೀಲ್ ಕಾತ್ಯಾಲ್?



















