ಲಕ್ನೋ: ಉತ್ತರಪ್ರದೇಶದ ಮೀರತ್(Meerut Murder:) ನಲ್ಲಿ ನಡೆದ ಸೌರಭ್ ರಜಪೂತ್ ಕೊಲೆ ಪ್ರಕರಣದಲ್ಲಿ ಪ್ರತಿ ದಿನ ಹೊಸ ಹೊಸ ಆಘಾತಕಾರಿ ವಿವರಗಳು ಹೊರಬರುತ್ತಿವೆ. ಸೌರಭ್ ರನ್ನು ಕೊಲೆ ಮಾಡಿ, ದೇಹವನ್ನು 15 ಭಾಗಗಳಾಗಿ ತುಂಡರಿಸಿ, ಟ್ಯಾಂಕ್ ನೊಳಕ್ಕೆ ಹಾಕಿ ಸಿಮೆಂಟ್ ಸುರಿದಿದ್ದ ಪತ್ನಿ ಮುಸ್ಕಾನ್ ರಸ್ತೋಗಿ ಮತ್ತು ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾ ನಡುವೆ ನಡೆದ ಸ್ನ್ಯಾಪ್ ಚಾಟ್ ಸಂಭಾಷಣೆಯ ವಿವರಗಳು ಈಗ ಪೊಲೀಸರಿಗೆ ಲಭ್ಯವಾಗಿವೆ. ಅದರಲ್ಲಿ, ಸಾಹಿಲ್ ಶುಕ್ಲಾ ಜೊತೆಗೆ ಮುಸ್ಕಾನ್ ಸ್ನ್ಯಾಪ್ ಚಾಟ್ ನಲ್ಲಿ ನಡೆಸಿದ ಸಂಭಾಷಣೆಗಳ ಮಾಹಿತಿಯಿದ್ದು, ಆಕೆಯು “ನಾನು ಸತ್ತು ಸ್ವರ್ಗ ಸೇರಿರುವ ನಿನ್ನ ತಾಯಿ” ಎಂದು ಹೇಳಿಕೊಂಡೇ ಸಾಹಿಲ್ ಜೊತೆ ಮಾತನಾಡುತ್ತಿದ್ದಳು ಎಂಬ ವಿಚಾರ ಬಹಿರಂಗವಾಗಿದೆ. ಸಾಹಿಲ್ ನ ತಾಯಿಯಂತೆ ನಟಿಸುವ ಮೂಲಕ ಮುಸ್ಕಾನ್, ತನ್ನ ಪತಿ ಸೌರಭ್ ನನ್ನು ಕೊಲ್ಲಲು ಸಾಹಿಲ್ ಗೆ ಹೇಗೆ ಪ್ರಚೋದನೆ ನೀಡಿದ್ದಳು ಎಂಬುದು ಈ ಸಂಭಾಷಣೆಯಿಂದ ತಿಳಿದುಬಂದಿದೆ.
ಸಾಹಿಲ್ ಮೂಢನಂಬಿದೆ, ಅಧ್ಯಾತ್ಮ, ಮಾಟ-ಮಂತ್ರದಲ್ಲಿ ಆಳವಾದ ನಂಬಿಕೆ ಹೊಂದಿದ್ದ. ಆತನ ಕುರುಡು ನಂಬಿಕೆಯ ಬಗ್ಗೆ ತಿಳಿದಿದ್ದ ಮುಸ್ಕಾನ್, ತನ್ನ ಪತಿಯ ಕೊಲೆ ಮಾಡಲು ಸಾಹಿಲೇ ಸರಿಯಾದ ವ್ಯಕ್ತಿ ಎಂದು ನಿರ್ಧರಿಸಿದ್ದಳು. ಅದೇ ರೀತಿ ಪ್ರತಿಯೊಂದು ಪ್ಲಾನ್ ಗಳನ್ನೂ ಮಾಡಿದ್ದಳು.
ಮೂರು ಸ್ನ್ಯಾಪ್ ಚಾಟ್ ಐಡಿ ರಚನೆ:
ಮೊದಲಿಗೆ ಮುಸ್ಕಾನ್ ತನ್ನ ಸಹೋದರನ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ಮೂರು ನಕಲಿ ಸ್ನ್ಯಾಪ್ ಚಾಟ್ ಐಡಿಗಳನ್ನು ರಚಿಸಿದ್ದಳು. ಅವಳು ಈ ಪೈಕಿ ಒಂದು ಖಾತೆಯನ್ನು ಬಳಸಿಕೊಂಡು ಸಾಹಿಲ್ ಜತೆಗೆ ಸಂವಹನ ನಡೆಸುತ್ತಿದ್ದಳು. ಸಾಹಿಲ್, ತಾನು ತನ್ನ ಮೃತ ತಾಯಿಯೊಂದಿಗೇ ಸಂವಹನ ನಡೆಸುತ್ತಿದ್ದೇನೆ ಎಂದೇ ನಂಬಿದ್ದ. ಅದನ್ನು ನಂಬುವ ರೀತಿಯಲ್ಲೇ ಮುಸ್ಕಾನ್ ಆತನೊಂದಿಗೆ ಮಾತನಾಡುತ್ತಿದ್ದಳು. ಇನ್ನು, ಉಳಿದ ಎರಡು ಖಾತೆಗಳನ್ನು ಮುಸ್ಕಾನ್ ತನ್ನ ಸ್ವಂತ ತಾಯಿ ಮತ್ತು ಸಹೋದರನ ಹೆಸರಲ್ಲಿ ತೆರೆದಿದ್ದಳು. ಅದರ ಮೂಲಕವೂ ಸಾಹಿಲ್ ಗೆ ಸಂದೇಶ ಕಳುಹಿಸುತ್ತಿದ್ದಳು. ಆ ಮೂಲಕ ಆಕೆಯ ತಾಯಿ ಮತ್ತು ಸಹೋದರ ಇವರಿಬ್ಬರ ಸಂಬಂಧವನ್ನು ಒಪ್ಪಿಕೊಂಡಿದ್ದಾರೆ ಎಂಬ ಭ್ರಮೆ ಹುಟ್ಟುವಂತೆ ಮಾಡಿದ್ದಳು.
ಸ್ನ್ಯಾಪ್ ಚಾಟ್ ಸಂಭಾಷಣೆಯಲ್ಲಿ ಏನಿದೆ?
ಸಾಹಿಲ್ ನ ಮೃತ ತಾಯಿಯಂತೆ ನಟಿಸಿ ಮುಸ್ಕಾನ್ ಕಳುಹಿಸಿದ ಸಂದೇಶಗಳಲ್ಲಿ, “ರಾಜಾ, ನನ್ನ ಮಗು, ನಮ್ಮನ್ನು ಕ್ಷಮಿಸು. ನಾವು ಮತ್ತೆ ನಿನ್ನೊಂದಿಗೆ ಮಾತನಾಡಲಾಗದು. ನಾವು ಇಹಲೋಕ ತ್ಯಜಿಸಿದ್ದೇವೆ. ಈಗ ಏನು ಆಗಬೇಕೋ ಅದು ಆಗುತ್ತದೆ. ದೈವಿಕ ಶಕ್ತಿಯು ನಿನ್ನನ್ನು ರಕ್ಷಿಸುತ್ತದೆ. ಅವಳು(ಮುಸ್ಕಾನ್) ತನ್ನ ಪ್ರಾಣವನ್ನು ಬೇಕಿದ್ದರೂ ತ್ಯಾಗ ಮಾಡುತ್ತಾಳೆಯೇ ಹೊರತು, ನಿನಗೇನೂ ಆಗಲು ಬಿಡುವುದಿಲ್ಲ. ನಾನಂತೂ ಮತ್ತೆ ಹಿಂತಿರುಗಲು ಆಗದು. ರಾಜಾ, ನನ್ನ ಮಗು.” ಎಂದು ಬರೆಯಲಾಗಿದೆ.
ಮತ್ತೊಂದು ಚಾಟ್‌ನಲ್ಲಿ, ಮುಸ್ಕಾನ್ (ಸಾಹಿಲ್ ಅವರ ತಾಯಿಯಂತೆ ನಟಿಸಿ), “ರಾಜಾ, ನಿನ್ನ ಪತ್ನಿ(ಮುಸ್ಕಾನ್) ನಾವು ನಡೆಸಿದ ಅಗ್ನಿಪರೀಕ್ಷೆಯಲ್ಲಿ ಉತ್ತೀರ್ಣಳಾಗಿದ್ದಾರೆ. ಅವಳು ಈಗ ನಮ್ಮ ಕುಟುಂಬದ ಭಾಗವಾಗಿದ್ದಾಳೆ. ನಮ್ಮ ಮಗಳ ಬಗ್ಗೆ ನಮಗೆ ತುಂಬಾ ಸಂತೋಷ ಹಾಗೂ ತೃಪ್ತಿಯಿದೆ. ನಮ್ಮ ಪೂರ್ವಜರೂ ಅವಳನ್ನು ಆಶೀರ್ವದಿಸಿದ್ದಾರೆ.” ಎಂದು ಬರೆದಿದ್ದಾಳೆ.
“ಅವಳು (ಮುಸ್ಕಾನ್) ಈಗ ಬ್ರಾಹ್ಮಣಳಾಗಿ ಬದಲಾಗಿದ್ದಾಳೆ. ಈಗ ನನ್ನ ಸೊಸೆಯನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ. ಅವನ(ಸೌರಭ್) ಸಾವು ಮುಸ್ಕಾನ್ ಕೈಯಲ್ಲಿದೆ” ಎಂದೂ ಸಾಹಿಲ್ ಗೆ ಮೃತ ತಾಯಿಯ ರೂಪದಲ್ಲಿ ಮುಸ್ಕಾನ್ ಸಂದೇಶ ಕಳುಹಿಸಿದ್ದಾಳೆ.
2023ರ ನವೆಂಬರ್ ನಿಂದಲೇ ಮುಸ್ಕಾನ್ ತನ್ನ ಪತಿ ಸೌರಭ್ ಹತ್ಯೆಗೆ ಸಂಚು ರೂಪಿಸುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಸಾಹಿಲ್ ಜೊತೆಗೆ ಸೇರಿ ಮುಸ್ಕಾನ್ ಮಾರ್ಚ್ 4 ರಂದು ಸೌರಭ್ ಅವರನ್ನು ಕೊಂದು, ಅವರ ದೇಹವನ್ನು ತುಂಡರಿಸಿದ್ದರು. ಬಳಿಕ ದೇಹದ ಅವಶೇಷಗಳನ್ನು ಡ್ರಮ್ ನಲ್ಲಿ ತುಂಬಿ, ಅದರೊಳಗೆ ಹಸಿಯಾದ ಸಿಮೆಂಟ್ ಸುರಿದಿದ್ದರು. ಬಳಿಕ ಇವರಿಬ್ಬರೂ ಹಿಮಾಚಲ ಪ್ರದೇಶಕ್ಕೆ ಪ್ರವಾಸ ಹೋಗಿದ್ದರು. ಪ್ರವಾಸದಿಂದ ಮರಳಿದ ಬಳಿಕ, ಆ ಡ್ರಮ್ ಅನ್ನು ವಿಲೇವಾರಿ ಮಾಡಿಸಲೆಂದು ಕಾರ್ಮಿಕರನ್ನು ಕರೆಸಿಕೊಂಡಿದ್ದರು. ಆದರೆ, ಕಾರ್ಮಿಕರು ಎಷ್ಟೇ ಕಷ್ಟಪಟ್ಟರೂ ಅಷ್ಟು ಭಾರವಾದ ಡ್ರಮ್ ಎತ್ತಲು ಸಾಧ್ಯವಾಗಲಿಲ್ಲ. ಡ್ರಮ್ ಎತ್ತಲು ಅವರು ನಡೆಸಿದ ಎಲ್ಲ ಪ್ರಯತ್ನವೂ ವಿಫಲವಾಯಿತು. ಇದೇ ಸಂದರ್ಭದಲ್ಲಿ ಏಕಾಏಕಿ ಡ್ರಮ್ ನ ಮುಚ್ಚಳ ಓಪನ್ ಆಗಿ, ಅದರೊಳಗಿನಿಂದ ದುರ್ವಾಸನೆ ಬರತೊಡಗಿತ್ತು. ಈ ಮೂಲಕ ಕೊಲೆ ರಹಸ್ಯ ಹೊರಬಿದ್ದು, ಮುಸ್ಕಾನ್ ಮತ್ತು ಸಾಹಿಲ್ ಶುಕ್ಲಾನ ಬಂಧನಕ್ಕೆ ಕಾರಣವಾಯಿತು.