ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದ ತನಿಖೆ ಕೈಗೊಂಡಿರುವ ಡಿಆರ್ ಐ ಅಧಿಕಾರಿಗಳು ಎಲ್ಲ ಆಯಾಮಗಳಲ್ಲಿಯೂ ತನಿಖೆ ನಡೆಸುತ್ತಿದ್ದಾರೆ. ಹೀಗಾಗಿ ರನ್ಯಾ ರಾವ್ (Ranya Rao) ಗೆ ಸಂಕಷ್ಟ ಶುರುವಾಗಿದೆ.
ಇನ್ನೊಂದೆಡೆ ಅಧಿಕಾರಿಗಳು ಈ ಪ್ರಕರಣದಲ್ಲಿ ಹಲವರ ಕೈವಾಡವಿರುವ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ. ಇಂದು ಜಾಮೀನು ಅರ್ಜಿ ವಿಚಾರಣೆ ವೇಳೆ ಡಿಆರ್ಐ ಅಧಿಕಾರಿಗಳ ಪರ ವಕೀಲರು ಒಂದಷ್ಟು ಮಹತ್ವದ ಮಾಹಿತಿಯನ್ನು ನ್ಯಾಯಾಲಯಕ್ಕೆ ನೀಡಿದ್ದಾರೆ.
ಡಿಆರ್ಐ ಅಧಿಕಾರಿಗಳ ಪರವಾಗಿ ಮಧು ಎನ್. ರಾವ್, ಆರ್ಥಿಕ ಅಪರಾಧಗಳ ನ್ಯಾಯಾಲಯದಲ್ಲಿ ವಾದ ಮಾಡಿದ್ದಾರೆ. ‘ಪೊಲೀಸ್ ಅಧಿಕಾರಿಗಳ ಕುಟುಂಬದವರಿಗೆ ಸಹಾಯ ಮಾಡಲು ಹೇಳಿದ್ದರು. ರಾಜ್ಯದ ಪೊಲೀಸ್ ಪ್ರೋಟೋಕಾಲ್ ಸರ್ವಿಸ್ ಸಹಾಯದಿಂದಲೇ ಸ್ಮಗ್ಲಿಂಗ್ ನಡೆದಿದೆ ಎಂಬುವುದು ಆರೋಪ. ಇಲ್ಲವಾದರೆ ರನ್ಯಾಗೆ ಗ್ರೀನ್ ಚಾನಲ್‌ವರೆಗೂ ಬರುವುದು ಅಸಾಧ್ಯವಾಗಿತ್ತು’ ಎಂದು ವಾದಿಸಿದ್ದಾರೆ.
ಗ್ರೀನ್ ಚಾನಲ್ ಆದ ಮೇಲೆಯೇ ಮೆಟಲ್ ಡಿಟೆಕ್ಟರ್ ಮೂಲಕ ಹೊರಬರುತ್ತಾರೆ. ಹೀಗಾಗಿ ಡಿಎಫ್‌ಎಂಡಿ ಯಂತ್ರದಲ್ಲಿ ಚಿನ್ನ ಪತ್ತೆಯಾಗಿಲ್ಲ ಎಂಬುವುದು ನಿಜವಲ್ಲ. ಮಾರ್ಚ್ 4ರಂದು ಸಂಜೆ 4 ಗಂಟೆಗೆ ರನ್ಯಾಳನ್ನು ಬಂಧಿಸಲಾಯಿತು. ಬಂಧನದ ವೇಳೆ ಅರೆಸ್ಟ್ ಮೆಮೋ, ಕಾರಣಗಳನ್ನೂ ನೀಡಲಾಯಿತು. ಬಂಧಿಸಲಾಗಿದೆ ಎಂಬುವುದಕ್ಕೆ ಕಾರಣಗಳನ್ನೂ ನೀಡಲಾಗಿದೆ’ ಎಂದು ಡಿಆರ್ಐ ಅಧಿಕಾರಿಗಳ ಪರ ವಕೀಲರು ವಾದ ಮಂಡಿಸಿದ್ದಾರೆ.