ವಿಶಾಖಪಟ್ಟಣಂ : ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನಾ, ತಮ್ಮ ಅಮೋಘ ಬ್ಯಾಟಿಂಗ್ ಪ್ರದರ್ಶನದ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿದ್ದಾರೆ. 2025ರ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯ ಭಾಗವಾಗಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ, ಅವರು 28 ವರ್ಷಗಳ ಹಳೆಯ ವಿಶ್ವ ದಾಖಲೆಯೊಂದನ್ನು ಮುರಿದು, ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಒಂದು ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

ಸಿಕ್ಸರ್ ಸಿಡಿಸಿ ದಾಖಲೆ ಮುರಿದ ಮಂಧಾನಾ : ಆಂಧ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ, ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತದ ಪರವಾಗಿ ಇನಿಂಗ್ಸ್ ಆರಂಭಿಸಿದ ಸ್ಮೃತಿ ಮಂಧಾನಾ, ಆಸ್ಟ್ರೇಲಿಯಾದ ದಿಗ್ಗಜ ಆಟಗಾರ್ತಿ ಬೆಲಿಂಡಾ ಕ್ಲಾರ್ಕ್ ಅವರ ದಾಖಲೆಯನ್ನು ಮುರಿಯಲು ಕೇವಲ 11 ರನ್‌ಗಳ ಅವಶ್ಯಕತೆಯಿತ್ತು. ಎಚ್ಚರಿಕೆಯ ಆರಂಭ ಪಡೆದ ಮಂಧಾನಾ, ಎಂಟನೇ ಓವರ್‌ನಲ್ಲಿ ದಕ್ಷಿಣ ಆಫ್ರಿಕಾದ ಬೌಲರ್ ಅಯಾಬೊಂಗಾ ಖಾಕ ಅವರ ಎಸೆತಕ್ಕೆ ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ಈ ಐತಿಹಾಸಿಕ ಮೈಲಿಗಲ್ಲನ್ನು ತಲುಪಿದರು.
ಬೆಲಿಂಡಾ ಕ್ಲಾರ್ಕ್ ಅವರು 1997ರಲ್ಲಿ 970 ರನ್ ಗಳಿಸಿ ಈ ದಾಖಲೆಯನ್ನು ನಿರ್ಮಿಸಿದ್ದರು. ಇದೀಗ, ಸ್ಮೃತಿ ಮಂಧಾನಾ ಅವರು 2025ರಲ್ಲಿ ಆಡಿದ 17 ಇನ್ನಿಂಗ್ಸ್‌ಗಳಿಂದ 57.76ರ ಸರಾಸರಿಯಲ್ಲಿ 982 ರನ್ ಗಳಿಸಿ, ಈ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ. ಈ ವರ್ಷದಲ್ಲಿ ಅವರು ನಾಲ್ಕು ಶತಕ ಮತ್ತು ಮೂರು ಅರ್ಧಶತಕಗಳನ್ನು ಬಾರಿಸಿರುವುದು ಅವರ ಅದ್ಭುತ ಫಾರ್ಮ್‌ಗೆ ಸಾಕ್ಷಿಯಾಗಿದೆ.
ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲ : ವಿಶ್ವದಾಖಲೆ ಬರೆದ ಬಳಿಕ, ಸ್ಮೃತಿ ಮಂಧಾನಾ ಅವರಿಂದ ದೊಡ್ಡ ಇನ್ನಿಂಗ್ಸ್ ನಿರೀಕ್ಷಿಸಲಾಗಿತ್ತು. ಆದರೆ, 32 ಎಸೆತಗಳಲ್ಲಿ 23 ರನ್ ಗಳಿಸಿದ್ದಾಗ, ನಾಡಿನ್ ಡಿ ಕ್ಲಾರ್ಕ್ ಅವರ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಈ ವಿಶ್ವಕಪ್‌ನ ಹಿಂದಿನ ಪಂದ್ಯಗಳಲ್ಲೂ ಅವರು ಕ್ರಮವಾಗಿ 8 ಮತ್ತು 23 ರನ್‌ಗಳಿಗೆ ಔಟಾಗಿದ್ದರು. ಪಂದ್ಯಕ್ಕೂ ಮುನ್ನ ಮಾತನಾಡಿದ್ದ ದಕ್ಷಿಣ ಆಫ್ರಿಕಾದ ನಾಯಕಿ ನಾಡಿನ್ ಡಿ ಕ್ಲಾರ್ಕ್, “ಮಂಧಾನಾ ನಮ್ಮ ವಿರುದ್ಧ ಉತ್ತಮ ದಾಖಲೆ ಹೊಂದಿದ್ದಾರೆ, ಅವರನ್ನು ಕಟ್ಟಿಹಾಕಲು ವಿಶೇಷ ಯೋಜನೆ ರೂಪಿಸಿದ್ದೇವೆ” ಎಂದು ಹೇಳಿದ್ದರು. ಅದರಂತೆ, ಮಂಧಾನಾ ಅವರನ್ನು ಕಡಿಮೆ ಮೊತ್ತಕ್ಕೆ ಪೆವಿಲಿಯನ್‌ಗೆ ಕಳುಹಿಸುವಲ್ಲಿ ಅವರು ಯಶಸ್ವಿಯಾದರು.
ಕುಸಿದ ಭಾರತ, ಆಸರೆಯಾದ ರಿಚಾ ಘೋಷ್ : ಮಂಧಾನಾ ಔಟಾದ ಬಳಿಕ ಭಾರತದ ಮಧ್ಯಮ ಕ್ರಮಾಂಕ ಕುಸಿತ ಕಂಡಿತು. ಆದರೆ, ಕೆಳ ಕ್ರಮಾಂಕದಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ರಿಚಾ ಘೋಷ್ (94) ಅವರ ಅಮೋಘ ಆಟದಿಂದಾಗಿ, ಭಾರತವು ಸವಾಲಿನ ಮೊತ್ತವನ್ನು ಕಲೆಹಾಕಲು ಸಾಧ್ಯವಾಯಿತು.