ನವದೆಹಲಿ: ಭಾರತೀಯ ಮಹಿಳಾ ಕ್ರಿಕೆಟ್ ತಂಡದ ತಾರಾ ಆಟಗಾರ್ತಿ ಸ್ಮೃತಿ ಮಂಧಾನ ಅವರು ತಮ್ಮ ಮದುವೆ ಮುಂದೂಡಿಕೆಯಾದ ನಂತರ ಇದೇ ಮೊದಲ ಬಾರಿಗೆ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಸಂಗೀತ ಸಂಯೋಜಕ ಪಲಾಶ್ ಮುಚ್ಚಲ್ ಅವರೊಂದಿಗೆ ನಿಶ್ಚಯವಾಗಿದ್ದ ವಿವಾಹವು ನವೆಂಬರ್‌ನಲ್ಲಿ ದಿಢೀರ್ ಮುಂದೂಡಲ್ಪಟ್ಟ ನಂತರ ಸ್ಮೃತಿ ಮಂಧಾನ ಮೌನಕ್ಕೆ ಶರಣಾಗಿದ್ದರು. ಇದೀಗ ಅವರು ಇನ್‌ಸ್ಟಾಗ್ರಾಮ್‌ಗೆ ಮರಳಿದ್ದು, ಹಂಚಿಕೊಂಡಿರುವ ವಿಡಿಯೋವೊಂದು ಅಭಿಮಾನಿಗಳಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.
ಟೂತ್‌ಪೇಸ್ಟ್ ಜಾಹೀರಾತು ಮತ್ತು ‘ಮಿಸ್ಸಿಂಗ್’ ಉಂಗುರ
ಸ್ಮೃತಿ ಮಂಧಾನ ಅವರು ಜನಪ್ರಿಯ ಟೂತ್‌ಪೇಸ್ಟ್ ಬ್ರಾಂಡ್ ಒಂದರ ಪ್ರಚಾರದ ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣಕ್ಕೆ ಕಮ್‌ಬ್ಯಾಕ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಅವರು ಹಿರಿಯ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರು ದಂತ ಆರೋಗ್ಯದ ಬಗ್ಗೆ ನೀಡಿದ ಸಲಹೆಯನ್ನು ಸ್ಮರಿಸಿಕೊಂಡಿದ್ದಾರೆ. ಆದರೆ, ಅಭಿಮಾನಿಗಳ ಕಣ್ಣು ಸ್ಮೃತಿ ಅವರು ನೀಡಿದ ಸಂದೇಶಕ್ಕಿಂತ ಹೆಚ್ಚಾಗಿ ಅವರ ಕೈಬೆರಳಿನ ಮೇಲಿತ್ತು. ವಿಡಿಯೋದಲ್ಲಿ ಸ್ಮೃತಿ ಅವರ ಕೈಯಲ್ಲಿ ನಿಶ್ಚಿತಾರ್ಥದ ಉಂಗುರ ಕಾಣದಿರುವುದು ಅಭಿಮಾನಿಗಳ ಗೊಂದಲಕ್ಕೆ ಕಾರಣವಾಗಿದೆ. ಆದರೆ, ಈ ಜಾಹೀರಾತನ್ನು ನಿಶ್ಚಿತಾರ್ಥಕ್ಕೆ ಮುನ್ನ ಚಿತ್ರೀಕರಿಸಲಾಗಿತ್ತೇ ಅಥವಾ ನಂತರವೇ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.
ಮದುವೆ ಮುಂದೂಡಿಕೆಗೆ ಅಸಲಿ ಕಾರಣವೇನು?
ಸ್ಮೃತಿ ಮಂಧಾನ ಮತ್ತು ಪಲಾಶ್ ಮುಚ್ಚಲ್ ಅವರ ವಿವಾಹವು ನವೆಂಬರ್ 23, 2025ರಂದು ಸಾಂಗ್ಲಿಯಲ್ಲಿ ನಡೆಯಬೇಕಿತ್ತು. ಆದರೆ, ವಿವಾಹದ ದಿನದಂದು ಮುಂಜಾನೆ ಸ್ಮೃತಿ ಅವರ ತಂದೆಗೆ ಹಠಾತ್ ಆರೋಗ್ಯ ಸಮಸ್ಯೆ ಎದುರಾಗಿ ಆಸ್ಪತ್ರೆಗೆ ದಾಖಲಿಸಬೇಕಾಯಿತು. ಇದರ ಬೆನ್ನಲ್ಲೇ ವರ ಪಲಾಶ್ ಕೂಡ ತೀವ್ರ ಒತ್ತಡದಿಂದಾಗಿ ಆಸ್ಪತ್ರೆ ಸೇರಬೇಕಾಯಿತು ಎಂದು ವರದಿಯಾಗಿತ್ತು. ಎರಡೂ ಕುಟುಂಬಗಳು ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸಿದ್ದರಿಂದ, ಪರಸ್ಪರ ಒಪ್ಪಿಗೆ ಮೇರೆಗೆ ವಿವಾಹವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು.
ವದಂತಿಗಳಿಗೆ ‘ದೃಷ್ಟಿಬೊಟ್ಟು’ ಉತ್ತರ
ಮದುವೆ ಮುಂದೂಡಿಕೆಯಾದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ವದಂತಿಗಳು ಹಬ್ಬಿದ್ದವು. ಸ್ಮೃತಿ ಅವರು ಮದುವೆಗೆ ಸಂಬಂಧಿಸಿದ ಪೋಸ್ಟ್‌ಗಳನ್ನು ಡಿಲೀಟ್ ಮಾಡಿದ್ದಾರೆ ಹಾಗೂ ಸಹ ಆಟಗಾರರು ಪಲಾಶ್ ಅವರನ್ನು ಅನ್‌ಫಾಲೋ ಮಾಡಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಆದರೆ, ಈ ಎಲ್ಲಾ ಊಾಪೋಹಗಳಿಗೆ ತೆರೆ ಎಳೆಯುವಂತೆ ಕಳೆದ ವಾರ ಸ್ಮೃತಿ ಮತ್ತು ಪಲಾಶ್ ಇಬ್ಬರೂ ತಮ್ಮ ಇನ್‌ಸ್ಟಾಗ್ರಾಮ್ ಬಯೋದಲ್ಲಿ ‘ದೃಷ್ಟಿ ಬೊಟ್ಟು’ (ನಜರ್ ಎಮೋಜಿ) ಹಾಕಿಕೊಳ್ಳುವ ಮೂಲಕ ಎಲ್ಲವೂ ಸರಿಯಾಗಿದೆ ಎಂಬ ಪರೋಕ್ಷ ಸಂದೇಶ ರವಾನಿಸಿದ್ದಾರೆ. ಅಲ್ಲದೆ, ಸ್ಮೃತಿ ಅವರ ಕಷ್ಟಕಾಲದಲ್ಲಿ ಅವರಿಗೆ ಬೆಂಬಲ ನೀಡಲು ಸಹ ಆಟಗಾರ್ತಿ ಜೆಮಿಮಾ ರಾಡ್ರಿಗಸ್ ಅವರು ಮಹಿಳಾ ಬಿಗ್ ಬ್ಯಾಷ್ ಲೀಗ್‌ನಿಂದ ಹಿಂದೆ ಸರಿದು ಭಾರತದಲ್ಲೇ ಉಳಿದುಕೊಂಡಿದ್ದರು.
ಹೊಸ ದಿನಾಂಕ ನಿಗದಿಯಾಗಿಲ್ಲ
ಸಾಮಾಜಿಕ ಜಾಲತಾಣಗಳಲ್ಲಿ ಮದುವೆಯ ಹೊಸ ದಿನಾಂಕದ ಬಗ್ಗೆ ಸುಳ್ಳು ಸುದ್ದಿಗಳು ಹರಿದಾಡುತ್ತಿವೆ ಎಂದು ಸ್ಮೃತಿ ಅವರ ಸಹೋದರ ಶ್ರವಣ್ ಮಂಧಾನ ಸ್ಪಷ್ಟಪಡಿಸಿದ್ದಾರೆ. ಸದ್ಯಕ್ಕೆ ಯಾವುದೇ ಹೊಸ ದಿನಾಂಕವನ್ನು ನಿಗದಿಪಡಿಸಲಾಗಿಲ್ಲ ಎಂದು ಅವರು ತಿಳಿಸಿದ್ದು, ಈ ಕಠಿಣ ಸಮಯದಲ್ಲಿ ಕುಟುಂಬಕ್ಕೆ ಗೌಪ್ಯತೆ ನೀಡುವಂತೆ ಮನವಿ ಮಾಡಿದ್ದಾರೆ.
ಮೈದಾನಕ್ಕೆ ಮರಳಲಿರುವ ಸ್ಮೃತಿ
ವೈಯಕ್ತಿಕ ಜೀವನದ ಈ ಬೆಳವಣಿಗೆಗಳ ನಡುವೆಯೂ ಸ್ಮೃತಿ ಮಂಧಾನ ಮತ್ತೆ ಕ್ರಿಕೆಟ್ ಅಂಗಳಕ್ಕೆ ಮರಳಲು ಸಜ್ಜಾಗಿದ್ದಾರೆ. ಡಿಸೆಂಬರ್ 21 ರಿಂದ 30ರವರೆಗೆ ತವರು ನೆಲದಲ್ಲಿ ಶ್ರೀಲಂಕಾ ವಿರುದ್ಧ ನಡೆಯಲಿರುವ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಅವರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ನಂತರ ಜನವರಿ 9 ರಿಂದ ನವಿ ಮುಂಬೈನಲ್ಲಿ ಆರಂಭವಾಗಲಿರುವ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮುನ್ನಡೆಸಲಿದ್ದಾರೆ.
ಇದನ್ನೂ ಓದಿ: ರಾಜಸ್ಥಾನ್ ರಾಯಲ್ಸ್ ನಾಯಕತ್ವ : ತಂಡ ಅವಕಾಶ ನೀಡಿದರೆ ಸಿದ್ಧ ಎಂದ ರಿಯಾನ್ ಪರಾಗ್



















