ವೆಸ್ಟ್ ಇಂಡೀಸ್ ವಿರುದ್ಧ ನಡೆದ ಮೂರನೇ ಪಂದ್ಯದಲ್ಲಿ ಭಾರತ ತಂಡದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಅದ್ಭುತ ಇನ್ನಿಂಗ್ಸ್ ಕಟ್ಟಿದ್ದಾರೆ.
ವಿಂಡೀಸ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಹ್ಯಾಟ್ರಿಕ್ ಅರ್ಧ ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ. ಮೂರನೇ ಪಂದ್ಯದಲ್ಲಿ ಪಂದ್ಯದಲ್ಲಿ ಸ್ಮೃತಿ ಸತತ 7 ಬೌಂಡರಿಗಳನ್ನು ಬಾರಿಸುವ ಮೂಲಕ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡುತ್ತಿರುವ ಭಾರತ ತಂಡದ ಪರ ಇನ್ನಿಂಗ್ಸ್ ಆರಂಭಿಸಿದ್ದ ಸ್ಮೃತಿ ಮಂಧಾನ ಮೂರು ಮತ್ತು ನಾಲ್ಕನೇ ಓವರ್ ಗಳಲ್ಲಿ ಸತತ 7 ಬೌಂಡರಿ ಸಿಡಿಸಿದ್ದಾರೆ.
ಮೂರನೇ ಓವರ್ ಎಸೆದ ಹೆನ್ರಿ ಅವರ ನಾಲ್ಕನೇ ಎಸೆತದಲ್ಲಿ ಮಂಧಾನ ಬೌಂಡರಿ ಬಾರಿಸಿದರು. ಆ ನಂತರ ಐದು ಮತ್ತು ಆರನೇ ಎಸೆತಗಳಲ್ಲಿಯೂ ಬೌಂಡರಿ ಬಾರಿಸಿದರು. ನಂತರ, ನಾಲ್ಕನೇ ಓವರ್ ನ ಎರಡನೇ ಎಸೆತದಲ್ಲಿ ಸ್ಟ್ರೈಕ್ ಪಡೆದ ಸ್ಮೃತಿ, ಎರಡನೇ ಎಸೆತದಲ್ಲಿ ಬೌಂಡರಿ, ಮೂರನೇ ಎಸೆತದಲ್ಲಿ ಸಿಕ್ಸರ್, ನಾಲ್ಕನೇ ಎಸೆತದಲ್ಲಿ ಬೌಂಡರಿ ಹಾಗೂ ನಂತರ ಐದನೇ ಎಸೆತದಲ್ಲಿ ಬೌಂಡರಿ ಗಳಿಸಿದರು. ಈ ಮೂಲಕ ಮಂಧಾನ ಸತತ 7 ಬೌಂಡರಿ ಸಿಡಿಸಿದ್ದಾರೆ.
ಈ ಪಂದ್ಯದಲ್ಲಿ ಕೇವಲ 27 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಹ್ಯಾಟ್ರಿಕ್ ಅರ್ಧಶತಕ ಸಿಡಿಸುವ ಮೂಲಕ ದಾಖಲೆಯೊಂದನ್ನು ಬರೆದಿದ್ದಾರೆ.