ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಟೀಮ್ ಇಂಡಿಯಾ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್ ಸ್ಮೃತಿ ಮಂಧಾನ ಅವರು ಭಾನುವಾರ ಪಲಾಶ್ ಮುಚ್ಚಲ್ ಅವರೊಂದಿಗೆ ವಿವಾಹವಾಗಬೇಕಿತ್ತು. ಆದರೆ ವಿವಾಹ ಮುಹೂರ್ತಕ್ಕೆ ಕೆಲವೇ ಗಂಟೆಗೂ ಮೊದಲು ಅವರ ತಂದೆಗೆ ಹೃದಯಾಘಾತವಾಗಿದೆ. ಹೀಗಾಗಿ, ವಿವಾಹವನ್ನು ಮುಂದೂಡಲಾಗಿದೆ. ಇದರ ನಡುವೆ ಮಂಧಾನ ತಮ್ಮ ಇನ್‌ಸ್ಟಾ ಖಾತೆಯಲ್ಲಿದ್ದ ಮದುವೆಗೆ ಸಂಬಂಧಿಸಿದ ಎಲ್ಲಾ ಪೋಸ್ಟ್‌ಗಳನ್ನು ಡಿಲೀಟ್ ಮಾಡಿದ್ದಾರೆ.
ಸ್ಮೃತಿ ಮಂಧಾನ ಇತ್ತೀಚೆಗೆ ತಮ್ಮ ಸ್ನೇಹಿತ, ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದರ ವಿಡಿಯೋವನ್ನು ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದರು. ಶೇರ್ ಮಾಡಲಾದ ವಿಡಿಯೋದಲ್ಲಿ ಮಂಧಾನ ತಮ್ಮ ಸಹ ಕ್ರಿಕೆಟಿಗರೊಂದಿಗೆ ನೃತ್ಯ ಮಾಡಿರುವುದು ಕಂಡುಬಂದಿದೆ. ಈ ಸಂದರ್ಭದಲ್ಲಿ ತಮ್ಮ ಬೆರಳಿನಲ್ಲಿರುವ ನಿಶ್ಚಿತಾರ್ಥದ ಉಂಗುರವನ್ನು ತೋರಿಸಿದ್ದರು. ಇದರ ವಿಡಿಯೋ ಪ್ರಸ್ತುತ ಅವರ ಇನ್‌ಸ್ಟಾದಲ್ಲಿಲ್ಲ ಎಂದು ನೆಟಿಜನ್‌ಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಸ್ಮೃತಿ ಅವರ ಸ್ನೇಹಿತೆಯರಾದ ಜೆಮಿಮಾ ಮತ್ತು ಶ್ರೇಯಂಕಾ ಕೂಡ ಈ ವಿಡಿಯೋವನ್ನು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಿಂದ ಅಳಿಸಿದ್ದಾರೆ.
ವಿಡಿಯೋವನ್ನು ಅಳಿಸಿದ್ದಾರೆಯೇ ಅಥವಾ ಮರೆಮಾಡಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ. ಮತ್ತೊಂದೆಡೆ, ಪಲಾಶ್ ಮುಚ್ಚಲ್ ಅವರ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪ್ರಪೋಸಲ್ ವಿಡಿಯೋ ಇನ್ನೂ ಇದೆ. ಭಾರತ ಮಹಿಳಾ ತಂಡ ಏಕದಿನ ಕ್ರಿಕೆಟ್ ವಿಶ್ವಕಪ್ ಗೆದ್ದ ನವಿ ಮುಂಬೈ ಕ್ರೀಡಾಂಗಣದಲ್ಲಿ ಪಲಾಶ್ ಅವರು ಸ್ಮೃತಿ ಅವರ ಬೆರಳಿಗೆ ಉಂಗುರ ತೊಡಿಸಿದ್ದರು.
ಮಹಾರಾಷ್ಟ್ರದ ಸಾಂಗ್ಲಿಯ ಸಂದೋಲಿ ರಸ್ತೆಯಲ್ಲಿರುವ ಮಂಧಾನ ಫಾರ್ಮ್ ಹೌಸ್‌ನಲ್ಲಿ ನವೆಂಬರ್ 23ರಂದು ಅದ್ಧೂರಿ ವಿವಾಹೋತ್ಸವಕ್ಕೆ ಸಿದ್ಧತೆ ನಡೆದಿತ್ತು. ಸಂಜೆ 4.30ಕ್ಕೆ ವಿವಾಹ ನಡೆಯಬೇಕಿತ್ತು. ವಿವಾಹ ಸಂಭ್ರಮದ ವೇಳೆ ಸ್ಮೃತಿ ಅವರ ತಂದೆಗೆ ಹೃದಯಾಘಾತವಾಗಿತ್ತು. ನಂತರ ಸ್ಮೃತಿ ತಮ್ಮ ಮದುವೆ ಸಮಾರಂಭ ಮುಂದೂಡಿದ್ದಾಗಿ ಅವರ ಮ್ಯಾನೇಜರ್ ಮೂಲಕ ತಿಳಿಸಿದ್ದರು. ಪಲಾಶ್ ಕೂಡ ಇಂದು ಬೆಳಿಗ್ಗೆ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಅವರು ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದಾರೆ.
ಮಂಧಾನ ಮತ್ತು ಪಲಾಶ್ 2019ರಿಂದ ಪ್ರೀತಿಸುತ್ತಿದ್ದರು. ಇಬ್ಬರೂ ಈ ವಿಷಯವನ್ನು ಮೊದಲು ರಹಸ್ಯವಾಗಿಟ್ಟಿದ್ದರು. ನಂತರ ಸಂಬಂಧ ದೃಢಪಟ್ಟಿತ್ತು. ಹೊರಹೋಗುವಾಗ ಈ ಜೋಡಿ ಹಲವು ಬಾರಿ ಕ್ಯಾಮೆರಾ ಕಣ್ಣುಗಳಲ್ಲಿ ಸೆರೆಯಾಗಿದ್ದರು. ಕಳೆದ ವರ್ಷ ಇಬ್ಬರೂ ಸಾಮಾಜಿಕ ಮಾಧ್ಯಮದಲ್ಲಿ ಬಹಿರಂಗವಾಗಿ ಪೋಸ್ಟ್‌ಗಳನ್ನು ಹಂಚಿಕೊಂಡು ತಮ್ಮ ಪ್ರೇಮ್ ಕಹಾನಿಯ ಬಗ್ಗೆ ಮಾಹಿತಿ ನೀಡಿದ್ದರು.
ಇದನ್ನೂ ಓದಿ : ದರ್ಶನ್ಗೆ ಖಂಡಿತ ಒಳ್ಳೆದಾಗುತ್ತೆ.. ‘ದಿ ಡೆವಿಲ್’ ಸಿನಿಮಾಗೆ ಶುಭ ಹಾರೈಸಿದ ಸುಮಲತಾ ಅಂಬರೀಷ್!



















