ನವದೆಹಲಿ: ಭಾರತೀಯ ಮಹಿಳಾ ಕ್ರಿಕೆಟ್ ತಂಡದ ತಾರಾ ಆಟಗಾರ್ತಿ ಸ್ಮೃತಿ ಮಂಧಾನ ಅವರು ಸಂಗೀತ ನಿರ್ದೇಶಕ ಹಾಗೂ ಚಲನಚಿತ್ರ ನಿರ್ಮಾಪಕ ಪಲಾಶ್ ಮುಚ್ಚಲ್ ಅವರೊಂದಿಗಿನ ತಮ್ಮ ವಿವಾಹ ರದ್ದಾಗಿರುವುದನ್ನು ಅಧಿಕೃತವಾಗಿ ಖಚಿತಪಡಿಸಿದ್ದಾರೆ. ಈ ಮೂಲಕ ಕಳೆದ ಕೆಲವು ವಾರಗಳಿಂದ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹರಿದಾಡುತ್ತಿದ್ದ ಊಹಾಪೋಹಗಳಿಗೆ ಅವರು ತೆರೆ ಎಳೆದಿದ್ದಾರೆ.
ಇನ್ಸ್ಟಾಗ್ರಾಮ್ ಮೂಲಕ ಸ್ಪಷ್ಟನೆ
ಭಾನುವಾರ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಈ ಬಗ್ಗೆ ಹೇಳಿಕೆ ನೀಡಿರುವ ಸ್ಮೃತಿ, “ಕಳೆದ ಕೆಲವು ವಾರಗಳಿಂದ ನನ್ನ ಜೀವನದ ಬಗ್ಗೆ ಸಾಕಷ್ಟು ಊಹಾಪೋಹಗಳು ಕೇಳಿಬರುತ್ತಿವೆ. ಈ ಸಮಯದಲ್ಲಿ ನಾನು ಮೌನ ಮುರಿಯುವುದು ಮುಖ್ಯವೆಂದು ಭಾವಿಸುತ್ತೇನೆ. ನಾನೊಬ್ಬ ಅಂತರ್ಮುಖಿ (ಖಾಸಗಿ) ವ್ಯಕ್ತಿ ಮತ್ತು ಹಾಗೆಯೇ ಇರಲು ಇಷ್ಟಪಡುತ್ತೇನೆ. ಆದರೆ ಮದುವೆ ರದ್ದಾಗಿದೆ ಎಂಬುದನ್ನು ಸ್ಪಷ್ಟಪಡಿಸುವುದು ಅನಿವಾರ್ಯವಾಗಿದೆ,” ಎಂದು ತಿಳಿಸಿದ್ದಾರೆ.

ಕುಟುಂಬಗಳ ಖಾಸಗಿತನಕ್ಕೆ ಗೌರವ ನೀಡಿ
ಈ ಕಠಿಣ ನಿರ್ಧಾರದ ನಂತರ ಎರಡೂ ಕುಟುಂಬಗಳಿಗೆ ಚೇತರಿಸಿಕೊಳ್ಳಲು ಕಾಲಾವಕಾಶದ ಅಗತ್ಯವಿದೆ ಎಂದು ಸ್ಮೃತಿ ಪ್ರತಿಪಾದಿಸಿದ್ದಾರೆ. “ಈ ವಿಷಯವನ್ನು ಇಲ್ಲಿಗೆ ಮುಕ್ತಾಯಗೊಳಿಸಲು ಇಷ್ಟಪಡುತ್ತೇನೆ. ದಯವಿಟ್ಟು ಎರಡೂ ಕುಟುಂಬಗಳ ಖಾಸಗಿತನವನ್ನು ಗೌರವಿಸಿ ಮತ್ತು ನಾವು ಇದರಿಂದ ಹೊರಬರಲು ಅವಕಾಶ ಮಾಡಿಕೊಡಿ,” ಎಂದು ಅಭಿಮಾನಿಗಳು ಹಾಗೂ ಮಾಧ್ಯಮಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ದೇಶಕ್ಕಾಗಿ ಆಡುವುದೇ ಮೊದಲ ಆದ್ಯತೆ
ವೈಯಕ್ತಿಕ ಜೀವನದ ಹಿನ್ನಡೆಯ ನಡುವೆಯೂ ಕ್ರಿಕೆಟ್ ಮೇಲಿನ ತಮ್ಮ ಬದ್ಧತೆಯನ್ನು ಸ್ಮೃತಿ ಪುನರುಚ್ಚರಿಸಿದ್ದಾರೆ. “ನಮ್ಮೆಲ್ಲರನ್ನೂ ಮುನ್ನಡೆಸುವ ಉನ್ನತ ಶಕ್ತಿಯಿದೆ ಎಂದು ನಾನು ನಂಬುತ್ತೇನೆ. ನನ್ನ ಮಟ್ಟಿಗೆ ದೇಶವನ್ನು ಅತ್ಯುನ್ನತ ಮಟ್ಟದಲ್ಲಿ ಪ್ರತಿನಿಧಿಸುವುದೇ ಯಾವಾಗಲೂ ಆದ್ಯತೆಯಾಗಿದೆ. ಭಾರತಕ್ಕಾಗಿ ಸಾಧ್ಯವಾದಷ್ಟು ಕಾಲ ಆಡುವುದು ಮತ್ತು ಟ್ರೋಫಿಗಳನ್ನು ಗೆಲ್ಲುವುದೇ ನನ್ನ ಗುರಿ. ನನ್ನ ಗಮನ ಯಾವಾಗಲೂ ಅಲ್ಲಿಯೇ ಇರುತ್ತದೆ,” ಎಂದು ಹೇಳುವ ಮೂಲಕ ಬೆಂಬಲಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.

ನವೆಂಬರ್ 23 ರಂದು ನಡೆಯಬೇಕಿದ್ದ ಮದುವೆ
ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನವೆಂಬರ್ 23, 2025 ರಂದು ಈ ಜೋಡಿಯ ವಿವಾಹ ನಿಗದಿಯಾಗಿತ್ತು. ಆದರೆ ಮದುವೆ ದಿನದಂದೇ ಬೆಳಿಗ್ಗೆ ಸ್ಮೃತಿ ಅವರ ತಂದೆ ಶ್ರೀನಿವಾಸ್ ಮಂಧಾನ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೇ ವೇಳೆ ಪಲಾಶ್ ಮುಚ್ಚಲ್ ಅವರ ಆರೋಗ್ಯದಲ್ಲೂ ಏರುಪೇರಾಗಿ ಅವರೂ ವೈದ್ಯಕೀಯ ಚಿಕಿತ್ಸೆ ಪಡೆದರು. ಅನಿರೀಕ್ಷಿತ ಆರೋಗ್ಯ ಸಮಸ್ಯೆಗಳಿಂದ ಅಂದು ಮದುವೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು. ಇದೀಗ ಉಭಯ ಕುಟುಂಬಗಳು ಪರಸ್ಪರ ಒಪ್ಪಿಗೆಯ ಮೇರೆಗೆ ಮದುವೆಯನ್ನು ರದ್ದುಗೊಳಿಸಲು ನಿರ್ಧರಿಸಿವೆ.
ಇದನ್ನೂ ಓದಿ: ಇಂಡಿಗೋ ಸಂಕಷ್ಟಕ್ಕೆ ತೆರೆ : ಶೇ.95ರಷ್ಟು ವಿಮಾನ ಸೇವೆ ಪುನರಾರಂಭ, ಪ್ರಯಾಣಿಕರು ನಿರಾಳ



















