ಬೆಂಗಳೂರು: ಕೇಂದ್ರ ಸರ್ಕಾರವು ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಹಾಗೂ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್ ಎಸ್ ಸಿ) ಸೇರಿ ಹಲವು ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರವನ್ನು (Interest Rates) ಘೋಷಣೆ ಮಾಡಿದೆ. ಆದರೆ, ಕೇಂದ್ರ ಸರ್ಕಾರವು ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರವನ್ನು ಯಥಾಸ್ಥಿತಿಯಲ್ಲೇ ಮುಂದುವರಿಸಲು ತೀರ್ಮಾನಿಸಲಾಗಿದೆ. ಹಾಗಾಗಿ, ಸಣ್ಣ ಪ್ರಮಾಣದಲ್ಲಿ ಉಳಿತಾಯ ಮಾಡುವವರಿಗೆ 2025-26ನೇ ಸಾಲಿನ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಹೆಚ್ಚಿನ ಬಡ್ಡಿಯ ಲಾಭ ಸಿಗುವುದಿಲ್ಲ.
ಕೇಂದ್ರ ಆರ್ಥಿಕ ವ್ಯವಹಾರಗಳ ಇಲಾಖೆಯು ಬಡ್ಡಿದರ ಯಥಾಸ್ಥಿತಿ ಮುಂದುವರಿಕೆ ಕುರಿತು ಘೋಷಣೆ ಮಾಡಿದೆ. “ಪಿಪಿಎಫ್, ಎನ್ ಎಸ್ ಸಿ, ಸುಕನ್ಯಾ ಸಮೃದ್ಧಿ ಯೋಜನೆ ಸೇರಿ ಹಲವು ಸಣ್ಣ ಉಳಿತಾಯಗಳ ಬಡ್ಡಿದರವು 2025ರ ಏಪ್ರಿಲ್ ನಿಂದ 2025ರ ಜೂನ್ 30ರವರೆಗೆ ಯಥಾಸ್ಥಿತಿ ಮುಂದುವರಿಯಲಿದೆ” ಎಂದು ಪ್ರಕಟಣೆ ತಿಳಿಸಿದೆ. ಇದರಿಂದಾಗಿ ಸಣ್ಣ ಹೂಡಿಕೆದಾರರಿಗೆ ಸ್ವಲ್ಪ ನಿರಾಶೆಯಾದಂತಾಗಿದೆ.
ನೂತನ ಆದೇಶದಂತೆ, ಸುಕನ್ಯಾ ಸಮೃದ್ಧಿ ಯೋಜನೆಯ ಬಡ್ಡಿದರವು ಶೇ.8.2ರಷ್ಟೇ ಇರಲಿದೆ. ಇನ್ನು, ಪಿಪಿಎಫ್ ಬಡ್ಡಿದರವು ಶೇ.7.1, ಉಳಿತಾಯ ಖಾತೆ ಠೇವಣಿಗೆ ಶೇ.4ರಷ್ಟು, ಹಿರಿಯ ನಾಗರಿಕರ ಉಳಿತಾಯ ಯೋಜನೆಯ ಬಡ್ಡಿದರ ಶೇ.8.2, ಆರ್ ಡಿ ಖಾತೆಗೆ ಶೇ.6.7ರಷ್ಟು, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಯೋಜನೆಯ ಬಡ್ಡಿದರವು ಶೇ.7.7ರಷ್ಟು ಬಡ್ಡಿದರ ಮುಂದುವರಿಯಲಿದೆ.
ಕೆಲ ದಿನಗಳ ಹಿಂದಷ್ಟೇ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ (ಇಪಿಎಫ್ಒ) ಪ್ರಮುಖ ಸಭೆ ನಡೆದಿತ್ತು. ಇದರಲ್ಲಿಯೂ ಪಿಎಫ್ ಮೇಲಿನ ಬಡ್ಡಿದರವನ್ನು ಶೇ.8.2ರಷ್ಟೇ ಮುಂದುವರಿಸಲಾಗಿತ್ತು. ಮಾರ್ಚ್ 31ರಂದು ಪಿಎಫ್ ಬಡ್ಡಿದರ ಜಮೆಯಾಗುವ ಸಾಧ್ಯತೆ ಇದೆ.