ಬೆಂಗಳೂರು: ವಿಶ್ವ ಕ್ರಿಕೆಟ್‌ನ ಬಹುನಿರೀಕ್ಷಿತ ಟೂರ್ನಿಗಳಲ್ಲಿ ಒಂದಾದ ಟಿ20 ವಿಶ್ವಕಪ್ 2026ರ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಆದರೆ, ಈ ಬಾರಿಯ ವಿಶ್ವಕಪ್ ಕ್ರೀಡಾಂಗಣದ ಹೊರಗಿನ ಬೆಳವಣಿಗೆಗಳಿಂದಲೇ ಹೆಚ್ಚು ಸುದ್ದಿಯಾಗುತ್ತಿದೆ. ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯದ ಮೇಲೆ ಕಾರ್ಮೋಡ ಕವಿದಿದ್ದು, ಈ ಪಂದ್ಯ ಬಹಿಷ್ಕರಿಸುವ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ನಿರ್ಧಾರವು ಆತಿಥೇಯ ಶ್ರೀಲಂಕಾಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಶ್ರೀಲಂಕಾ ಕ್ರಿಕೆಟ್ ಮಂಡಳಿ (ಎಸ್‌ಎಲ್‌ಸಿ), ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಪಾಕಿಸ್ತಾನಕ್ಕೆ ತುರ್ತು ಪತ್ರ ಬರೆದಿದೆ. ಈ ಪಂದ್ಯ ರದ್ದಾದರೆ ಕೇವಲ ಕ್ರಿಕೆಟ್ ಮಂಡಳಿಗಳಿಗಷ್ಟೇ ಅಲ್ಲ, ಶ್ರೀಲಂಕಾದ ಪ್ರವಾಸೋದ್ಯಮ ಮತ್ತು ಒಟ್ಟಾರೆ ಆರ್ಥಿಕತೆಯ ಮೇಲೆ ಭಾರೀ ಪೆಟ್ಟು ಬೀಳಲಿದೆ ಎಂದು ಎಸ್‌ಎಲ್‌ಸಿ ಎಚ್ಚರಿಕೆ ನೀಡಿದೆ.
ಆರ್ಥಿಕ ನಷ್ಟ ಮತ್ತು ಪ್ರವಾಸೋದ್ಯಮದ ಮೇಲೆ ಕರಿನೆರಳು
ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯವೆಂದರೆ ಅದು ಕೇವಲ ಆಟವಲ್ಲ, ಅದೊಂದು ಬೃಹತ್ ಆರ್ಥಿಕ ಶಕ್ತಿ. ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ಟೂರ್ನಿಗಳಲ್ಲಿ ಅತಿ ಹೆಚ್ಚು ಆದಾಯ ತಂದುಕೊಡುವ ಪಂದ್ಯವಿದು. ಜಾಗತಿಕವಾಗಿ ಕೋಟ್ಯಂತರ ಪ್ರೇಕ್ಷಕರನ್ನು ಸೆಳೆಯುವ ಈ ಪಂದ್ಯದ ಮೇಲೆ ಟಿವಿ ಪ್ರಸಾರ ಹಕ್ಕುಗಳು, ಜಾಹೀರಾತುದಾರರು ಮತ್ತು ಪ್ರಾಯೋಜಕರು ಭಾರೀ ಹಣ ಹೂಡಿಕೆ ಮಾಡಿರುತ್ತಾರೆ.
ಪಿಟಿಐ ವರದಿಯ ಪ್ರಕಾರ, ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಕಾರ್ಯಕಾರಿ ಸಮಿತಿಯು ಇತ್ತೀಚೆಗೆ ಸಭೆ ಸೇರಿ, ಪಾಕಿಸ್ತಾನಕ್ಕೆ ಅಧಿಕೃತ ಪತ್ರವನ್ನು ರವಾನಿಸಿದೆ. ಒಂದು ವೇಳೆ ಪಾಕಿಸ್ತಾನ ಈ ಪಂದ್ಯದಿಂದ ಹಿಂದೆ ಸರಿದರೆ, ಅದರಿಂದ ಉಂಟಾಗುವ ಆರ್ಥಿಕ ನಷ್ಟವು ಊಹೆಗೂ ಮೀರಿದ್ದಾಗಿರುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಕೇವಲ ಕ್ರಿಕೆಟ್ ಮಂಡಳಿಗಳಿಗೆ ಮಾತ್ರವಲ್ಲ, ಪಂದ್ಯಾವಳಿಯ ಆಯೋಜಕರು ಮತ್ತು ಆತಿಥೇಯ ರಾಷ್ಟ್ರದ ಪಾಲುದಾರರಿಗೂ ಇದು ದೊಡ್ಡ ಹೊಡೆತ ನೀಡಲಿದೆ.
ಶ್ರೀಲಂಕಾ ಪ್ರಸ್ತುತ ಆರ್ಥಿಕ ಚೇತರಿಕೆಯ ಹಾದಿಯಲ್ಲಿದೆ. ಇಂತಹ ಸಮಯದಲ್ಲಿ ಟಿ20 ವಿಶ್ವಕಪ್‌ನಂತಹ ದೊಡ್ಡ ಟೂರ್ನಿ, ಅದರಲ್ಲಿಯೂ ಭಾರತ-ಪಾಕಿಸ್ತಾನ ಪಂದ್ಯದ ಆಯೋಜನೆಯು ದೇಶದ ಪ್ರವಾಸೋದ್ಯಮಕ್ಕೆ ಸಂಜೀವಿನಿಯಾಗಬಲ್ಲದು. ಈ ಪಂದ್ಯ ವೀಕ್ಷಿಸಲು ವಿಶ್ವದ ನಾನಾ ಮೂಲೆಗಳಿಂದ ಅಭಿಮಾನಿಗಳು ಕೊಲಂಬೊಗೆ ಹರಿದು ಬರುತ್ತಾರೆ. ಹೋಟೆಲ್ ಬುಕ್ಕಿಂಗ್‌ಗಳು, ವಿಮಾನಯಾನ ಮತ್ತು ಸ್ಥಳೀಯ ವ್ಯಾಪಾರ-ವಹಿವಾಟುಗಳು ಗಣನೀಯವಾಗಿ ಏರಿಕೆಯಾಗುತ್ತವೆ. ಆದರೆ, ಪಂದ್ಯ ರದ್ದಾದರೆ ಹೋಟೆಲ್ ಮತ್ತು ಫ್ಲೈಟ್ ಬುಕ್ಕಿಂಗ್‌ಗಳು ರದ್ದಾಗುವ ಭೀತಿಯಿದೆ. ಲಾಜಿಸ್ಟಿಕ್ಸ್ ಮತ್ತು ಸೇವಾ ಪೂರೈಕೆದಾರರಿಗೂ ಇದರಿಂದ ತೊಂದರೆಯಾಗಲಿದ್ದು, ಒಟ್ಟಾರೆ ಶ್ರೀಲಂಕಾದ ಆರ್ಥಿಕತೆಗೆ ದೊಡ್ಡ ಪೆಟ್ಟು ಬೀಳಲಿದೆ ಎಂದು ಎಸ್‌ಎಲ್‌ಸಿ ಆತಂಕ ವ್ಯಕ್ತಪಡಿಸಿದೆ. ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಈ ಪಂದ್ಯ ಆಯೋಜನೆಗೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಭದ್ರತೆ ಮತ್ತು ತಟಸ್ಥತೆಯ ಭರವಸೆಯನ್ನು ಶ್ರೀಲಂಕಾ ನೀಡಿದೆ.
ಹಳೆಯ ಉಪಕಾರ ಸ್ಮರಿಸುವಂತೆ ಪಾಕಿಸ್ತಾನಕ್ಕೆ ಮನವಿ
ಪಾಕಿಸ್ತಾನಕ್ಕೆ ಬರೆದ ಪತ್ರದಲ್ಲಿ ಶ್ರೀಲಂಕಾ ಕ್ರಿಕೆಟ್ ಮಂಡಳಿ ಭಾವನಾತ್ಮಕವಾಗಿಯೂ ಒತ್ತಡ ಹೇರಿದೆ. 2009ರಲ್ಲಿ ಲಾಹೋರ್‌ನಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡದ ಬಸ್ ಮೇಲೆ ಉಗ್ರರ ದಾಳಿ ನಡೆದ ನಂತರ, ವಿಶ್ವದ ಯಾವುದೇ ತಂಡವು ಪಾಕಿಸ್ತಾನಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದವು. ಪಾಕಿಸ್ತಾನ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಏಕಾಂಗಿಯಾಗಿತ್ತು. ಅಂತಹ ಕಠಿಣ ಮತ್ತು ಸೂಕ್ಷ್ಮ ಸನ್ನಿವೇಶದಲ್ಲಿ ಶ್ರೀಲಂಕಾ ತಂಡವು ಪಾಕಿಸ್ತಾನಕ್ಕೆ ಪ್ರವಾಸ ಕೈಗೊಂಡು ಕ್ರಿಕೆಟ್ ಪುನಶ್ಚೇತನಕ್ಕೆ ನೆರವಾಗಿತ್ತು. ಭದ್ರತಾ ಆತಂಕಗಳಿದ್ದಾಗಲೂ ಶ್ರೀಲಂಕಾ ತೋರಿದ ಧೈರ್ಯ ಮತ್ತು ಸ್ನೇಹಹಸ್ತವನ್ನು ಪಿಸಿಬಿ ಸ್ಮರಿಸಿಕೊಳ್ಳಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಅಂದು ನಾವು ನಿಮ್ಮ ಬೆಂಬಲಕ್ಕೆ ನಿಂತಿದ್ದೆವು, ಇಂದು ಆತಿಥೇಯರಾಗಿ ನಮಗೆ ನಿಮ್ಮ ಸಹಕಾರ ಬೇಕಿದೆ ಎಂಬ ಸಂದೇಶವನ್ನು ಶ್ರೀಲಂಕಾ ರವಾನಿಸಿದೆ. ಪರಸ್ಪರ ಸಹಕಾರದ ಮನೋಭಾವ ಇಂದಿಗೂ ಉಳಿಯಬೇಕು ಮತ್ತು ಶ್ರೀಲಂಕಾ ಒದಗಿಸುವ ಭದ್ರತೆ ಹಾಗೂ ವೃತ್ತಿಪರತೆಯ ಮೇಲೆ ಪಾಕಿಸ್ತಾನ ನಂಬಿಕೆ ಇಡಬೇಕು ಎಂದು ಎಸ್‌ಎಲ್‌ಸಿ ಕೋರಿದೆ.
250 ಮಿಲಿಯನ್ ಡಾಲರ್ ನಷ್ಟದ ಅಂದಾಜು!
ವರದಿಗಳ ಪ್ರಕಾರ, ಒಂದು ವೇಳೆ ಭಾರತ ಮತ್ತು ಪಾಕಿಸ್ತಾನ ನಡುವಿನ ಈ ಪಂದ್ಯ ನಡೆಯದಿದ್ದರೆ, ಸುಮಾರು 250 ಮಿಲಿಯನ್ ಅಮೆರಿಕನ್ ಡಾಲರ್‌ನಷ್ಟು (ಅಂದಾಜು 2000 ಕೋಟಿಗೂ ಅಧಿಕ ರೂಪಾಯಿ) ಭಾರೀ ಆರ್ಥಿಕ ನಷ್ಟ ಸಂಭವಿಸುವ ಸಾಧ್ಯತೆಯಿದೆ. ಇದು ಐಸಿಸಿ ಮತ್ತು ಪ್ರಸಾರಕರಿಗೆ ದೊಡ್ಡ ಹೊಡೆತವಾಗಿದೆ. ವಾಣಿಜ್ಯಿಕವಾಗಿ, ರಾಜತಾಂತ್ರಿಕವಾಗಿ ಮತ್ತು ಲಾಜಿಸ್ಟಿಕ್ಸ್ ದೃಷ್ಟಿಯಿಂದ ಈ ಪಂದ್ಯ ಅತ್ಯಂತ ಮಹತ್ವದ್ದಾಗಿದೆ. ಈ ಬೆಳವಣಿಗೆಗಳ ನಡುವೆ, ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರು ಕೊಲಂಬೊದಲ್ಲಿ ನಿಗದಿಯಾಗಿರುವ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಭಾರತ ತಂಡ ಪ್ರಯಾಣಿಸಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ಪಾಕಿಸ್ತಾನದ ನಾಯಕ ಸಲ್ಮಾನ್ ಅಘಾ, ತಮ್ಮ ತಂಡವು ಸರ್ಕಾರದ ನಿರ್ದೇಶನಗಳಿಗೆ ಅನುಗುಣವಾಗಿ ನಡೆಯಲಿದೆ ಎಂದು ಹೇಳಿಕೆ ನೀಡಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಚೆಂಡು ಪಾಕಿಸ್ತಾನದ ಅಂಗಳದಲ್ಲಿದ್ದು, ಮುಂದಿನ ದಿನಗಳಲ್ಲಿ ಪಿಸಿಬಿ ತೆಗೆದುಕೊಳ್ಳುವ ನಿರ್ಧಾರವು ಟೂರ್ನಿಯ ಭವಿಷ್ಯವನ್ನು ನಿರ್ಧರಿಸಲಿದೆ.
ಇದನ್ನೂ ಓದಿ : ಮಹಿಳಾ ಪ್ರೀಮಿಯರ್ ಲೀಗ್ 2026 | ಮಂದಾನ-ವೋಲ್ ಬ್ಯಾಟಿಂಗ್ ಅಬ್ಬರಕ್ಕೆ ನಲುಗಿದ ಡೆಲ್ಲಿ, RCB ಮುಡಿಗೇರಿತು 2ನೇ ಕಿರೀಟ!


















