ಚಾಮರಾಜನಗರ : ವೈದ್ಯರ ಎಡವಟ್ಟಿನಿಂದ ಆರು ತಿಂಗಳ ಮಗು ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರು ತಿಂಗಳ ಹಿಂದೆ ನಡೆದಿದೆ.
ಹಂಗಳ ಗ್ರಾಮದ ಮಾನಸ ಮತ್ತು ಆನಂದ್ ದಂಪತಿಯ ಆರು ತಿಂಗಳ ಮಗು ಪ್ರಖ್ಯಾತ್ ವೈದ್ಯರ ನಿರ್ಲಕ್ಷ್ಯದಿಂದ ಮೃತಪಟ್ಟಿದೆ.
ಆರು ತಿಂಗಳ ಮಗುವಿಗೆ ಕಿವಿ ಚುಚ್ಚಲು ವೈದ್ಯರು ಅನಸ್ತೇಷಿಯಾ ಕೊಟ್ಟಿದ್ದರು. ಆ ಬಳಿಕ ಮಗು ಮೃತಪಟ್ಟಿದೆ. ಅನಸ್ತೇಷಿಯಾದಿಂದ ಶ್ವಾಸಕೋಶ ಹಾಗೂ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿ ಮಗು ಸಾವನ್ನಪ್ಪಿದೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ದೃಢವಾಗಿದೆ.
ಡಾ. ನಾಗರಾಜು ಎನ್ನುವವರು ಮಗುವಿಗೆ ಅನಸ್ತೇಷಿಯಾ ನೀಡಿದ್ದು, ಅವರ ನಿರ್ಲಕ್ಷ್ಯದಿಂದ ಈ ಅವಘಡ ಸಂಭವಿಸಿರುವುದು ದೃಢವಾದರೂ, ಪೊಲೀಸರು ವೈದ್ಯರ ವಿರುದ್ದ ಎಫ್‌ಐಆರ್ ದಾಖಲಿಸಿಕೊಳ್ಳದೆ, ಮೀನಮೇಷ ಎಣಿಸುತ್ತಿದ್ದಾರೆಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿ, ಮಗುವಿನ ಸಾವಿಗೆ ನ್ಯಾಯ ದೊರಕಿಸಿಕೊಡಿ ಎಂದು ಆಗ್ರಹಿಸಿದ್ದಾರೆ.