ರಾಮನಗರ: ಧರ್ಮಸ್ಥಳದ ಪ್ರಕರಣದ ಊಹಾಪೋಹಗಳಿಗೆ ಅಂತ್ಯ ಹಾಡಲು ಈ ತನಿಖೆ ಅವಶ್ಯಕತೆ ಇತ್ತು ಇನ್ಮುಂದೆ ಧರ್ಮಾಧಿಕಾರಿಗಳು ನಿರಾಳರಾಗುತ್ತಾರೆ. ಇದುವರೆಗೂ ಅವರ ಮನಸ್ಸಿನಲ್ಲಿಯೂ ಗೊಂದಲ ಇತ್ತು, ಸತ್ಯ ಹೊರಬಂದ ನಂತರ ಅವರಗೆ ಹಾಗೂ ಅವರ ಕುಟುಂಬಕ್ಕೆ ನಿರಾಳವಾಗುತ್ತದೆ ಎಂದು ಶಾಸಕ ಹೆಚ್.ಸಿ.ಬಾಲಕೃಷ್ಣ ಹೇಳಿದ್ದಾರೆ.
ರಾಮನಗರದಲ್ಲಿ ಸುದ್ದಿಗಾರರಿಗೆ ಸ್ಪಂದಿಸಿ ಮಾತನಾಡಿದ ಬಾಲಕೃಷ, ಎಸ್ ಐಟಿ ತನಿಖೆಯಿಂದ ಸತ್ಯ ಹೊರಬಂದರೆ ಧರ್ಮಸ್ಥಳಕ್ಕೂ ಗೌರವ ಜಾಸ್ತಿಯಾಗುತ್ತದೆ. ಇನ್ಮುಂದೆ ಬೇರೆ ಘಟನೆಗಳಿಗೆ ಸರ್ಕಾರ ಅವಕಾಶ ಕೊಡುವುದಿಲ್ಲ, ತಪ್ಪಿದ್ದರೆ ಎಸ್ ಐಟಿ ಮುಂದೆ ಒಪ್ಪಿಕೊಳ್ಳಲೇಬೇಕು ಯಾರು ತಪ್ಪು ಮಾಡಿಸಿದ್ದಾರೋ ಅವರನ್ನು ಒಳಗೆ ಹಾಕುತ್ತಾರೆ. ಇದು ಸಾಮಾನ್ಯ ತನಿಖೆ ಅಲ್ಲ, ಸಿಎಂ ಮತ್ತು ಡಿಸಿಎಂ ಧರ್ಮಸ್ಥಳಕ್ಕೆ ಅಂಟಿರುವ ಕೊಳೆ ಹೋಗಬೇಕೆಂದು ಎಸ್ ಐಟಿ ರಚನೆ ಮಾಡಿದ್ದು, ಇದರಿಂದ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಹೋಗುತ್ತಾರೆ, ಗೌರವ ಹೆಚ್ಚಾಗುತ್ತದೆ ಎಂದು ತಿಳಿಸಿದ್ದಾರೆ.
ನಮ್ಮ ಸರ್ಕಾರ ಇರುವುದೇ ಬೊಟ್ಟು ಮಾಡಿಸಿಕೊಳ್ಳಲು, ಬೊಟ್ಟು ಮಾಡಿದರು ಸತ್ಯ ಏನೆಂದು ಜನರಿಗೆ ಗೊತ್ತಾಯಿತು ಬಿಜೆಪಿಯವರ ಬಗ್ಗೆ ಯಾಕೆ ಮಾತನಾಡುತ್ತೀರಿ ಎಂದು ಸರ್ಕಾರದ ವಿರುದ್ಧ ಬಿಜೆಪಿ ಬೊಟ್ಟು ಮಾಡಿರುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿ, ‘ಚಕ್ಕ ಬಿದ್ದರೆ ಚಕ್ಕ, ಬಾರ ಬಿದ್ದರೆ ಬಾರ’ ಎಂದು ಬಿಜೆಪಿ ವಿರುದ್ಧ ಲೇವಡಿ ಮಾಡುತ್ತಾ, ಅವರ ಸರ್ಕಾರ ಇದ್ದಾಗಲೇ ಇದನ್ನೆಲ್ಲ ತನಿಖೆ ಮಾಡಿ ಆರೋಪ ಮುಕ್ತ ಮಾಡಬಹುದಿತ್ತಲ್ಲ, ಬಿಜೆಪಿಯವರು ಯಾವಾಗಲೂ ಧರ್ಮಾಧಾರಿತ ರಾಜಕಾರಣ ಮಾಡುತ್ತಾರೆ. ಅವರಿಗೆ ನ್ಯಾಯ, ಸತ್ಯ ಯಾವುದು ಹೊರಬರಬಾರದು ಎಂದು ಹೇಳಿದ್ದಾರೆ.
ಬಿಜೆಪಿಯವರು ಓಟಿನ ರಾಜಕಾರಣದ ಸತ್ಯ ಹೊರಬರುತ್ತದೆ ಎಂದು ಗೊತ್ತಾಗುತ್ತಿದ್ದಂತೆ ಓಡಿ ಹೋದರು, ಈಗ ಇದರ ಲಾಭ ಪಡೆಯಲು ಮೊದಲು ಸ್ವಾಗತ ಬಯಸಿದರು, ಈಗ ಧರ್ಮಯುದ್ದದ ಹೆಸರಿನಲ್ಲಿ ವೀರಾವೇಶದಲ್ಲಿ ಹೋರಾಟಕ್ಕೆ ಹೊರಟಿದ್ದಾರೆ. ತನಿಖೆ ನಡೆಸುವಾಗ ಮಧ್ಯ ಪ್ರವೇಶಿಸಬಾರದೆಂಬ ಕನಿಷ್ಟ ಜ್ಞಾನ ಸಹ ಇಲ್ಲ, ಈ ರೀತಿಯ ಷಡ್ಯಂತ್ರಕ್ಕೆ ಇನ್ನುಮುಂದೆ ಆಸ್ಪದ ಇರಿವುದಿಲ್ಲ ಎಂದು ತಿಳಿಸಿದ್ದಾರೆ.
ಸದನದಲ್ಲಿ ಡಿಸಿಎಂ ಡಿಕೆಶಿ ಆರ್‌ಎಸ್‌ಎಸ್ ಗೀತೆ ಹೇಳಿರುವ ವಿಚಾರವಾಗಿ ಮಾತನಾಡಿ, ಆರ್‌ಎಸ್‌ಎಸ್ ಗೀತೆಯನ್ನು ಅವರು ಗುತ್ತಿಗೆ ಪಡೆದಿಲ್ಲ. ಅದು ಆರ್‌ಎಸ್‌ಎಸ್ ಪ್ರಾರ್ಥನಾ ಗೀತೆ ಅಲ್ಲ, ದೇಶದ ಪ್ರಾರ್ಥನಾ ಗೀತೆ ಯಾರೋ ರಚನೆ ಮಾಡಿದ್ದಾರೆ, ಇಂತಹವರೇ ಹಾಡಬೇಕೆಂದು ಇಲ್ಲ ಎಂದು ಕಿಡಿಕಾರಿದ್ದಾರೆ.