ಉತ್ತರಕನ್ನಡ/ಶಿರಸಿ : ಮಲೆನಾಡು ಹಾಗೂ ಉತ್ತರಕರ್ನಾಟಕ ಭಾಗಕ್ಕೆ ಪ್ರಮುಖ ಸಂಪರ್ಕ ಕೊಂಡಿಯಾದ ಶಿರಸಿ-ಹಾವೇರಿ ಹೆದ್ದಾರಿಯು ಈಗ ವಾಹನ ಸವಾರರ ಪಾಲಿಗೆ ನರಕಸದೃಶವಾಗಿ ಪರಿಣಮಿಸಿದೆ. ಸುಸಜ್ಜಿತವಾಗಿರಬೇಕಾದ ಈ ಹೆದ್ದಾರಿಯು ಸಂಪೂರ್ಣವಾಗಿ ಕೆಸರು ಗದ್ದೆಯಂತಾಗಿದ್ದು, ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ರಸ್ತೆ ಕಾಮಗಾರಿಯು ನಿಧಾನಗತಿಯಲ್ಲಿ ಸಾಗುತ್ತಿರುವುದರಿಂದ ಶಿರಸಿ-ಹಾವೇರಿ ರಾಷ್ಟೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಭಾರೀ ಅಡಚಣೆ ಉಂಟಾಗುತ್ತಿದೆ. ಕಳೆದ ಎರಡು ದಿನಗಳಿಂದ ಈ ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದ ರಸ್ತೆಯು ಕೆಸರು ಗದ್ದೆಯಂತಾಗಿ ವಾಹನ ಸವಾರರು ಅಪಾಯದ ಭಯದಲ್ಲೇ ಸಂಚರಿಸುವಂತಾಗಿದೆ.
ಇನ್ನೊಂದೆಡೆ ರಾಜ್ಯದ ಪ್ರಸಿದ್ಧ ಶಿರಸಿ ಶ್ರೀ ಮಾರಿಕಾಂಬಾ ದೇವಿ ಜಾತ್ರೆಯು ಆರಂಭವಾಗಿದ್ದು, ಜಾತ್ರೆಗೆ ಬರುವ ಭಕ್ತರು ಹೈರಣಾಗಿದ್ದಾರೆ. ಈ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಶಾಸಕರು ಸಂಸದರು ವ್ಯವಸ್ಥೆ ಸರಿಪಡಿಸದೆ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ದ್ವಿಚಕ್ರ ವಾಹನ ಸವಾರರ ಸ್ಥಿತಿಯಂತೂ ಇನ್ನೂ ಭೀಕರವಾಗಿದೆ. ರಸ್ತೆಯ ಉದ್ದಕ್ಕೂ ಹರಡಿರುವ ಕೆಸರಿನಲ್ಲಿ ಬೈಕ್ ಚಕ್ರಗಳು ಸ್ಕಿಡ್ ಆಗುತ್ತಿದ್ದು, ನಿಯಂತ್ರಣ ತಪ್ಪಿ ಸವಾರರು ಕೆಸರಿನಲ್ಲೇ ಉರುಳಿ ಬೀಳುತ್ತಿದ್ದಾರೆ. ಶಾಲಾ ಮಕ್ಕಳು ಮತ್ತು ವೃದ್ಧರು ಈ ಕೆಸರು ಹಾದಿಯಲ್ಲಿ ನಡೆಯಲು ಸಾಧ್ಯವಾಗದೆ ಇಕ್ಕಟ್ಟಿಗೆ ಸಿಲುಕಿದ್ದಾರೆ. ರಸ್ತೆಯೋ ಅಥವಾ ಹೂಳು ತುಂಬಿದ ಹಳ್ಳವೋ ಎಂಬಂತಿರುವ ಈ ಮಾರ್ಗದಲ್ಲಿ ಪ್ರತಿನಿತ್ಯ ಅಪಘಾತಗಳು ಸಂಭವಿಸುತ್ತಿವೆ.
ಇದನ್ನೂ ಓದಿ : ಟಿ20 ವಿಶ್ವಕಪ್ ಸೆಮಿಫೈನಲ್ ರೇಸ್ | ಭಾರತದ ಮುಂದಿನ ಹಾದಿ ಹೇಗಿದೆ? ಇಲ್ಲಿದೆ ಲೆಕ್ಕಾಚಾರ



















