ಬೆಂಗಳೂರು: ಷೇರು ಮಾರುಕಟ್ಟೆ ದಿನೇದಿನೆ ಕುಸಿಯುತ್ತಿದೆ. ಕಳೆದ ಆರು ತಿಂಗಳಲ್ಲಿ ಷೇರು ಮಾರುಕಟ್ಟೆಯು ಶೇ.10ರಷ್ಟು ಕುಸಿತ ಕಂಡಿದೆ. ಇದರಿಂದಾಗಿಮ್ಯೂಚುವಲ್ ಫಂಡ್ ಎಸ್ಐಪಿಯಲ್ಲಿ (SIP) ಹೂಡಿಕೆ ಮಾಡಿದವರಿಗೂ ನಷ್ಟವಾಗುತ್ತಿದೆ. ದಿನ ಕಳೆದಂತೆ ಹೂಡಿಕೆಯ ಮೊತ್ತವು ಮೈನಸ್ ಆಗುತ್ತಲೇ ಬರುತ್ತಿದೆ. ಸಹಜವಾಗಿಯೇ, ಎಸ್ಐಪಿ ಹೂಡಿಕೆದಾರರಿಗೆ ಹಣ ಹಿಂಪಡೆಯುವ ಆಲೋಚನೆ ಬಂದಿರುತ್ತದೆ. ಆದರೆ, ಷೇರು ಮಾರುಕಟ್ಟೆ ಕುಸಿಯುವ ಸಮಯದಲ್ಲಿ ಎಸ್ಐಪಿ ನಿಲ್ಲಿಸಬೇಕೆ? ತಜ್ಞರು ಹೇಳುವುದೇನು? ಇದಕ್ಕೂ ಮೊದಲು ಷೇರು ಮಾರುಕಟ್ಟೆ ಕುಸಿದಾಗಲೆಲ್ಲ ಏನಾಗಿತ್ತು? ಮುಂದೆ ಓದಿ…
ಮಾರುಕಟ್ಟೆಯಲ್ಲಿ ಏನಾಗುತ್ತಿದೆ?
ಷೇರು ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಡೊನಾಲ್ಡ್ ಟ್ರಂಪ್ ಸುಂಕದ ಸಮರ, ಅಮೆರಿಕ ಷೇರು ಮಾರುಕಟ್ಟೆ ಕುಸಿತ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್ಐಐ) ಹಣ ಹಿಂಪಡೆಯುವುತ್ತಿರುವುದು ಸೇರಿ ಹಲವು ಕಾರಣಗಳಿಂದ ಮಾರುಕಟ್ಟೆಯಲ್ಲಿ ಕರಡಿ ಕುಣಿತ ಜೋರಾಗಿದೆ. ಹಾಗಾಗಿ, ಕಳೆದ ಮೂರು ತಿಂಗಳಲ್ಲಿ ಈಕ್ವಿಟಿ ಮ್ಯೂಚುವಲ್ ಫಂಡ್ ಗಳು ಶೇ.7-13ರಷ್ಟು ಕುಸಿದಿವೆ. ಇದರಿಂದಾಗಿ, ಮೂರು ತಿಂಗಳ ಹಿಂದೆ 1 ಲಕ್ಷ ಹೂಡಿಕೆ ಮಾಡಿದವರ ಪೋರ್ಟ್ ಫೋಲಿಯೋ ಈಗ 93-87 ಸಾವಿರ ರೂ.ಗೆ ಇಳಿದಿದೆ. ಇದರಿಂದಾಗಿ ಹೂಡಿಕೆದಾರರಲ್ಲಿ ಆತಂಕ ಸೃಷ್ಟಿಯಾಗಿದೆ.
ಎಸ್ಐಪಿ ನಿಲ್ಲಿಸುವುದು ಸೂಕ್ತವೇ?
ಕಳೆದ ಎರಡು-ಮೂರು ವರ್ಷಗಳಿಂದ ಪ್ರತಿ ತಿಂಗಳು ಎಸ್ಐಪಿ ಕಟ್ಟುತ್ತಿದ್ದೀರಿ. ನೀವು ಹೂಡಿಕೆ ಮಾಡಿದ ಮೊತ್ತವು ನಿಧಾನಕ್ಕೆ ದೊಡ್ಡದಾಗುತ್ತಿದೆ. ಈಗ ಮಾರುಕಟ್ಟೆ ಕುಸಿಯುತ್ತಲೇ ನೀವು ಹೂಡಿಕೆಯನ್ನು ಹಿಂಪಡೆದರೆ ನಷ್ಟವೇ ಉಂಟಾಗುತ್ತದೆ. ಮಾರುಕಟ್ಟೆಯಲ್ಲಿ ಏರಿಳಿತ ಸಾಮಾನ್ಯವಾಗಿದ್ದು, ಒಂದೆರಡು ವರ್ಷಗಳಲ್ಲಿ ಖಂಡಿತವಾಗಿಯೂ ಪುಟಿದೇಳಲಿದೆ. ಆಗ ಎಸ್ಐಪಿ ಹೂಡಿಕೆದಾರರಿಗೆ ಒಳ್ಳೆಯ ರಿಟರ್ನ್ಸ್ ಬರುತ್ತದೆ ಎನ್ನುತ್ತಾರೆ ತಜ್ಞರು.
ಎಸ್ಐಪಿಯು ಸುದೀರ್ಘ ಅವಧಿಯ ಹೂಡಿಕೆಯಾಗಿರುವ ಕಾರಣ ತಾತ್ಕಾಲಿಕವಾಗಿ ಕುಸಿತ ಕಾಣುತ್ತಲೇ ಅದನ್ನು ಹಿಂಪಡೆಯುವುದು ನಷ್ಟಕ್ಕೆ ಕಾರಣವಾಗುತ್ತದೆ. ವೈಟ್ ಓಕ್ ಕ್ಯಾಪಿಟಲ್ ಮ್ಯೂಚುವಲ್ ಫಂಡ್ ಸಂಸ್ಥೆಯು 1994ರಿಂದ 2004ರವರೆಗಿನ ಅಂಕಿ-ಅಂಶಗಳನ್ನು ವಿಶ್ಲೇಷಣೆ ಮಾಡಿ ವರದಿ ತಯಾರಿಸಿದ್ದು, ಈಗ ಎಸ್ಐಪಿ ನಿಲ್ಲಿಸಿದರೆ ನಷ್ಟವೇ ಆಗುತ್ತದೆ ಎಂದು ತಿಳಿಸಿದೆ.
ಎಸ್ಐಪಿ ಇತಿಹಾಸ ಏನು ಹೇಳುತ್ತದೆ?
2008ರಲ್ಲೂ ಷೇರು ಮಾರುಕಟ್ಟೆ ಇನ್ನಿಲ್ಲದಂತೆ ಕುಸಿದಿತ್ತು. ನಿಫ್ಟಿ ಸ್ಮಾಲ್ ಕ್ಯಾಪ್ 250 ಟಿಆರ್ ಇಂಡೆಕ್ಸ್ ಶೇ.75ರಷ್ಟು ಕುಸಿದಿತ್ತು. 2009ರಲ್ಲೂ ಇದೇ ಪರಿಸ್ಥಿತಿ ಎದುರಾಗಿತ್ತು. 2018ರಿಂದ 2019ರ ಆಗಸ್ಟ್ ಅವಧಿಯಲ್ಲೂ ಶೇ.42ರಷ್ಟು ಕುಸಿದಿತ್ತು. ಇದಾದ ಕೆಲ ವರ್ಷಗಳಲ್ಲಿಯೇ ಎಸ್ಐಪಿಯು ಮೇಲ್ಮುಖದತ್ತ ಸಾಗಿತು. ಹೂಡಿಕೆದಾರರಿಗೆ ಲಾಭವನ್ನೇ ನೀಡಿತು. ಹಾಗಾಗಿ, ಈಗ ಷೇರು ಮಾರುಕಟ್ಟೆ ಕುಸಿಯಿತು ಎಂದು ಎಸ್ಐಪಿ ನಿಲ್ಲಿಸುವುದು ಸೂಕ್ತವಲ್ಲ ಎಂಬುದು ತಜ್ಞರ ಅಭಿಪ್ರಾಯವಾಗಿದೆ.