ವರದಕ್ಷಿಣೆಗಾಗಿ ಗರ್ಭಿಣಿಯ ಕೈ-ಕಾಲು ಕತ್ತರಿಸಿ, ಸಜೀವ ದಹನ ಮಾಡಿರುವ ಘಟನೆಯೊಂದು ನಡೆದಿದೆ.
ಈ ಘಟನೆ ಮಧ್ಯಪ್ರದೇಶದ ರಾಜ್ ಗರ್ ನಲ್ಲಿ ನಡೆದಿದೆ. ರೀನಾ ತನ್ವರ್(23) ಕೊಲೆಯಾದ ದುರ್ದೈವಿ ಗರ್ಭಿಣಿ. ಪತಿ ಸೇರಿದಂತೆ ಆತನ ಕುಟುಂಬಸ್ಥರು ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ವರದಕ್ಷಿಣೆ ತರಲು ಒಪ್ಪದಿದ್ದಕ್ಕೆ ಗರ್ಭಿಣಿಯಾಗಿರುವಾಗಲೇ ಬರ್ಬರವಾಗಿ ಕೊಲೆ ಮಾಡಿರುವುದಾಗಿ ಯುವತಿ ಪೋಷಕರು ಆರೋಪಿಸಿದ್ದಾರೆ.
ಗರ್ಭಿಣಿ ಯುವತಿಯ ಕೈ ಮತ್ತು ಕಾಲುಗಳನ್ನು ತುಂಡರಿಸಿ, ಹತ್ಯೆಗೈದು ಮತ್ತು ಆಕೆಯ ವಿರೂಪಗೊಂಡ ದೇಹಕ್ಕೆ ಬೆಂಕಿ ಹಚ್ಚಲಾಗಿದೆ. ಯುವತಿಯ ತಂದೆ ರಾಮಪ್ರಸಾದ್ ತನ್ವಾರ್ ಪೊಲೀಸರೊಂದಿಗೆ ಸ್ಥಳಕ್ಕೆ ಆಗಮಿಸಿದಾಗ, ಆಕೆಯ ಗಂಡ ಹಾಗೂ ಅತ್ತೆ ಆಕೆಯ ಉರಿಯುತ್ತಿರುವ ಚಿತೆ ಬಿಟ್ಟು ಓಡಿ ಹೋಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ರೀನಾ ಅವರ ಕುಟುಂಬ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿತ್ತು. ಆಕೆಯ ಅರ್ಧ ಸುಟ್ಟ ದೇಹವನ್ನು ಹೊರತೆಗೆದು ನಂತರ ಬಟ್ಟೆಯಲ್ಲಿ ಸುತ್ತಿ ಶವಪರೀಕ್ಷೆಗೆ ಕಳುಹಿಸಲಾಗಿದೆ. 5 ವರ್ಷದ ಹಿಂದೆ 19 ವರ್ಷದ ರೀನಾಳನ್ನು ಪೋಷಕರು ಮಿಥುನ್‌ಗೆ ಮದುವೆ ಮಾಡಿ ಕೊಟ್ಟಿದ್ದರು. ಈ ದಂಪತಿಗೆ ಒಂದು ಹೆಣ್ಣು ಮಗು ಇತ್ತು. 2ನೇ ಮಗುವಿಗಾಗಿ ಮತ್ತೆ ಗರ್ಭಿಣಿಯಾಗಿದ್ದರು. ಈ ವೇಳೆ ಈ ಘಟನೆ ನಡೆದಿದೆ.