ಹುಬ್ಬಳ್ಳಿ: ಮಗಳ ತಂಟೆಗೆ ಬರಬೇಡ ಎಂದು ಬುದ್ಧಿ ಹೇಳಿದ್ದ ಮಹಿಳೆಗೆ ಯುವಕ ಚಾಕು ಇರಿದ ಘಟನೆ ನಡೆದಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮೇಲೆ ಪೊಲೀಸರು ಫೈರಿಂಗ್ ಮಾಡಿ ವಶಕ್ಕೆ ಪಡೆದಿದ್ದಾರೆ.
ಈ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಆರೋಪಿಯು ವಿಚಾರಣೆ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿ, ಪರಾರಿಯಾಗಲು ಮುಂದಾದಾಗ ಆತ್ಮರಕ್ಷಣೆಗೆ ಪೊಲೀಸರು ಫೈರಿಂಗ್ ಮಾಡಿ ಅರೆಸ್ಟ್ ಮಾಡಿದ್ದಾರೆ.
ನೀಲಾ ಹಂಪಣ್ಣವರ ಎಂಬುವವರಿಗೆ ಆರೋಪಿ ಚಾಕು ಇರಿದಿದ್ದಾನೆ. ಆನಂತರ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ಸದ್ಯ ಆರೋಪಿ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಈ ವಿಷಯವಾಗಿ ಮಾತನಾಡಿರುವ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ಶಶಿಕುಮಾರ್, ಆರೋಪಿಯು ಲೋಹಿಯಾ ನಗರದಲ್ಲಿನ ನೀಲಾ ಹಂಪಣ್ಣವರ ಎಂಬುವವರ ಮನೆಗೆ ನುಗ್ಗಿ ಚಾಕು ಇರಿದಿದ್ದಾನೆ. ಅಲ್ಲದೇ, ಸಿಕ್ಕ ಸಿಕ್ಕವರಿಗೆ ಬೆದರಿಕೆ ಕೂಡ ಹಾಕಿದ್ದ. ಗಾಯಾಳು ನೀಲಾ ಹಂಪಣ್ಣನವರಿಗೆ ಒಟ್ಟು ಐದು ಜನ ಹೆಣ್ಣುಮಕ್ಕಳಿದ್ದಾರೆ.
ಆ ಪೈಕಿ ಓರ್ವ ಮಗಳ ಹಿಂದೆ ಬಿದ್ದಿದ್ದಾನೆ. ಅಲ್ಲದೇ, ಮದುವೆಯಾಗುವಂತೆ ಒತ್ತಾಯಿಸಿದ್ದಾನೆ. ಹಲವು ವರ್ಷಗಳ ಹಿಂದೆಯೂ ಹೀಗೆ ಮಾಡಿದ್ದ. ಆಗ ಸರಿ ಮಾಡಲಾಗಿತ್ತು. ಆದರೆ, ಇಂದು ಮತ್ತೆ ಮನೆಗೆ ನುಗ್ಗಿ ಚಾಕು ಇರಿದಿದ್ದಾನೆ.
ಅದೃಷ್ಟವಶಾತ್ ಪ್ರಾಣಾಪಯದಿಂದ ಪಾರಾಗಿದ್ದಾರೆ. ಆತ ಚಾಕು ಇರಿಯಬೇಕು ಎನ್ನುವ ಉದ್ದೇಶಕ್ಕಾಗಿ ಸ್ನೇಹಿತರ ಬಳಿ ಸಾಲ ಕೂಡ ಮಾಡಿದ್ದ. ಅರೆಸ್ಟ್ ಮಾಡಿದಾಗ ಸ್ನೇಹಿತರನ್ನು ತೋರಿಸುತ್ತೇನೆಂದು ಕರೆದುಕೊಂಡು ಹೋಗಿದ್ದ. ಆಗ ಪೊಲೀಸರ ಮೇಲೆ ಹಲ್ಲೆ ಮಾಡಿ, ಪರಾರಿಯಾಗಲು ಯತ್ನಿಸಿದ್ದಾನೆ. ಆ ವೇಳೆ ಇನ್ಸ್ ಪೆಕ್ಟರ್ ಸುರೇಶ್ ಯಳ್ಳೂರ ಫೈರ್ ಮಾಡಿದ್ದಾರೆ ಎಂದು ಹೇಳಿದ್ದಾರೆ.