ಸಂಗೀತ, ಸಾಹಿತ್ಯ, ಶಿಕ್ಷಣ ಮತ್ತು ಕಲೆಯ ಕೇಂದ್ರವೆಂದು ಕರೆಯಲ್ಪಡುವ ಧಾರವಾಡ, ಪ್ರಸಿದ್ಧ ಹಿಂದೂಸ್ತಾನಿ ಗಾಯಕಿ ಗಂಗೂಬಾಯಿ ಹಾನಗಲ್ ಅವರ ಪರಂಪರೆಯನ್ನು ಗೌರವಿಸುವ ಗಂಗೋತ್ರಿಯ ಪುನಃಸ್ಥಾಪನೆಗಾಗಿ ಕಾತರದಿಂದ ಕಾಯುತ್ತಿದೆ.

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ತಮ್ಮದೇ ಆದ ಸಾಧನೆ ಮಾಡಿರುವವರ ಪೈಕಿಯಲ್ಲಿ ಡಾ. ಗಂಗೂಬಾಯಿ ಹಾನಗಲ್ ಅವರ ಹೆಸರು ಮುಂಚೂಣಿಯಲ್ಲಿರುತ್ತದೆ. ಇಂತಹ ಮೇರು ಗಾಯಕಿ ಹುಟ್ಟಿದ್ದು, ಬೆಳೆದಿದ್ದು ಸಂಗೀತ ಕಾಶಿ ಧಾರವಾಡದಲ್ಲಿ. ಹೀಗಿರುವಾಗ ಇವರು ನೆಲೆಸಿದ್ದ ಮನೆಯನ್ನು ನೋಡಿದರೆ ಎಂತವರೂ ಒಮ್ಮೆ ಗಾಬರಿಯಾಗುತ್ತಾರೆ. ಇದಕ್ಕೆ ಕಾರಣ ಮನೆಯ ಸದ್ಯದ ಸ್ಥಿತಿ. ಯಾರು ಎಷ್ಟೇ ಮನವಿ ಮಾಡಿದರೂ ಈ ಬಗ್ಗೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳದ ಹಿನ್ನಲೆ, ಖ್ಯಾತ ಗಾಯಕಿಯ ಮನೆ ಸಂಪೂರ್ಣ ಕುಸಿಯುವ ಹಂತ ತಲುಪಿದೆ.

ಧಾರವಾಡ ನಗರದ ಶುಕ್ರವಾರ ಪೇಟೆ ಬಡಾವಣೆಯಲ್ಲಿ ಡಾ. ಗಂಗೂಬಾಯಿ ಹಾನಗಲ್ ಅವರ ನಿವಾಸವಿದ್ದು, ಆ ಮನೆಯನ್ನು ಸರ್ಕಾರ ಸ್ಮಾರಕವಾಗಿ ಪರಿವರ್ತಿಸಿತ್ತು. ಇದಾದ ಕೆಲವೇ ವರ್ಷಗಳಲ್ಲಿ ಈ ಮನೆ ಭೂತ ಬಂಗಲೆಯಂತಾಗಿದ್ದು, ಸ್ಮಾರಕದ ಸ್ವರೂಪ ಕಳೆದುಕೊಂಡು ಸಂಪೂರ್ಣ ಪಾಳು ಬಿದ್ದಿದೆ. ಈ ಮನೆಯ ಬಳಿಯೇ ಗಂಗೂಬಾಯಿ ಅವರ ಶಿಷ್ಯ ಬಳಗದಿಂದ ಸಂಗೀತ ತರಗತಿ ನಡೆಯುತ್ತಿತ್ತು. ಪರ ಊರುಗಳಿಂದ ಆಗಮಿಸುತ್ತಿದ್ದ ಸಂಗೀತಾಸಕ್ತರು, ಗಣ್ಯರು ಇಲ್ಲಿಗೆ ಭೇಟಿ ನೀಡುತ್ತಿದ್ದರು. ಇಂತಹ ಜಾಗವೀಗ ಉಪಯೋಗಕ್ಕೆ ಬಾರದ ಸ್ಥಿತಿ ತಲುಪಿದೆ.

ಬಿ.ಎಸ್. ಯಡಿಯೂರಪ್ಪ ಮೊದಲ ಬಾರಿಗೆ ಸಿಎಂ ಆಗಿದ್ದ ಸಂದರ್ಭ 25 ಲಕ್ಷ ರೂಪಾಯಿ ಬಿಡುಗಡೆ ಮಾಡಿದ್ದ ಸರ್ಕಾರ, ಈ ಮನೆಯನ್ನು ಸ್ಮಾರಕವಾಗಿ ಪರಿವರ್ತಿಸಿತ್ತು. 25 ಲಕ್ಷ ರೂಪಾಯಿಗಳ ಪೈಕಿ 10 ಲಕ್ಷ ಹಣದಲ್ಲಿ ಈ ಮನೆಯನ್ನು ವಶಕ್ಕೆ ಪಡೆಯಲಾಗಿತ್ತು. ಉಳಿದ 15 ಲಕ್ಷದಲ್ಲಿ ಮನೆಯನ್ನು ನವೀಕರಿಸಿ ವಸ್ತು ಸಂಗ್ರಹಾಲಯ ಮಾಡಲಾಗಿತ್ತು. ಗಂಗೂಬಾಯಿ ಅವರ 96ನೇ ಜನ್ಮದಿನದಂದು ಅಂದರೆ 2008ರ ಮಾರ್ಚ್ 5ರಂದು ಸ್ಮಾರಕ ಉದ್ಘಾಟನೆಗೊಂಡ ಬಳಿಕ ನಾಲ್ಕು ವರ್ಷ ಎಲ್ಲವೂ ಚೆನ್ನಾಗಿಯೇ ನಡೆದಿತ್ತು. ಆದರೆ ಬಳಿಕ ನಿರ್ವಹಣೆಯನ್ನು ನೋಡಿಕೊಳ್ಳಬೇಕಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ಸ್ಮಾರಕವನ್ನು ಮರತೇ ಬಿಟ್ಟಿದೆ.

ಮನೆಯ ಒಂದೊಂದೇ ಭಾಗ ಬೀಳಲು ಶುರುವಾದ ಬಳಿಕ ಇಲ್ಲಿದ್ದ ಪರಿಕರಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿ ಸೇರಿ ಭದ್ರವಾಗಿವೆ. ಸಣ್ಣ ಪುಟ್ಟ ದುರಸ್ತಿಗಳನ್ನು ನಿರ್ಲಕ್ಷಿಸಿದ್ದರಿಂದ ಇಡೀ ಕಟ್ಟಡವನ್ನೇ ಮತ್ತೊಮ್ಮೆ ನಿರ್ಮಿಸುವ ಸ್ಥಿತಿ ಬಂದೊದಗಿದೆ. ಇದೀಗ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮತ್ತೆ ಎಲ್ಲವನ್ನು ಸರಿಪಡಿಸಬೇಕಿದ್ದು, ಈ ಬಗ್ಗೆ ಲೋಕೋಪಯೋಗಿ ಇಲಾಖೆಗೆ ಪತ್ರವನ್ನೂ ಬರೆಯಲಾಗಿದೆ. ಆದರೆ ವರ್ಷಗಳು ಕಳೆದರೂ ಯಾವೊಬ್ಬ ಅಧಿಕಾರಿಯೂ ಇಲ್ಲಿಗೆ ಬಂದು ಸ್ಥಳ ಪರಿಶೀಲಿಸಿಲ್ಲ. ದುರಸ್ತಿಗೆ ಬೇಕಾದ ಅಂದಾಜು ವೆಚ್ಚದ ನೀಲನಕ್ಷೆಯನ್ನು ತಯಾರಿಸಲೇ ಇಲ್ಲ.
ಹೀಗಾಗಿ ಈ ಮನೆಯ ಬಗೆಗಿನ ನಿರ್ಲಕ್ಷ್ಯ ಹಾಗೆಯೇ ಮುಂದುವರೆದಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಕೂಡಲೇ ಎಲ್ಲರೂ ಇಲ್ಲಿಗೆ ಬಂದು ಹೋಗುತ್ತಾರೆ. ಆದರೆ ಅವರಿಂದ ಯಾವ ಪ್ರಯೋಜನವೂ ಆಗಿಲ್ಲ ಎನ್ನುವುದು ಸ್ಥಳೀಯರ ಆರೋಪವಾಗಿದೆ.