ದಾವಣಗೆರೆ: ಗೃಹಲಕ್ಷ್ಮಿ (Gruha Lakshmi) ಯೋಜನೆಯ ಹಣ (Money) ನೀಡಿಲ್ಲ ಎಂಬ ಕಾರಣಕ್ಕೆ ಪಾಪಿ ಪತಿಯೊಬ್ಬಾತ ಪತ್ನಿಯನ್ನೇ ಕೊಲೆ ಮಾಡಿರುವ ಘಟನೆ ನಡೆದಿದೆ.
ಈ ಘಟನೆ ಜಗಳೂರು ತಾಲೂಕಿನ ಉಜ್ಜಪ್ಪರವಡೇರಹಳ್ಳಿಯಲ್ಲಿ ನಡೆದಿದೆ. ಹತ್ಯೆಗೀಡಾದ ಮಹಿಳೆಯನ್ನು ಸತ್ಯಮ್ಮ (40) ಎಂದು ಗುರುತಿಸಲಾಗಿದೆ. ಅಣ್ಣಪ್ಪ ಕೊಲೆ ಮಾಡಿರುವ ಪಾಪಿ ಪತಿ. ವಿದ್ಯುತ್ ತಂತಿಯತ್ತ ಸತ್ಯಮ್ಮಳನ್ನು ನೂಕಿ ಆರೋಪಿ ಕೊಲೆ ಮಾಡಿ, ಆಕಸ್ಮಿಕ ಸಾವು ಎಂದು ಬಿಂಬಿಸಲು ಯತ್ನಿಸಿದ್ದಾನೆ ಎನ್ನಲಾಗಿದೆ.
ಆರೋಪಿ ಕೆಲಸ ಮಾಡದೆ, ಕುಡಿದು ಸುತ್ತಾಡುತ್ತಿದ್ದ. ಹೀಗಾಗಿ ಪತ್ನಿಗೆ ಹಣ ನೀಡುವಂತೆ ಪೀಡಿಸುತ್ತಿದ್ದ. ಗೃಹಲಕ್ಷ್ಮಿ ಹಣ ಕೊಡುವಂತೆ ಪತ್ನಿಯನ್ನು ಪೀಡಿಸುತ್ತಿದ್ದ. ಹಣ ತರಲು ಮಗನೊಂದಿಗೆ ಬ್ಯಾಂಕ್‌ಗೆ ಹೋದ ಸತ್ಯಮ್ಮನನ್ನು ಹಿಂಬಾಲಿಸಿದ್ದ ಅಣ್ಣಪ್ಪ, ಹಣಕ್ಕಾಗಿ ಪತ್ನಿ ಜತೆ ಜಗಳವಾಡಿ, ಹಲ್ಲೆ ಮಾಡಿದ್ದ. ನಂತರ ಪತ್ನಿಯನ್ನು ಊರಿಗೆ ಬಿಡುವುದಾಗಿ ಬೈಕ್‌ನಲ್ಲಿ ಕರೆದುಕೊಂಡು ಹೋಗಿ ಉಜ್ಜಪ್ಪರವಡೇರಹಳ್ಳಿ ಸಮೀಪದ ನಿರ್ಜನ ಪ್ರದೇಶದಲ್ಲಿ ಬೈಕ್‌ನಿಂದ ಇಳಿಸಿ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ ಎಂದು ಮಹಿಳೆಯ ಸಹೋದರ ಆರೋಪಿಸಿದ್ದಾರೆ. ಈ ಕುರಿತು ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.