ಕಲಬುರಗಿ : ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಚೌಡಾಪುರ ಗ್ರಾಮದಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯೊಬ್ಬ ತನ್ನ ಪತ್ನಿಯನ್ನೇ ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿದ್ದು, ಇದೀಗ ಜಿಲ್ಲೆಯಾದ್ಯಂತ ಸಂಚಲನ ಮೂಡಿಸಿದೆ.
ಶೈಲಾ (28) ಮೃತ ಮಹಿಳೆ. ಈಕೆಯ ಪತಿ ಅಕ್ಷಯ್ ಕೊಲೆ ಮಾಡಿದ ಆರೋಪಿ. ಕಳೆದ ಕೆಲವು ದಿನಗಳಿಂದ ದಂಪತಿಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಘಟನೆಯ ದಿನ ಈ ಜಗಳ ವಿಕೋಪಕ್ಕೆ ಹೋಗಿದ್ದು, ಆಕ್ರೋಶಗೊಂಡ ಪತಿ ಅಕ್ಷಯ್ ಈ ಭೀಕರ ಕೃತ್ಯವೆಸಗಿದ್ದಾನೆ.

ಕಾರಿನಲ್ಲಿ ಪತ್ನಿಯನ್ನು ಕರೆತಂದು ರಸ್ತೆ ಪಕ್ಕದಲ್ಲಿರುವ ಹೊಲದಲ್ಲಿ ನಿಲ್ಲಿಸಿ ಕುಡುಗೋಲಿನಿಂದ ಆಕೆಯ ಕತ್ತನ್ನು ಕೊಯ್ದಿದ್ದಾನೆ. ಬಳಿಕ ರಕ್ತದ ಮಡುವಿನಲ್ಲಿ ತಪ್ಪಿಸಿಕೊಳ್ಳಲು ಜಮೀನನಲ್ಲಿ ಓಡಿ ಹೋಗಿದ್ದಾಳೆ. ಆದರೂ ಬಿಡಿದ ಪಾಪಿ ಪತಿ ಆಕೆ ಮೇಲೆ ಕಾರು ಹಾಯಿಸಿ ಭೀಕರವಾಗಿ ಕೊಂದಿದ್ದಾನೆ. ಪತಿಯ ಪೈಶಾಚಿಕ ಕೃತ್ಯವು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಎದೆ ಝಲ್ ಎನ್ನಿಸುವಂತಿದೆ.
ಮಹಿಳೆಯನ್ನ ಕೊಲೆ ಮಾಡುವ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ. ಹತ್ಯೆಗೈಯ್ಯುತ್ತಿರುವ ಘೋರ ದೃಶ್ಯವನ್ನು ಜನ ನೋಡುತ್ತಲೇ ನಿಂತಿದ್ದರು. ಆದರೆ ಆಕೆಯನ್ನು ಕಾಪಾಡದ ಸ್ಥಿತಿಯಲ್ಲಿ ಎಲ್ಲರೂ ಗಾಬರಿಯಾಗಿದ್ದರು. ಇನ್ನು ಕೆಲವರು ಹಂತಕನ ಮೇಲೆ ಕಲ್ಲುಗಳನ್ನ ಎಸೆದು ಆಕೆಯ ಪ್ರಾಣವನ್ನು ಉಳಿಸುವ ಪ್ರಯತ್ನಿಸಿದ್ದಾರೆ. ಆದ್ರೆ, ಪ್ರಯೋಜನವಾಗಿಲ್ಲ. ಕೊಲೆಯ ದೃಶ್ಯ ಸ್ಥಳೀಯರೊಬ್ಬರ ಮೊಬೈಲ್‌ನಲ್ಲಿ ಸೆರೆಯಾಗಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಅಫಜಲಪುರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ಪತಿ ಅಕ್ಷಯ್‌ನನ್ನು ಪೊಲೀಸರು ತಕ್ಷಣವೇ ವಶಕ್ಕೆ ಪಡೆದಿದ್ದು,ಹತ್ಯೆಗೆ ಬಳಸಿದ ಮಾರಕಾಸ್ತ್ರವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದ್ದು, ಅಫಜಲಪುರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಮಾ.30ಕ್ಕೆ ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ಮುಂದೂಡಿಕೆ



















