ಚಿತ್ರದುರ್ಗ: ಪಾಪಿ ಪತಿಯೊಬ್ಬ ಪತ್ನಿಯ ಶೀಲ ಶಂಕಿಸಿ ಚಿತ್ರ ಹಿಂಸೆ ನೀಡಿರುವ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ.
ಈ ಘಟನೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಪಟ್ಟಣದಲ್ಲಿ ನಡೆದಿದೆ. ಪತ್ನಿಯ ಮೇಲೆ ಅನುಮಾನ ಪಡುತ್ತಿದ್ದ ಪತಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಇಸ್ತ್ರಿ ಪೆಟ್ಟಿಗೆಯಿಂದ ಸುಟ್ಟು ಚಿತ್ರಹಿಂಸೆ ನೀಡಿದ್ದಾನೆ. ಮೊಳಕಾಲ್ಮೂರು ನಿವಾಸಿ ಸಿಎಂ ನಾಗೇಶ್ ಎಂಬಾತನಿಂದ ಈ ಕೃತ್ಯ ನಡೆದಿದೆ.
ಪತ್ನಿ ಪೂಜಾ ಚಿತ್ರಹಿಂಸೆಗೆ ಒಳಗಾದವರು. ಆರೋಪಿಯು ಪತ್ನಿಯ ಮೇಲೆ ಮುದ್ದೆ ಕೋಲಿನಿಂದ ಹೊಡೆದಿದ್ದಲ್ಲದೇ, ದೇಹದ ಹಲವು ಭಾಗಗಳಿಗೆ ಇಸ್ತ್ರಿ ಪೆಟ್ಟಿಗೆಯಿಂದ ಸುಟ್ಟು ಚಿತ್ರಹಿಂಸೆ ನೀಡಿದ್ದಾನೆ ಎನ್ನಲಾಗಿದೆ.
ಗಂಭೀರವಾಗಿ ಗಾಯಗೊಂಡಿರುವ ಮಹಿಳೆ ಮೊಳಕಾಲ್ಮೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಪಿ ನಾಗೇಶ್ ವಿರುದ್ದ ಮೊಳಕಾಲ್ಮೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.