ಕುಂದಾಪುರ: ಬೈಂದೂರು ತಾಲೂಕಿನ ಪ್ರಸಿದ್ಧ ಮರವಂತೆ ಮಹಾರಾಜ ಸ್ವಾಮಿ ವರಾಹ ದೇವರಿಗೆ ಬೆಳ್ಳಿ ರಥವನ್ನು ಭಕ್ತರು ಸಮರ್ಪಿಸಿದರು.
ಹಲವು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಭಾನುವಾರ ರಥ ಸಮರ್ಪಣೆ ಮಾಡಲಾಯಿತು. ಬೆಳ್ಳಿ ರಥ ಸಮರ್ಪಿಸುವ ಹಿನ್ನೆಲೆಯಲ್ಲಿ ದೇವರಿಗೆ ಹೂವಿನ ಅಲಂಕಾರ, ಪೂಜೆ, ಹಣ್ಣು, ಕಾಯಿ ಮತ್ತು ಮಂಗಳಾರತಿ ಸೇವೆ ಹಾಗೂ ಅನ್ನದಾನ ಸೇವೆ ಸಲ್ಲಿಸಲಾಯಿತು.
ಈ ವೇಳೆ ಸಹಸ್ರಾರು ಭಕ್ತರು ಕ್ಷೇತ್ರಕ್ಕೆ ಆಗಮಿಸಿ ದೇವರ ದರ್ಶನ ಪಡೆದರು. ಬೆಳ್ಳಿ ರಥವನ್ನು ಬೃಹತ್ ಮೆರವಣಿಗೆ ಮೂಲಕ ದೇವರಿಗೆ ಅರ್ಪಿಸಲಾಯಿತು. ಮೆರವಣಿಗೆಯು ಶ್ರೀರಾಮ ದೇವಸ್ಥಾನದಿಂದ ಮಹಾರಾಜ ಸ್ವಾಮಿ ವರಾಹ ದೇವಸ್ಥಾನದವರೆಗೆ ಸಾಗಿತು. ರಾಮ ದೇವರಿಗೆ ವಿಶೇಷ ಪೂಜೆ ಸಲ್ಲಿಸುವುದರ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು. ಮಹಿಳೆಯರು ಮತ್ತು ಪುರುಷರು ಸಮವಸ್ತ್ರ ಧರಿಸಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಭಜನೆ, ಕುಣಿತ, ಚಂಡೆ ವಾದನ ಮೆರವಣಿಗೆಯ ಸೊಬಗನ್ನು ಹೆಚ್ಚಿಸಿದವು.

ಈ ಕಾರ್ಯಕ್ರಮವನ್ನು ಅನ್ನಪೂರ್ಣೇಶ್ವರಿ ದೇವಸ್ಥಾನ ಶ್ರೀಕ್ಷೇತ್ರ ಹೊರನಾಡು ಧರ್ಮಕರ್ತರು ಜಿ.ಭೀಮೇಶ್ವರ ಜೋಶಿ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಮರವಂತೆ ವರಾಹ ಸ್ವಾಮಿ ಕ್ಷೇತ್ರಕ್ಕೂ ಜಗನ್ಮಾತೆ ಸನ್ನಿಧಾನಕ್ಕೂ ಅವಿನಾಭವ ಸಂಬಂಧ ಇದೆ. ವಿಷ್ಣುವಿನ ದಶಾವಾತರಗಳಲ್ಲಿ ಪ್ರಮುಖ ಮೂರು ಅವತಾರಗಳು ಇಲ್ಲಿ ನೆಲೆಗೊಂಡಿರುವುದು ಇಲ್ಲಿನ ಜನರ ಭಾಗ್ಯವಾಗಿದೆ. ಒಂದೇ ಕಡೆ ಮೂರು ದೇವರುಗಳ ಅವತಾರಗಳನ್ನು ನೋಡಿ ಕಣ್ತುಂಬಿಕೊಳ್ಳುವ ಭಾಗ್ಯ ಇರುವುದು ಮರವಂತೆ ಕ್ಷೇತ್ರದಲ್ಲಿ ಮಾತ್ರ. ಹೀಗಾಗಿ ಈ ಭಾಗದ ಜನರೇ ಪುಣ್ಯವಂತರು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಭಾರತೀಯ ಸಂಸ್ಕೃತಿ ಪ್ರತಿಷ್ಠಾನ ಉಡುಪಿ ಅಧ್ಯಕ್ಷ ರಾಜಶೇಖರ್ ಹೆಬ್ಬಾರ್ ಮಾತನಾಡಿ, ಭಗವಂತನ ಇಚ್ಚೆಯಂತೆ ರಜತ ಸಮರ್ಪಣೆ ಕಾರ್ಯ ವ್ಯವಸ್ಥಿತವಾಗಿ ನಡೆದಿದೆ. ಇದೊಂದು ಆವಿಸ್ಮರಣೀಯ ಸಂದರ್ಭವಾಗಿದ್ದು, ದೇವಸ್ಥಾನದ ವ್ಯವಸ್ಥಾಪನ ಸಮಿತಿ ಕಾರ್ಯ ಮೆಚ್ಚುವಂತಹದ್ದು ಎಂದು ಹೇಳಿದ್ದಾರೆ.
ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಮಾತನಾಡಿ, ಕೃಷಿ, ಮೀನುಗಾರಿಕೆ ಚಟುವಟಿಕೆಗೆ ಸೇರಿದಂತೆ ಶುಭಕಾರ್ಯಗಳಿಗೆ ಮೊದಲು ಪೂಜೆಯನ್ನು ಮಾಡುವುದು ಇಲ್ಲಿನ ವಾಡಿಕೆ. ಮೀನುಗಾರರು ಹಾಗೂ ಭಕ್ತರ ಸಹಕಾರದಿಂದ ದೇವರಿಗೆ ಬೆಳ್ಳಿ ರಥ ಸಮರ್ಪಣೆ ಮಾಡಿರುವುದು ಖುಷಿ ಕೊಟ್ಟಿದೆ. ಎಲ್ಲರಿಗೂ ಒಳಿತಾಗಲಿ ಎಂದು ಶುಭ ಹಾರೈಸಿದರು.
ವರಾಹ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ ಎಂ ನಾಯಕ್, ಮರವಂತೆ ಗ್ರಾಪಂ ಅಧ್ಯಕ್ಷ ಲೋಕೇಶ್ ಖಾರ್ವಿ, ಜಿಪಂ ಮಾಜಿ ಅಧ್ಯಕ್ಷ ರಾಜು ಪೂಜಾರಿ, ನಿತಿನ್ ನಾರಾಯಣ, ಬೈಂದೂರು ವಲಯ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ನಾಗೇಶ ಖಾರ್ವಿ ಅಳಿವೆಕೋಡಿ, ಕರಾವಳಿ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಸಂಘ ಗಂಗೊಳ್ಳಿ ವಲಯ ಅಧ್ಯಕ್ಷ ಯಶವಂತ ಗಂಗೊಳ್ಳಿ, ನಾಗಲಕ್ಷ್ಮೀ ಸತೀಶ್ ಕೊಠಾರಿ ನಾಯ್ಕನಕಟ್ಟೆ, ಸುಬ್ರಹ್ಮಣ್ಯ ಆಚಾರ್ಯ, ಅನಿತಾ ಆರ್.ಕೆ ಸೇರಿದಂತೆ ಹಲವರು ಇದ್ದರು.
ದೇವಸ್ಥಾನದ ಇತಿಹಾಸ…
ಆದಿನಾರಾಯಣ ಸ್ವಾಮೀಯು ವರಾಹ, ವಿಷ್ಣು, ನರಸಿಂಹ ಸ್ವಾಮಿರೂಪದಲ್ಲಿ ನೆಲೆನಿಂತು ಸಹಸ್ರಾರು ವರ್ಷಗಳಿಂದ ಭಕ್ತರ ಇಷ್ಟಾರ್ಥ ನೆರವೇರಿಸುತ್ತಿರುವ ಪ್ರಸಿದ್ಧ ಕ್ಷೇತ್ರವೇ ಮಹಾರಾಜ ಸ್ವಾಮೀ ವರಾಹ ದೇವಸ್ಥಾನ ಮರವಂತೆ. ಹಿಂದೆ ಬೈಂದೂರು ವಲಯ ನಾಡದೋಣಿ ಮೀನುಗಾರರ ಸಂಘ ಮತ್ತು ಗಂಗೊಳ್ಳಿ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಸಂಘ ಜಂಟಿಯಾಗಿ ಪುಷ್ಪ ರಥವನ್ನು ಭಗವಂತನಿಗೆ ಸಮರ್ಪಿಸಿದ್ದು, ಅಲ್ಲಿಂದ ಇಲ್ಲಿಯವರೆಗೆ ರಥೋತ್ಸವ ನಡೆದುಕೊಂಡು ಬರುತ್ತಿದೆ. ಸದ್ಯದ ವ್ಯವಸ್ಥಾಪನಾ ಸಮಿತಿಯು ಭಗವಂತನನ್ನು ರಜತ ರಥವೇರಿಸಬೇಕೆಂಬ ಅಪೇಕ್ಷೆಯಿಂದ ರಜತ ರಥ ನಿರ್ಮಾಣದ ಸಂಕಲ್ಪದೊಂದಿಗೆ ಹಲವು ಭಕ್ತರನ್ನು ಸಂಪರ್ಕಿಸಿ, ಭಕ್ತರ ಸಹಕಾರದೊಂದಿಗೆ ರಜತ ರಥ ನಿರ್ಮಾಣ ಮಾಡಿಸಿತ್ತು.