ಡಾ. ಮಿಲಿಂದ್ ಶೆಟ್ಟಿ, ಹಿರಿಯ ಸಲಹೆಗಾರ ರೇಡಿಯೇಶನ್ ಆಂಕೊಲಾಜಿಸ್ಟ್,ಎಚ್‌ಸಿಜಿ ಕ್ಯಾನ್ಸರ್ ಕೇಂದ್ರ – ಹುಬ್ಬಳ್ಳಿ
ಮೂಳೆ ಕ್ಯಾನ್ಸರ್ ಹಿಂದೆ ಅಪರೂಪವಾಗಿತ್ತು, ಆದರೆ ಇತ್ತೀಚಿನ ದಿನಗಳಲ್ಲಿ ಇದರ ಪ್ರಕರಣಗಳು ಕ್ರಮೇಣ ಹೆಚ್ಚುತ್ತಿವೆ. ಇದು ಗಂಭೀರವಾದ ಕಾಯಿಲೆಯಾಗಿದ್ದು, ಮಕ್ಕಳು ಮತ್ತು ಯುವಕರನ್ನೂ ಒಳಗೊಂಡಂತೆ ಯಾವುದೇ ವಯಸ್ಸಿನವರನ್ನು ಬಾಧಿಸಬಹುದು. ಇದನ್ನು ಅಪರೂಪವೆಂದು ಪರಿಗಣಿಸಲಾಗಿದ್ದರೂ, ಇದರ ಲಕ್ಷಣಗಳು ಸಾಮಾನ್ಯ ಮೂಳೆ ಅಥವಾ ಕೀಲು ಸಮಸ್ಯೆಗಳನ್ನು ಹೋಲುತ್ತವೆ. ಇದರಿಂದಾಗಿ, ಕಾಯಿಲೆ ಮುಂದುವರಿದ ಹಂತಕ್ಕೆ ತಲುಪುವವರೆಗೂ ಇದನ್ನು ಗುರುತಿಸದಿರುವ ಸಾಧ್ಯತೆ ಹೆಚ್ಚು. ಹಲವು ಸಂದರ್ಭಗಳಲ್ಲಿ, ಆರಂಭಿಕ ಎಚ್ಚರಿಕೆ ಚಿಹ್ನೆಗಳು ಸೂಕ್ಷ್ಮವಾಗಿರುತ್ತವೆ—ಇವು ಕ್ರೀಡಾ ಗಾಯಗಳು, ಬೆಳೆಯುವ ನೋವುಗಳು, ಅಥವಾ ಸಂಧಿವಾತದಂತೆ ಕಾಣಿಸಿಕೊಳ್ಳಬಹುದು. ಈ ಆರಂಭಿಕ ಸುಳಿವುಗಳನ್ನು ಸುಲಭವಾಗಿ ಕಡೆಗಣಿಸಬಹುದಾದ್ದರಿಂದ, ರೋಗನಿರ್ಣಯಕ್ಕೆ ಹೆಚ್ಚಿನ ಗಮನ ನೀಡುವುದು ಅತ್ಯಂತ ಮುಖ್ಯವಾಗಿದೆ.
ತೀವ್ರವಾದ ನೋವು
ನೋವು ಎಂಬುದು ಮೂಳೆ ಕ್ಯಾನ್ಸರ್‌ನ ಆರಂಭಿಕ ಮತ್ತು ಸಾಮಾನ್ಯ ಲಕ್ಷಣವಾಗಿದೆ. ಈ ನೋವು ಸಾಮಾನ್ಯವಾಗಿ ಒಮ್ಮೆಗೆ ತೀವ್ರವಾಗಿ ಅಥವಾ ಹಠಾತ್‌ನಿಂದ ಉಂಟಾಗುವುದಿಲ್ಲ, ಬದಲಿಗೆ ತಿಂಗಳುಗಟ್ಟಲೆ ಕಾಡುವ ಮಂದ, ನಿರಂತರವಾದ ಒತ್ತಡದಂತಹ ನೋವಾಗಿರುತ್ತದೆ. ಗಾಯದಿಂದ ಉಂಟಾಗುವ ನೋವಿಗೆ ಕಾರಣಗಳು ಇದ್ದರೆ, ಇದಕ್ಕೆ ಇಲ್ಲ. ವಿಶ್ರಾಂತಿ ಅಥವಾ ನೋವು ನಿವಾರಕ ಔಷಧಗಳಿಂದ ಸುಲಭವಾಗಿ ಕಡಿಮೆಯಾಗುವುದಿಲ್ಲ. ಈ ನೋವು ರಾತ್ರಿಯ ವೇಳೆ ಅಥವಾ ಕೆಲಸ ಹೆಚ್ಚಿರುವ ಸಮಯದಲ್ಲಿ ತೀವ್ರವಾಗಬಹುದು. ಸಾಮಾನ್ಯ ಸ್ನಾಯುವಿನ ಸೆಳೆತ ಅಥವಾ ಒತ್ತಡದಿಂದ ಉಂಟಾಗುವ ನೋವಿನಂತೆ ಸುಧಾರಿಸುವುದಿಲ್ಲ. ಮೂಳೆಯ ನೋವು ಕಡಿಮೆಯಾಗದೇ ಹೋದರೆ ಅಥವಾ ದಿನೇ ದಿನೆ ತೀವ್ರವಾಗುತ್ತಿದ್ದರೆ, ವೈದ್ಯರೊಂದಿಗೆ ಸಮಾಲೋಚನೆ ಮಾಡುವುದು ಮುಖ್ಯ.
ಊತ ಅಥವಾ ಗಂಟಿನ ಗೋಚರತೆ
ಗೆಡ್ಡೆಯು ಬೆಳೆಯುತ್ತಿದ್ದಂತೆ, ಅದರ ಸುತ್ತಮುತ್ತಲಿನ ಪ್ರದೇಶದಲ್ಲಿ ಊತ ಕಾಣಿಸಿಕೊಳ್ಳಬಹುದು. ಈ ಊತವು ಕ್ರಮೇಣವಾಗಿ ವೃದ್ಧಿಸುತ್ತದೆ ಮತ್ತು ಆರಂಭದಲ್ಲಿ ನೋವಿನಿಂದ ಕೂಡಿರದಿರಬಹುದು. ಕೆಲವರು ಮೂಳೆಯ ಸಮೀಪ, ವಿಶೇಷವಾಗಿ ಮೊಣಕಾಲು ಅಥವಾ ಭುಜದಂತಹ ಕೀಲುಗಳ ಬಳಿ ಗಟ್ಟಿಯಾದ ಗಂಟನ್ನು ಗಮನಿಸಬಹುದು. ಇದನ್ನು ಸ್ನಾಯುವಿನ ಸೆಳೆತ ಅಥವಾ ಅತಿಯಾದ ಕೆಲಸದಿಂದ ಉಂಟಾದ ಉರಿಯೂತ ಎಂದು ತಪ್ಪಾಗಿ ಭಾವಿಸಬಹುದು. ಆದರೆ, ಊತವು ಕಡಿಮೆಯಾಗದಿದ್ದರೆ ಅಥವಾ ದಿನದಿಂದ ದಿನಕ್ಕೆ ದೊಡ್ಡದಾಗುತ್ತಿದ್ದರೆ, ಅದನ್ನು ನಿರ್ಲಕ್ಷಿಸಬಾರದು.
ಚಲನೆಯಲ್ಲಿನ ಸೂಕ್ಷ್ಮ ಬದಲಾವಣೆಗಳು
ಕೀಲಿನ ಸಮೀಪದ ಗೆಡ್ಡೆಯು ಚಲನೆಯ ಸಾಮರ್ಥ್ಯ ಕಡಿಮೆ ಮಾಡಬಹುದು ಅಥವಾ ದೈನಂದಿನ ಚಲನೆಯನ್ನು ಬಿಗಿಯಾಗುವಂತೆ ಅಥವಾ ಒತ್ತಡದಿಂದ ಕೂಡಿದಂತೆ ಭಾಸವಾಗಬಹುದು. ಮಕ್ಕಳಲ್ಲಿ ಇದು ಕುಂಟುವಿಕೆಯ ರೂಪದಲ್ಲಿ ಕಾಣಿಸಿಕೊಳ್ಳಬಹುದು ಅಥವಾ ಕೆಲವು ಚಟುವಟಿಕೆಗಳನ್ನು ತಪ್ಪಿಸುವಂತೆಯೇ ವ್ಯಕ್ತವಾಗಬಹುದು. ವಯಸ್ಕರಲ್ಲಿ, ಚಲನೆಯ ವ್ಯಾಪ್ತಿ ಕಡಿಮೆಯಾಗುವಿಕೆ ಅಥವಾ ನಡೆಯುವಾಗ, ಮೆಟ್ಟಿಲು ಏರುವಾಗ ಅತೀವವಾಗಿರುವ ಅಸ್ವಸ್ಥತೆ ಕಾಣಿಸಿಕೊಳ್ಳಬಹುದು. ಈ ಬದಲಾವಣೆಗಳು ಕ್ರಮೇಣವಾಗಿ ಗೋಚರಿಸುತ್ತವೆ ಮತ್ತು ಸ್ಪಷ್ಟವಾದ ಗಾಯವಿಲ್ಲದ ಕಾರಣ ಸುಲಭವಾಗಿ ನಿರ್ಲಕ್ಷಿಸಒತ್ತಡ ಇಲ್ಲದೆಯೂ ಮೂಳೆ ಮುರಿತಗಳುಲಾಗುತ್ತದೆ.
ಕೆಲವೊಮ್ಮೆ, ಮೂಳೆ ಕ್ಯಾನ್ಸರ್‌ನಮೊದಲ ಲಕ್ಷಗಳನ್ನು ಈ ರೀತಿ ಗುರುತಿಸಬಹುದು. ಉದಾಹರಣೆಗೆ ತೀರಾ ಕಡಿಮೆ ಒತ್ತಡದ ಹೊರತಾಗಿಯೂ ಮೂಳೆ ಮುರಿತವಾಗುವುದು. ಗೆಡ್ಡೆಯಿಂದ ದುರ್ಬಲಗೊಂಡ ಮೂಳೆಯು ಸಣ್ಣ ಬೀಳುವಿಕೆ ಅಥವಾ ದೈನಂದಿನ ಚಟುವಟಿಕೆಯ ನಡುವೆಯೇ ಮುರಿಯಬಹುದು. ಈ ಸ್ಥಿತಿಯನ್ನು ‘ಪ್ಯಾಥಲಾಜಿಕಲ್ ಫ್ರಾಕ್ಚರ್ ‘ ಎಂದು ಕರೆಯಲಾಗುತ್ತದೆ. ಗೊತ್ತಿರದ ಮೂಳೆಯ ಕಾಯಿಲೆ ಇಲ್ಲದ ಹೊರತಾಗಿಯೂ ವ್ಯಕ್ತಿಯೊಬ್ಬರು ಕನಿಷ್ಠ ಆಘಾತದಿಂದ ಮೂಳೆ ಮುರಿತಕ್ಕೆ ಒಳಗಾದರೆ ಆತಂಕದ ವಿಷಯವಾಗಿದ್ದು, ತಕ್ಷಣವೇ ಪರೀಕ್ಷೆಗೆ ಒಳಪಡಬೇಕು.
ಪತ್ತೆ ಹಚ್ಚಬಹುದಾದ ಸುಲಭ ಲಕ್ಷಗಳು
ಮೂಳೆ ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳು ಬಹುತೇಕ ನಿರ್ದಿಷ್ಟವಲ್ಲದಿರುವುದರಿಂದ ರೋಗನಿರ್ಣಯವು ಕಷ್ಟಕರವಾಗಿರುತ್ತದೆ. ಆಯಾಸ, ಕಡಿಮೆ ಜ್ವರ, ಅಥವಾ ತೂಕದ ಇಳಿಕೆಯಂತಹ ಲಕ್ಷಣಗಳು ಸಮಸ್ಯೆಯ ನಂತರದ ಹಂತದಲ್ಲಿ ಕಾಣಿಸಿಕೊಳ್ಳಬಹುದು. ಆದರೆ, ಇವು ಮೂಳೆ ಗೆಡ್ಡೆಗಳಿಗೆ ಮಾತ್ರ ವಿಶೇಷ ಅಲ್ಲದಿರುವ ಕಾರಣ ಪತ್ತೆ ಸುಲಭವಲ್ಲ. ಆದರೆ, ಈ ಮೇಲಿನ ಲಕ್ಷಣಗಳು ನಿರಂತರ ಮೂಳೆ ನೋವು ಅಥವಾ ಊತದೊಂದಿಗೆ ಕಾಣಿಸಿದರೆ, ಅವುಗಳನ್ನು ನಿರ್ಲಕ್ಷಿಸಲೇಬಾರದು.
ವಯಸ್ಸು ಮತ್ತು ಇತರ ಅಪಾಯಕಾರಿ ಅಂಶಗಳನ್ನು ಪರಿಗಣಿಸುವುದು ಸಹ ಮುಖ್ಯ. ಮಕ್ಕಳು ಮತ್ತು ಹದಿಹರೆಯದವರಲ್ಲಿ ಆಸ್ಟಿಯೊಸಾರ್ಕೊಮಾದಂತಹ ಕೆಲವು ಪ್ರಾಥಮಿಕ ಮೂಳೆ ಕ್ಯಾನ್ಸರ್‌ಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು. ವಯಸ್ಕರಲ್ಲಿ, ಮೂಳೆ ಗೆಡ್ಡೆಗಳು ಸಾಮಾನ್ಯವಾಗಿ ಎರಡನೇ ಹಂತದ್ದಾಗಿರುತ್ತದೆ. ಅಂದರೆ, ಸ್ತನ, ಪ್ರಾಸ್ಟೇಟ್, ಅಥವಾ ಶ್ವಾಸಕೋಶದ ಕ್ಯಾನ್ಸರ್‌ನಿಂದ ಹರಡಿರುತ್ತವೆ. ಈ ಎರಡೂ ಸಂದರ್ಭಗಳಲ್ಲಿ, ರೋಗನಿರ್ಣಯದಲ್ಲಿ ವಿಳಂಬವಾದರೆ ಚಿಕಿತ್ಸೆಯ ಪರಿಣಾಮಕಾರಿತ್ವ ಕಡಿಮೆಯಾಗಬಹುದು.
ವೈದ್ಯರನ್ನು ಯಾವಾಗ ಸಂಪರ್ಕಿಸಬೇಕು?
ನೀವು ಕೆಲವು ಅಸಾಮಾನ್ಯ ಲಕ್ಷಣಗಳನ್ನು ಗಮನಿಸಿದರೆ ತಕ್ಷಣವೇ ವೈದ್ಯರನ್ನು ಭೇಟಿ ಮಾಡುವುದು ಮುಖ್ಯ. ನಿರ್ದಿಷ್ಟವಾಗಿ, ಎರಡರಿಂದ ಮೂರು ವಾರಗಳಿಗಿಂತ ಹೆಚ್ಚು ಕಾಲ ಮೂಳೆ ನೋವು ಇದ್ದರೆ, ಊತವು ದೊಡ್ಡದಾಗುತ್ತಿದ್ದರೆ, ಅಥವಾ ನಿಮ್ಮ ಚಲನೆಯ ಸಾಮರ್ಥ್ಯ ಕ್ರಮೇಣ ಕಡಿಮೆಯಾಗುತ್ತಿದ್ದರೆ ತಕ್ಷಣವೇ ಭೇಟಿ ಮಾಡಿ. ಇವು ವೈದ್ಯಕೀಯ ಪರೀಕ್ಷೆಗೆ ಅರ್ಹವಾದ ಲಕ್ಷಗಳಾಗಿವೆ. ಯಾವುದೇ ಸ್ಪಷ್ಟ ಕಾರಣವಿಲ್ಲದೆ ಮೂಳೆ ಮುರಿತವಾದರೆ ಅಥವಾ ಊತವು ಕಡಿಮೆಯಾಗದಿದ್ದರೆ, ಅದನ್ನೂ ಗಂಭೀರವಾಗಿ ಪರಿಗಣಿಸಲೇಬೇಕು.
ಎಕ್ಸ್-ರೇ, ಎಂಆರ್‌ಐ, ಅಥವಾ ಸಿಟಿ ಸ್ಕ್ಯಾನ್‌ನಂತಹ ಇಮೇಜಿಂಗ್ ಪರೀಕ್ಷೆಗಳು (ಚಿತ್ರಣ ಅಧ್ಯಯನಗಳು) ಮೂಳೆಯಲ್ಲಿರುವ ಅನುಮಾನಾಸ್ಪದ ಗೆಡ್ಡೆಗಳನ್ನು ಗುರುತಿಸಲು ಸಹಾಯ ಮಾಡುತ್ತವೆ. ಆದರೆ, ಕ್ಯಾನ್ಸರ್ ಇದೆಯೇ ಎಂದು ಖಚಿತಪಡಿಸಿಕೊಳ್ಳಲು ಬಯಾಪ್ಸಿ (ಸಣ್ಣ ಮಾಂಸದ ತುಂಡನ್ನು ತೆಗೆದು ಪರೀಕ್ಷಿಸುವುದು) ಅತ್ಯಗತ್ಯ. ಈ ಬಯಾಪ್ಸಿಯನ್ನು ಆರ್ಥೋಪೆಡಿಕ್ ಆಂಕೊಲಾಜಿಯಲ್ಲಿ (ಮೂಳೆ ಕ್ಯಾನ್ಸರ್ ಚಿಕಿತ್ಸೆಯಲ್ಲಿ) ತರಬೇತಿ ಪಡೆದ ತಜ್ಞರಿಂದಲೇ ಮಾಡಿಸಬೇಕು.
ಮೂಳೆ ಕ್ಯಾನ್ಸರ್ ಅಪರೂಪವಾದರೂ, ಆರಂಭಿಕ ಹಂತದಲ್ಲಿ ರೋಗನಿರ್ಣಯ ತಪ್ಪಿಹೋಗುವ ಅಪಾಯ ಹೆಚ್ಚು. ಆರಂಭಿಕ ಲಕ್ಷಣಗಳು ಸಾಮಾನ್ಯ ನೋವು ಅಥವಾ ಸ್ನಾಯು ಸೆಳೆತ ಎಂದು ನಿರ್ಲಕ್ಷಿಸಿದರೆ, ಸಮಯಕ್ಕೆ ಸರಿಯಾಗಿ ಅದನ್ನು ಪತ್ತೆಹಚ್ಚುವ ಅವಕಾಶ ಕೈತಪ್ಪಬಹುದು. ಇದನ್ನು ಬೇಗ ಪತ್ತೆಹಚ್ಚಿದಷ್ಟೂ ಉತ್ತಮ. ಇದು ಕೇವಲ ರೋಗಕ್ಕೆ ಚಿಕಿತ್ಸೆ ನೀಡಲು ಮಾತ್ರವಲ್ಲ, ನಿಮ್ಮ ಶಕ್ತಿ, ಚಲನಶೀಲತೆ ಮತ್ತು ಮಾನಸಿಕ ನೆಮ್ಮದಿಯನ್ನು ಕಾಪಾಡಿಕೊಳ್ಳಲು ಸಹ ಸಹಾಯ ಮಾಡುತ್ತದೆ.