ಮೊನ್ನೆಯಷ್ಟೇ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಕಾಂಗ್ರೆಸ್ ತನ್ನ ಎರಡನೇ ವರ್ಷದ ಅದ್ಧೂರಿ ವರ್ಷಾಚರಣೆ ಮಾಡಿಕೊಂಡಿದೆ. ಇದರ ಬೆನ್ನಲ್ಲೇ ಪಕ್ಷದಲ್ಲೀಗ ಅವಕಾಶಕ್ಕಾಗಿ ಕಾದು ಕೂತವರ ಕೂಗು ಕೂಡಾ ಜೋರಾಗ್ತಿದೆ. ಸಿದ್ದರಾಮಯ್ಯ ಸಂಪುಟಕ್ಕೆ ಸರ್ಜರಿ ಮಾಡಿ, ನಮಗೂ ಒಂದು ಅವಕಾಶ ಮಾಡಿಕೊಡಿ ಅಂತಾ ಒತ್ತಡ ಹಾಕ್ತಿದ್ದಾರೆ. ಕೆಲವರಂತೂ ಬಹಿರಂಗವಾಗೇ ಸಂಪುಟ ಪುನಾರಚನೆ ಆಗ್ಲಿ ಅನ್ನೋ ಮಾತುಗಳನ್ನಾಡಿದ್ದಾರೆ. ಹೀಗಾಗಿ ಸರ್ಕಾರಕ್ಕೀಗ ಆಕಾಂಕ್ಷಿಗಳನ್ನು ನಿಭಾಯಿಸೋ ಹೊಣೆಗಾರಿಕೆ ಶುರುವಾಗಿದೆ.
ಜೂನ್ ಮೊದಲ ವಾರದಲ್ಲಿ ಸರ್ಜರಿಗೆ ಮುಹೂರ್ತ
ಒಂದೆಡೆ, ಸಿದ್ದರಾಮಯ್ಯ ಆಪ್ತ ವಲಯ 5 ವರ್ಷ ಅವರೇ ಸಿಎಂ ಅಂತಾ ಹೇಳಿಕೊಂಡು ಓಡಾಡ್ತಿದೆ. ಇದರ ನಡುವೆ, ಡಿಕೆಶಿ ಬಣವೂ ಅವಕಾಶಕ್ಕಾಗಿ ಕಾದು ಕುಳಿತಿದೆ. ಇದರ ನಡುವೆ, ಸಂಪುಟಕ್ಕೆ ಮೇಜರ್ ಸರ್ಜರಿ ಮಾಡುವ ಚಿಂತನೆ ಕೂಡಾ ದೆಹಲಿಯಲ್ಲಿ ಶುರುವಾಗಿದೆ. ಈ ಹಿಂದೆಯೇ ಇಂಥದ್ದೊಂದು ಪ್ರಯತ್ನ ನಡೆದಿತ್ತಾದ್ರೂ, ಕಾದು ನೋಡುವ ಸೂಚನೆಯನ್ನು ಹೈಕಮಾಂಡ್ ನೀಡಿತ್ತು. ಆದ್ರೀಗ ಕಡೆಗೂ ಜೂನ್ ಮೊದಲ ವಾರದಲ್ಲಿ ಸಿಎಂ ಹಾಗೂ ಡಿಸಿಎಂಗೆ ದೆಹಲಿ ವರಿಷ್ಠರು ಬುಲಾವ್ ನೀಡಿದ್ದಾರೆ. ಈ ವೇಳೆ, ಸಂಪುಟದ ಅಸಮರ್ಥರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ನೀಡುವ ಪ್ಲ್ಯಾನ್ ನಡೆದಿದೆ.
ಸಂಪುಟದಿಂದ 10 ಮಂದಿಗೆ ಕೊಕ್ ನೀಡುವ ಸಿದ್ಧತೆ
ಈ ಬಾರಿ ಸಂಪುಟಕ್ಕೆ ಮೇಜರ್ ಸರ್ಜರಿ ಮಾಡಿ ಒಂದಷ್ಟು ಹೊಸ ಮುಖಗಳಿಗೆ ಮಣೆ ಹಾಕುವ ಚಿಂತನೆ ವರಿಷ್ಠರಲ್ಲಿದೆ. ಗ್ಯಾರಂಟಿ ಯೋಜನೆಗಳನ್ನು ಮತ್ತಷ್ಟು ಜನಸ್ನೇಹಿಯಾಗಿಸಿ ಮನೆ ಮನೆಗೆ ತಲುಪಿಸುವ ಯುವ ಪಡೆಗೆ ಅವಕಾಶ ಮಾಡಿಕೊಡುವ ಇರಾದೆ ಇದೆ. ಹೀಗಾಗಿ ಸದ್ಯ ಸಂಪುಟದಲ್ಲಿರುವ ಕೆಲ ಹಿರಿಯರು ಹಾಗೂ ಅಸಮರ್ಥರು ಸೇರಿ 10 ಮಂದಿಯನ್ನು ಮನೆಗೆ ಕಳುಹಿಸಿ ಆ ಜಾಗಕ್ಕೆ ಪಕ್ಷಕ್ಕಾಗಿ ಶ್ರಮಿಸುವ ನಾಯಕರನ್ನು ಸಚಿವರಾಗಿಸೋ ತಯಾರಿ ನಡೆದಿದೆ.
ಸಿದ್ದು ಸಂಪುಟದ ಹಿರಿಯರಿಗೆ ಕಾದಿದೆಯಾ ಗುನ್ನಾ…?
ಸಂಪುಟದಲ್ಲಿ ಹಲವು ವರ್ಷಗಳಿಂದ ಮಂತ್ರಿಗಿರಿ ಅನುಭವಿಸಿದ ಕೆಲ ಹಿರಿಯರಿದ್ದಾರೆ. ಇವರೊಟ್ಟಿಗೆ ಕೊಟ್ಟ ಅವಕಾಶವನ್ನು ಬಳಸಿಕೊಳ್ಳಲು ವಿಫಲರಾಗಿರೋ ಕೆಲ ಅಮರ್ಥರಿದ್ದಾರೆ. ಇವರಿಬ್ಬರ ಪೈಕಿ ಕೆಲವರಿಗೆ ಕೊಕ್ ನೀಡುವ ಸುಳಿವು ಸಿಗ್ತಿದೆ. ಅದ್ರಲ್ಲೂ ಹಿರಿಯರಾದ ದಿನೇಶ್ ಗುಂಡೂರಾವ್, ಕೆ ಎನ್ ರಾಜಣ್ಣ, ರಹೀಂ ಖಾನ್, ಎನ್ ಎಸ್ ಬೋಸರಾಜು, ಚಲುವರಾಯ ಸ್ವಾಮಿ, ಕೆ ಹೆಚ್ ಮುನಿಯಪ್ಪ, ಹೆಚ್ ಸಿ ಮಹದೇವಪ್ಪ, ಮಧು ಬಂಗಾರಪ್ಪ, ಎಸ್ ಎಸ್ ಮಲ್ಲಿಕಾರ್ಜುನ್, ಲಕ್ಷ್ಮೀ ಹೆಬ್ಬಾಳ್ಕರ್, ಆರ್ ಬಿ ತಿಮ್ಮಾಪೂರ, ಹೆಚ್ ಕೆ ಪಾಟೀಲ್, ಈಶ್ವರ್ ಖಂಡ್ರೆ, ವೆಂಕಟೇಶ್, ಎನ್ ಸಿ ಸುಧಾಕರ್, ಶರಣಬಸಪ್ಪಾ ದರ್ಶನಾಪೂರ, ಈಶ್ವರ್ ಖಂಡ್ರೆ ಪೈಕಿ ಕೆಲವರಿಗೆ ಕುರ್ಚಿ ಖಾಲಿ ಮಾಡಬೇಕಾದ ಅನಿವಾರ್ಯತೆ ಬರಬಹುದು. ಅಂದಾಜು 10 ಹಾಲಿ ಸಚಿವರನ್ನು ಪಕ್ಷ ಸಂಘಟನೆಗೆ ಬಳಸಿಕೊಳ್ಳಲು ದೆಹಲಿ ನಾಯಕತ್ವ ನಿರ್ಧರಿಸಿದೆ ಎನ್ನಲಾಗ್ತಿದೆ.
ಯಾರಿಗೆಲ್ಲಾ ಹೊಡೆಯಲಿದೆ ಬಂಪರ್ ಜಾಕ್ ಪಾಟ್…?
ಸಿದ್ದರಾಮಯ್ಯ ಸಂಪುಟದರಲ್ಲಿ 10 ಸಚಿವರಿಗೆ ಗೇಟ್ ಪಾಸ್ ಸಿಕ್ರೆ, 30ಕ್ಕೂ ಹೆಚ್ಚು ಮಂದಿ ಆಕಾಂಕ್ಷಿಗಳು ಕುರ್ಚಿಗೆ ಟವಲ್ ಹಾಕಲು ಕಾದು ಕುಳಿತಿದ್ದಾರೆ. ಆದ್ರೆ ಅಳೆದು ತೂಗಿ ಪಕ್ಷದ ಸಾಧನೆಯನ್ನು ಬಿಂಬಿಸುವ ಉಮೇದು ಇರೋರಿಗೆ ಪಟ್ಟಾಭಿಷೇಕ ಮಾಡುವ ಉದ್ದೇಶ ವರಿಷ್ಠರಿಗಿದೆ. ಹೀಗಾದಲ್ಲಿ, ಶಿರಾ ಶಾಸಕ ಟಿ ಬಿ ಜಯಚಂದ್ರ, ಅಥಣಿ ಶಾಸಕ ಲಕ್ಷ್ಮಣ್ ಸವದಿ, ಅರಸೀಕೆರೆ ಶಾಸಕ ಶಿವಲಿಂಗೇಗೌಡ, ಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್, ಕೆಜಿಎಫ್ ಶಾಸಕಿ ರೂಪಾ ಶಶಿಧರ್, ಬಳ್ಳಾರಿಯ ನಾಗೇಂದ್ರ, ಹೊಸದುರ್ಗದ ಬಿ ಜಿ ಗೋವಿಂದಪ್ಪ, ಸ್ಪೀಕರ್ ಯು ಟಿ ಖಾದರ್, ಆಳಂದದ ಬಿ ಆರ್ ಪಾಟೀಲ್, ಮೈಸೂರಿನ ನರಸಿಂಹರಾಜದ ಶಾಸಕ ತನ್ವೀರ್ ಸೇಠ್, ಹಳಿಯಾಳದ ಆರ್ ವಿ ದೇಶಪಾಂಡೆ, ಬೆಂಗಳೂರು ವಿಜಯನಗರದ ಎಂ ಕೃಷ್ಣಪ್ಪ, ಚಳ್ಳಕೆರೆಯ ರಘುಮೂರ್ತಿ, ಇಂಡಿಯ ಯಶವಂತಗೌಡ ಹಾಗೂ ಸಿಂಧನೂರಿನ ಹಂಪನಗೌಡ ಬಾದರ್ಲಿಗೆ ಅವಕಾಶ ಸಿಗಬಹುದು. ಉಳಿದಂತೆ, ಎಂಎಲ್ ಸಿ ಪ್ರಕಾಶ್ ಹುಕ್ಕೇರಿ, ಸಲೀಂ ಅಹ್ಮದ್ ಹಾಗೂ ಬದ್ರಾವತಿ ಶಾಸಕ ಸಂಗಮೇಶ್ ಗೂ ಅದೃಷ್ಠ ಖುಲಾಯಿಸುವ ಸಾಧ್ಯತೆಗಳಿವೆ. ಆದ್ರೆ ಈ ಬಾರಿ ಸಂಪುಟ ಸರ್ಜರಿಗೆ ಯಾವ ಸೂತ್ರವನ್ನು ಹೈಕಮಾಂಡ್ ತೀರ್ಮಾನಿಸುತ್ತೆ ಅನ್ನೋದರ ಮೇಲೆ ಆಕಾಂಕ್ಷಿಗಳ ಭವಿಷ್ಯ ನಿರ್ಧಾರವಾಗಲಿದೆ.



















