ಬೆಂಗಳೂರು: ಜಲಜೀವನ್ ಮಿಷನ್‌ಗೆ (Jal Jeevan Mission) ಸಂಬಧಿಸಿದಂತೆ ರಾಜ್ಯಕ್ಕೆ ಘೋಷಿಸಲಾದ ಹಣವನ್ನು ಬಿಡುಗಡೆ ಮಾಡದೇ ಕೇಂದ್ರ ಸರ್ಕಾರ ದ್ರೋಹ ಮಾಡಿದೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಆರೋಪ ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿದ ಅವರು, ಕೇಂದ್ರ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಅದರಲ್ಲೂ ಪ್ರಮುಖವಾಗಿ ಕೇಂದ್ರ ಸಚಿವ ಸೋಮಣ್ಣರನ್ನು ಟಾರ್ಗೆಟ್ ಮಾಡಿ ವಾಗ್ದಾಳಿ ನಡೆಸಿದ್ದಾರೆ. ಜೆಜೆಎಂ ಅಡಿ ಕರ್ನಾಟಕಕ್ಕೆ 28,623 ಕೋಟಿ ರೂ. ರಿಲೀಸ್ ಮಾಡಿದ್ರೂ, ಅವರು ಖರ್ಚು ಮಾಡಿರೋದು ಬರೀ 11, 760 ಕೋಟಿ ರೂ. ಎಂದು ಸೋಮಣ್ಣ ಲೋಕಸಭೆಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಆದರೆ ಸೋಮಣ್ಣ ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಜ್ಯದಲ್ಲಿ ಜೆಜೆಎಂಗೆ 49,262 ಕೋಟಿ ರೂ. ನಿಗದಿಯಾಗಿದೆ. ಇದರಲ್ಲಿ ಕೇಂದ್ರದ ಪಾಲು 26,119 ಕೋಟಿ ರೂ., ರಾಜ್ಯದ ಪಾಲು 23,142 ಕೋಟಿ. ಇದರಲ್ಲಿ ಬಿಡುಗಡೆ ಆಗಿರೋದು 32,202 ಕೋಟಿ. ಈ ಪೈಕಿ ಕೇಂದ್ರ ಕೊಟ್ಟಿರೋದು ಬರೀ 11,760 ಕೋಟಿ. ಅಂದರೆ ಬರೀ 45% ಮಾತ್ರ. ರಾಜ್ಯ ಕೊಟ್ಟಿರೋದು 20,442 ಕೋಟಿ. ಅಂದರೆ 88%ರಷ್ಟು ಮೊತ್ತ. ಬಿಡುಗಡೆಯಾದ 33,202 ಕೋಟಿಯಲ್ಲಿ ಸರ್ಕಾರ 29,413 ಕೋಟಿ ಖರ್ಚು ಮಾಡಿದೆ ಎಂದು ಸಿಎಂ ಹೇಳಿದ್ದಾರೆ.
ನರೇಂದ್ರ ಮೋದಿ ಅವರ ಸರ್ಕಾರ ತನ್ನ ಬಜೆಟ್‌ನಲ್ಲಿ ಅಗತ್ಯ ಪ್ರಮಾಣದ ಅನುದಾನ ನೀಡದೆ ಜಲಜೀವನ್ ಮಿಷನ್ ಯೋಜನೆಯನ್ನು ಕೊಲ್ಲುತ್ತಿದೆ. ರಾಜ್ಯದ ಹಿತವನ್ನು ಗಮನದಲ್ಲಿಟ್ಟುಕೊಂಡು ಈ ಅನ್ಯಾಯವನ್ನು ಪ್ರಶ್ನಿಸಬೇಕಿದ್ದ ಸಚಿವ ಸೋಮಣ್ಣ ಅವರಂತಹ ಬಿಜೆಪಿ ನಾಯಕರು ನಿರ್ಲಜ್ಜರಾಗಿ ತಪ್ಪು ಮಾಹಿತಿಯನ್ನು ಹರಡಿ ಕನ್ನಡಿಗರಿಗೆ ದ್ರೋಹ ಎಸಗುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.