ಬೆಂಗಳೂರು: ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಪಾತ್ರವಿದೆ ಎಂಬ ಆರೋಪದ ಬೆನ್ನಲ್ಲಿಯೇ ರಾಜ್ಯಪಾಲರಿಂದ ನೊಟೀಸ್ ಜಾರಿ ಮಾಡಲಾಗಿತ್ತು. ಆದರೆ, ಸಿಎಂ ಸಿದ್ದರಾಮಯ್ಯ ಪ್ರಾಸಿಕ್ಯೂಷನ್ ಎದುರಿಸಬೇಕಿದ್ದ ಹಿನ್ನೆಲೆಯಲ್ಲಿ ಅವರನ್ನು ಹೊರಗಿಟ್ಟು ಸಚಿವ ಸಂಪುಟ ಸಭೆ ನಡೆಸಿತ್ತು. ಈ ಸಂದರ್ಭದಲ್ಲಿ ರಾಜ್ಯಪಾಲರ ನೋಟಿಸ್ ನ್ನು ಹಿಂಪಡೆಯುವಂತೆ ಒತ್ತಾಯಿಸಿ ಸಚಿವ ಸಂಪುಟದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ಡಿಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯಪಾಲರ ನೊಟೀಸ್ ಗೆ ಕಾನೂನು ಮೂಲಕ ಉತ್ತರ ನೀಡುವುದಕ್ಕೆ ನಿರ್ಧರಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಲಾಗಿರುವ ನೊಟೀಸ್ ನ್ನು ಮರಳಿ ಹಿಂಪಡೆಯುವಂತೆಯೂ ಒತ್ತಾಯಿಸುವ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ. ರಾಜ್ಯಪಾಲರಿಗೆ ದೂರು ಸಿಕ್ಕ ಕೂಡಲೇ ಈ ರೀತಿ ನೋಟಿಸ್ ಜಾರಿ ಮಾಡಿರುವುದಕ್ಕೆ ಸಂಪುಟ ಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಅಲ್ಲದೇ, ಸಿಎಂ ಸಿದ್ದರಾಮಯ್ಯ ಅವರಿಗೆ ನೊಟೀಸ್ ನಲ್ಲಿ ಬಳಸಿದ ಪದ ಮತ್ತು ಒಕ್ಕಣಿಕೆಗೆ ಆಕ್ಷೇಪ ವ್ಯಕ್ತಪಡಿಸಲಾಗಿದೆ. ರಾಜ್ಯಪಾಲರ ಸ್ಥಾನ ರಾಜಕೀಯ ದುರುಪಯೋಗದ ಹಾದಿಯಲ್ಲಿ ಸಾಗಿತ್ತಿದೆ ಎಂಬ ಬಗ್ಗೆ ಅನುಮಾನ ಮೂಡಿದ್ದು, ಈ ಹಿನ್ನೆಲೆಯಲ್ಲಿಯೂ ಚರ್ಚೆ ಮಾಡಲಾಗಿದೆ. ಪದ ಮತ್ತು ಒಕ್ಕಣಿಕೆ ಸಹಿತ ನೊಟೀಸ್ ನ್ನು ಹಿಂಪಡೆಯಲು ಸಂಪುಟ ನಿರ್ಣಯ ಕೈಗೊಂಡಿದೆ. ಹಿಂಪಡೆಯದಿದ್ದರೆ, ಕಾನೂನು ಹೋರಾಟಕ್ಕೆ ಕೂಡ ಸಚಿವ ಸಂಪುಟ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.