ಬೆಂಗಳೂರು: ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಎನ್ನುತ್ತಾರೆ ಆದರೆ ಪ್ರಶ್ನೆಗಳ ಪಟ್ಟಿಯಲ್ಲಿ ಜಾತಿ ಧರ್ಮದ ಬಗ್ಗೆಯೇ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ.
ಜಾತಿ ಗಣತಿ ವಿಚಾರವಾಗಿ ಬೆಂಗಳೂರಿನಲ್ಲಿ ಮಾಧ್ಯಮ ವರದಿಗಾರರೊಂದಿಗೆ ಮಾತನಾಡಿದ ಅಶೋಕ್, ಅವರಿಗೆ ಬೇಕಾದ ಹಾಗೆ ವರದಿ ಬರದಿದ್ದರೆ ಈ ವರದಿಯೂ ಕಸದ ಬುಟ್ಟಿಗೆ ಹೋಗಲಿದೆ. ಜಾತಿ ಧರ್ಮ ಒಡೆಯುವ ಸಿದ್ದರಾಮಯ್ಯ ಅವರ ನಡೆಗೆಯನ್ನು ತೀವ್ರವಾಗಿ ವಿರೋಧಿಸುತ್ತೇವೆ. ಧರ್ಮಸ್ಥಳ, ದಸರಾ ಬಗ್ಗೆ ನಿಮ್ಮ ನಡೆ ತೋರಿಸಿದ್ದೀರಿ ಸಿದ್ದರಾಮಯ್ಯ ಹಿಂದು ವಿರೋಧಿ ನಡೆಯ ಸೂತ್ರಧಾರ ಎಂದು ಜಗತ್ತಿಗೆ ಗೊತ್ತಾಗಿದೆ ಎಂದು ಕಿಡಿಕಾರಿದ್ದಾರೆ.
ಇನ್ನೂ, ಕೆ ಆರ್ ಪುರದಲ್ಲಿ ರಸ್ತೆಗುಂಡಿಯಿಂದ ಯುವತಿ ಸಾವನ್ನಪ್ಪಿರುವ ಘಟನೆ ಬಗ್ಗೆ ಮಾತನಾಡಿ, ರಸ್ತೆಗುಂಡಿಗೆ ಯುವತಿಯ ಒಬ್ಬರು ಬಲಿಯಾಗಿದ್ದಾರೆ. ಇನ್ನೆಷ್ಟು ಬಲಿ ಬೇಕು ಈ ಸರ್ಕಾರಕ್ಕೆ?ಈ ಸಾವು ನ್ಯಾಯವೇ? ರಸ್ತೆಗುಂಡಿ ಸರಿಪಡಿಸುವುದು ಯಾವಾಗ ಎಂದು ಜನ ಕೇಳುತ್ತಿದ್ದಾರೆ. ಡಿಸಿಎಂ ಬದಲು ಸಿಎಂ ಬೆಂಗಳೂರು ನಗರ ಪ್ರದಕ್ಷಿಣೆ ಮಾಡಿದ್ದೇಕೆ? ಅಧಿಕಾರಿಗಳ ಸಭೆ ಮಾಡಿದ್ದೇಕೆ ಡಿಸಿಎಂ ಫೇಲ್ ಆಗಿದ್ದಾರೆ ಎಂದು ತೋರಿಸಲು ಸಿಎಂ ಪ್ರದಕ್ಷಿಣೆ ಮತ್ತು ಸಭೆ ಮಾಡಿದರಾ? ಎಂದು ಪ್ರಶ್ನೆ ಮಾಡಿದ್ದಾರೆ.
ಕುರುಬ ಸಮುದಾಯ ಎಸ್ಟಿಗೆ ಸೇರಿಸಲು ಸರ್ಕಾರ ಮುಂದಾಗಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಸಂವಿಧಾನ ಪ್ರಕಾರ ಎಸ್.ಟಿ ಗೆ ಸಮುದಾಯಗಳನ್ನು ಸೇರಿಸುವ ಅವಕಾಶವಿದೆ. ಆ ರೀತಿ ಸೇರಿಸಲು ಬಿಜೆಪಿ ಬೆಂಬಲ ಇದೆ ಎಂದಿದ್ದಾರೆ.