ಮೈಸೂರು: ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರೆಯುತ್ತಾರೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ನಗರಕ್ಕೆ ಭೇಟಿ ನೀಡಿದ ವೇಳೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರು ನಮ್ಮ ನಾಯಕರು. ಅವರೇ ಸಿಎಂ ಆಗಿ ಮುಂದುವರೆಯುತ್ತಾರೆ. ಅವರು 5 ವರ್ಷ ಇರುತ್ತಾರೋ? ಅಥವಾ 3 ಮೂರು ವರ್ಷ ಇರುತ್ತಾರೋ? ಗೊತ್ತಿಲ್ಲ. ಅದನ್ನು ನೀವು ಹೈಕಮಾಂಡ್ ಗೆ ಕೇಳಿ ಎಂದಿದ್ದಾರೆ.
ಅವರ ಜೊತೆಯಲ್ಲಿ ಸಚಿವನಾಗಿ ಕೆಲಸ ಮಾಡುತ್ತೇನೆ. ಸಿಎಂ ಸಿದ್ದರಾಮಯ್ಯ ಬದಲಾವಣೆ ಪ್ರಶ್ನೆಯೇ ಉದ್ಭವಿಸಿಲ್ಲ. ಅಂತಹ ಯಾವುದೇ ಚರ್ಚೆಗಳು ನಡೆದಿಲ್ಲ. ಇದೆಲ್ಲ ಮಾಧ್ಯಮ ಹಾಗೂ ವಿಪಕ್ಷಗಳ ಸೃಷ್ಟಿ ಅಷ್ಟೇ. ವಿಪಕ್ಷಗಳ ನಾಯಕರು ಪ್ರೀತಿಯಿಂದ ನಮ್ಮ ಹೆಸರು ಹೇಳುತ್ತಿದ್ದಾರೆ ಅಷ್ಟೇ. ಆದರೆ ನಮ್ಮ ಪಕ್ಷದಲ್ಲಿ ಯಾವುದೇ ಚರ್ಚೆ, ಬೆಳವಣಿಗೆ ಆಗಿಲ್ಲ ಎಂದು ಹೇಳಿದ್ದಾರೆ.
ಡಿ.ಕೆ. ಶಿವಕುಮಾರ್ ಸಿಎಂ ರೇಸ್ ನಲ್ಲಿ ಇರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಮತ್ತೊಬ್ಬರ ವಿಚಾರ ನಾನು ಹೇಳಲು ಆಗುವುದಿಲ್ಲ. ಸಚಿವ ಮಹದೇವಪ್ಪ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಅವರ ಮನೆ ಹಾಗೂ ನಮ್ಮ ಮನೆ ಅಕ್ಕ ಪಕ್ಕ ಇವೆ. ಪ್ರತಿ ದಿನವೂ ನಾವು ಭೇಟಿಯಾಗುತ್ತೇವೆ. ಮಹದೇವಪ್ಪ ಜೊತೆಗೆ ದಸರಾ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತೇನೆ ಎಂದಿದ್ದಾರೆ.
ಇತ್ತೀಚೆಗಷ್ಟೇ ಸತೀಶ ಜಾರಕಿಹೊಳಿ ಅವರು ದೆಹಲಿಗೆ ಭೇಟಿ ಮಾಡಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಇದು ರಾಜಕೀಯದಲ್ಲಿ ದೊಡ್ಡ ಅಲೆ ಸೃಷ್ಟಿಸಿದೆ.