ಬೆಂಗಳೂರು: ಮುಖ್ಯಮಂತ್ರಿ ಬದಲಾವಣೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಕಾಂಗ್ರೆಸ್ ನಾಯಕರ ಹೇಳಿಕೆಗಳು ಮಿತಿಮೀರಿದ ಕಾರಣ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು “ಬಾಯಿ ಮುಚ್ಚಿಕೊಂಡಿರಿ” ಎಂದು ಎಚ್ಚರಿಕೆ ನೀಡಿದ್ದರು. ಇದಾದ ಬಳಿಕ ಕೆಲ ದಿನಗಳವರೆಗೆ “ಬಾಯಿಮುಚ್ಚಿಕೊಂಡಿದ್ದ” ನಾಯಕರು ಈಗ ಮತ್ತೆ ಹೇಳಿಕೆಗಳನ್ನು ಶುರುವಿಟ್ಟುಕೊಂಡಿದ್ದಾರೆ. ಐದು ವರ್ಷಗಳವರೆಗೆ ಸಿದ್ದರಾಮಯ್ಯ ಅವರೇ ಸಿಎಂ ಆಗಿರುತ್ತಾರೆ ಎಂದು ಆಪ್ತರು ಹೇಳಿಕೆ ನೀಡಿರುವುದೇ ಇದಕ್ಕೆ ಸಾಕ್ಷಿಯಾಗಿದೆ.
ಹೌದು, ಸಿದ್ದರಾಮಯ್ಯ ಅವರೇ ಪೂರ್ಣಾವಧಿಗೆ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಸಚಿವ ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ. “ಸಾರ್ವಜನಿಕ ಜೀವನದಲ್ಲಿ ನಿವೃತ್ತಿ ಎಂಬುದು ಇರುವುದಿಲ್ಲ. ಇದೇನು ಸರ್ಕಾರಿ ನೌಕರಿ ಅಲ್ಲ. ಯಾವುದೇ ಡೌಟ್ ಬೇಡ, ಪೂರ್ಣಾವಧಿಗೆ ಸಿದ್ದರಾಮಯ್ಯ ಅವರೇ ಸಿಎಂ ಆಗಿರುತ್ತಾರೆ” ಎಂದು ಮಹದೇವಪ್ಪ ಹೇಳಿದ್ದಾರೆ. ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಅವರು ಕೂಡ ಸಿದ್ದರಾಮಯ್ಯ ಪರವಾಗಿ ಮಾತನಾಡಿದ್ದಾರೆ.
ಪರಮೇಶ್ವರ್ ಕೂಡ ಬ್ಯಾಟಿಂಗ್
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಡಾ.ಜಿ.ಪರಮೇಶ್ವರ್ ಅವರು ಕೂಡ ಬ್ಯಾಟಿಂಗ್ ಮಾಡಿದ್ದಾರೆ. “ಕಾಂಗ್ರೆಸ್ ಶಾಸಕಾಂಗ ಪಕ್ಷದಲ್ಲಿ ಸಿದ್ದರಾಮಯ್ಯ ಅವರನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಲಾಯಿತು. ಶಾಸಕರು ಅವರನ್ನು ಆಯ್ಕೆ ಮಾಡಿದರು. ಸಿದ್ದರಾಮಯ್ಯ ಅವರು ಎರಡೂವರೆ ವರ್ಷ ಮಾತ್ರ ಸಿಎಂ ಎಂದು ಹೈಕಮಾಂಡ್ ನಮಗೆ ಹೇಳಿಲ್ಲ. ಸಿದ್ದರಾಮಯ್ಯ ಅವರೇ ಐದು ವರ್ಷ ಸಿಎಂ ಆಗಿರಲಿ. ಅವರು ದಾಖಲೆ ಬರೆಯಲಿ ಎಂದು ಹಾರೈಸುವೆ” ಎಂಬುದಾಗಿ ಪರಮೇಶ್ವರ್ ತಿಳಿಸಿದ್ದಾರೆ.
ಖಾಸಗಿ ಸುದ್ದಿ ವಾಹಿನಯೊಂದಕ್ಕೆ ಸಂದರ್ಶನ ನೀಡಿದ್ದ ಸಿದ್ದರಾಮಯ್ಯ ಅವರು, ರಾಜಕೀಯ ನಿವೃತ್ತಿ ಸದ್ಯಕ್ಕಿಲ್ಲ ಎಂದಿದ್ದರು. ಅಲ್ಲದೆ, ದೇವರಾಜು ಅರಸು ಅವರ “ಸುದೀರ್ಘ ಅವಧಿಯ ಸಿಎಂ” ಎಂಬ ದಾಖಲೆಯನ್ನು ಮುರಿಯುವ ಇಂಗಿತ ವ್ಯಕ್ತಪಡಿಸಿದ್ದರು. ಇದಾದ ಬೆನ್ನಲ್ಲೇ, ಸಿದ್ದರಾಮಯ್ಯ ಪರ ಆಪ್ತರು ಬ್ಯಾಟಿಂಗ್ ಬೀಸುತ್ತಿದ್ದಾರೆ. ಇದಕ್ಕೆ ಡಿ.ಕೆ.ಶಿವಕುಮಾರ್ ಯಾವ ಪಟ್ಟು ಬಳಸುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.