ಬೆಂಗಳೂರು: ದೀರ್ಘಾವಧಿವರೆಗೆ ಸಿಎಂ ಆಗುವ ಮೂಲಕ ಮಾಜಿ ಸಿಎಂ ದಿ. ದೇವರಾಜ ಅರಸು ಅವರ ದಾಖಲೆ ಮುರಿದ ಸಿಎಂ ಸಿದ್ದರಾಮಯ್ಯ ಅವರಿಗೆ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಪತ್ರ ಬರೆದು ಶುಭಹಾರೈಸಿದ್ದಾರೆ. ಈ ವೇಳೆ ಸಿದ್ದರಾಮಯ್ಯ ಸಿಎಂ ಆಗಿ 5 ವರ್ಷ ಇರುತ್ತಾರೆ. 2.5 ವರ್ಷಕ್ಕೆ ಅವರನ್ನು ಸಿಎಂ ಆಗಿ ಶಾಸಕರು ಆಯ್ಕೆ ಮಾಡಿಲ್ಲ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ ರಾಯರೆಡ್ಡಿ , ಸಿಎಂ ಬದಲಾವಣೆ ವಿಚಾರ ಮಾಧ್ಯಮ ಸೃಷ್ಟಿ. ಯಾರಿಗೆ ಸಿಎಂ ಆಗಲು ಇಷ್ಟ ಇರುವುದಿಲ್ಲ ಹೇಳಿ. ನಾನು ಸಿಎಂ ಯಾಕೆ ಆಗಬಾರದು? ನಾನು ಸೀನಿಯರ್ ಇದ್ದೇನೆ. ಸಿಎಂ ಬದಲಾವಣೆ ಆಗಬೇಕಾದರೆ ಶಾಸಕರ ಅಭಿಪ್ರಾಯ ಪಡೆಯಬೇಕು. ಇದೆಲ್ಲವೂ ಆಗದೇ ಹೇಗೆ ಬದಲಾವಣೆ ಆಗುತ್ತದೆ ಎಂದು ಪ್ರಶ್ನಿಸಿದ್ದಾರೆ.
ಹೈಕಮಾಂಡ್ ನಿರ್ಧಾರ ಅಂತಿಮ ಎಂಬುದಾಗಿ ಡಿಕೆಶಿ ಹೇಳಿದ್ದಾರೆ. ಇಕ್ಬಾಲ್ ಹುಸೇನ್ ಮನೋರಂಜನೆಗೋಸ್ಕರ ಡಿಕೆಶಿ ಸಿಎಂ ಎಂದು ಹೇಳುತ್ತಾರೆ. ಡಿಕೆ ಶಿವಕುಮಾರ್ ಅವರಿಗೆ ಮುಂದೆ ಸಿಎಂ ಆಗುವ ಅವಕಾಶ ಸಿಗಬಹುದು. ಡಿಕೆಶಿ ಆಕಾಂಕ್ಷಿ ಆಗುವುದರಲ್ಲಿ ತಪ್ಪಿಲ್ಲ. ಸಮಯ ಸಂದರ್ಭ ಮುಖ್ಯ ಆಗುತ್ತದೆ. 5 ವರ್ಷ ಸಿದ್ದರಾಮಯ್ಯ ಸಿಎಂ ಆಗಿರುತ್ತಾರೆ ಅಂತ ರಾಯರೆಡ್ಡಿ ಪುನರುಚ್ಚಾರ ಮಾಡಿದ್ದಾರೆ.
ಸಿಎಂ ಅವರು ಬಜೆಟ್ ಸಿದ್ದತೆ ಪ್ರಾರಂಭ ಮಾಡಿದ್ದಾರೆ. ಜನವರಿ 16 ಬಳಿಕ ಬಜೆಟ್ ಸಿದ್ದತೆಗೆ ಒಂದು ರೂಪ ಸಿಗುತ್ತದೆ. ಬಜೆಟ್ ಸಿದ್ದತೆ ಮಾಡಿ ಫೆಬ್ರವರಿಯಲ್ಲಿ ಬಜೆಟ್ ಮಂಡನೆಗೆ ಸಿಎಂ ಅವರೇ ದಿನಾಂಕ ನಿಗದಿ ಮಾಡುತ್ತಾರೆ. ಈ ಬಾರಿ ಅಭಿವೃದ್ಧಿಗೆ ಹೆಚ್ವು ಮಹತ್ವದ ಕೊಡುವ ಚಿಂತನೆ ಇದೆ. ಕಳೆದ ವರ್ಷಕ್ಕಿಂತ ಜಾಸ್ತಿ ಬಜೆಟ್ ಗಾತ್ರ ದಾಟಲಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಸೈಟುಗಳ ಸೆಟ್‌ಬ್ಯಾಕ್ ಇಳಿಕೆ ಮಾಡಿ GBA ಅಂತಿಮ ಆದೇಶ | ಹೊಸ ಪಟ್ಟಿಯಂತೆ ನಿವೇಶನದ ಸುತ್ತ ಎಷ್ಟು ಜಾಗ ಬಿಡಬೇಕು?



















