ಕೊಪ್ಪಳ: ಕಾಂಗ್ರೆಸ್ ನಲ್ಲಿ ತಣ್ಣಗಾಗಿದ್ದ ಪವರ್ ಶೇರಿಂಗ್ ವಿಷಯ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಐದು ವರ್ಷವೂ ಸಿದ್ದರಾಮಯ್ಯ (Siddaramaiah) ಮುಖ್ಯಮಂತ್ರಿ ಆಗಿ ಮುಂದುವರಿಯಲಿದ್ದಾರೆ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ (Zameer Ahmed Khan) ಹೇಳಿದ್ದಾರೆ.
ನಗರದಲ್ಲಿ (Koppal) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸಿಎಂ ಖುರ್ಚಿ ಖಾಲಿ ಇಲ್ಲ. ಈ ಕುರಿತು ಯಾರೂ ಚರ್ಚೆ ಮಾಡುವ ಅವಶ್ಯಕತೆ ಇಲ್ಲ. ಕೆಪಿಸಿಸಿ ಅಧ್ಯಕ್ಷರ ಖುರ್ಚಿಯೂ ಖಾಲಿ ಇಲ್ಲ. ಕೆಪಿಸಿಸಿ ಅಧ್ಯಕ್ಷ ಹುದ್ದೆ ಬಗ್ಗೆ ಸತೀಶ್ ಜಾರಕಿಹೊಳಿ ಮಾತನಾಡಿರಬಹುದು. ಅದು ಅವರ ವೈಯಕ್ತಿಕ ಅಭಿಪ್ರಾಯ. ಆದರೆ ಕೆಪಿಸಿಸಿ ಅಧ್ಯಕ್ಷರ ಹುದ್ದೆ ಕೂಡ ಖಾಲಿ ಇಲ್ಲ. ಅಲ್ಲದೇ, ಮುಡಾ (MUDA Scam)ದಲ್ಲಿ ಸಿದ್ದರಾಮಯ್ಯ ಪಾತ್ರ ಸ್ವಲ್ಪವೂ ಇಲ್ಲ.
ಸಿದ್ದರಾಮಯ್ಯ ಅವರನ್ನು ಅಲುಗಾಡಿಸಿದರೆ ಕಾಂಗ್ರೆಸ್‌ಗೆ ತೊಂದರೆ ಆಗುತ್ತದೆ ಎಂಬ ಕಾರಣಕ್ಕೆ ಬಿಜೆಪಿ ಆಡುತ್ತಿರುವ ನಾಟಕ ಹಾಗೂ ಕುತಂತ್ರ ಇದು ಎಂದಿದ್ದಾರೆ. ಅಲ್ಲದೇ, ಕಾಂಗ್ರೆಸ್ ನ್ನು ತೋರಿಸಿ ಜನಾರ್ಧನ ರೆಡ್ಡಿ ಹಾಗೂ ಶ್ರೀರಾಮುಲು ಬಿಜೆಪಿಯಲ್ಲಿ ಬೇಳೆ ಬೇಯಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.