ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಎಟಿಎಂ ಸರ್ಕಾರವಾಗಿದೆ. ಆದರೆ ಡೆಬಿಟ್ ಅಕೌಂಟ್ ನಲ್ಲಿ ಹಣವೇ ಇಲ್ಲ. ರಾಜ್ಯದಲ್ಲಿ ಒಂದೇ ಒಂದು ಅಭಿವೃದ್ಧಿ ಕೆಲಸವಾಗಿಲ್ಲ. ಹೊರ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವವರ ಸಂಬಳವಿಲ್ಲ. ನಾವು ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ದಲಿತರ ಪರ ಎಂದು ಸರ್ಕಾರದವರು ಹೇಳುತ್ತಾರೆ. ಆದರೆ ಯಾವುದೇ ಅಭಿವೃದ್ಧಿ ಇಲ್ಲ ಎಂದು ಸಂಸದ ರಮೇಶ ಜಿಗಜಿಣಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ವಿಜಯಪುರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಜಿಗಜಿಣಗಿ, ಗ್ಯಾರಂಟಿ ಇಂದ ನಮಗೆ ಮೋಸ ಮಾಡಿದ್ದೀರಿ ಎಂದು ಮಹಿಳೆಯರೇ ಶಾಪ ಹಾಕುತ್ತಿದ್ದಾರೆ. ಕೇಂದ್ರ ಸರ್ಕಾರದೊಂದಿಗೆ ರಾಜ್ಯದವರದ್ದು ಒಳ್ಳೆಯ ಸಂಬಂಧ ಇಟ್ಟುಕೊಂಡಿಲ್ಲ. ನಮ್ಮ ಸರ್ಕಾರ ಮಾಡಿರುವ ಕೆಲಸಕ್ಕೆ ಇವರು ಭೂಮಿಪೂಜೆ ಮಾಡಿ ಚಾಲನೆ ನೀಡುವುದನ್ನು ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಕಳೆದ ಎರಡು ವರ್ಷದಿಂದ ಒಂದಾದರೂ ಅಭಿವೃದ್ಧಿ ಕೆಲಸ ಮಾಡಿದ್ದೀರಾ. ಸಿಎಂ ಅವರ ಕಂಟ್ರೋಲ್ ನಲ್ಲಿ ಶಾಸಕರು, ಸಚಿವರು ಇರಬೇಕು. ಆದರೆ ಸಿಎಂ ಮಾಡುವ ಕೆಲಸ ಸುರ್ಜೇವಾಲಾ ಅವರು ಬಂದು ಶಾಸಕ, ಸಚಿವರೊಟ್ಟಿಗೆ ಮಾತನಾಡುವಂತ ಪರಿಸ್ಥಿತಿ ಕಾಂಗ್ರೆಸ್ ನಲ್ಲಿದೆ. ಹಿಂದೆ ನಿಜಲಿಂಗಪ್ಪ ನವರು ರಾಮಕೃಷ್ಣ ಹೆಗಡೆ, ಕೃಷ್ಣಾ ಅವರು ಸಿಎಂ ಆಗಿದ್ದಾಗ ಮಾದರಿಯಾದ ಕೆಲಸ ಮಾಡಿದ್ದರು. ದೇವರಂತಹ ಮನುಷ್ಯ ಸಿದ್ದರಾಮಣ್ಣ, ಆದರೆ ಈ ಕಾಂಗ್ರೆಸ್ ನವರೊಟ್ಟಿಗೆ ಸೇರಿ ಸತ್ಯಾನಾಶವಾಗಿದ್ದಾನೆ ಎಂದ ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ.



















