ಬರ್ಮಿಂಗ್‌ಹ್ಯಾಮ್: ಇಂಗ್ಲೆಂಡ್‌ನ ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ನಲ್ಲಿ ಭಾರತದ ನಾಯಕ ಶುಭಮನ್ ಗಿಲ್ ಇತಿಹಾಸ ಸೃಷ್ಟಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ನೆಲದಲ್ಲಿ ಮತ್ತು SENA (ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್, ಆಸ್ಟ್ರೇಲಿಯಾ) ರಾಷ್ಟ್ರಗಳಲ್ಲಿ ದ್ವಿಶತಕ ಬಾರಿಸಿದ ಮೊದಲ ಏಷ್ಯನ್ ನಾಯಕ ಎಂಬ ದಾಖಲೆಗೆ ಗಿಲ್ ಪಾತ್ರರಾಗಿದ್ದಾರೆ.
ಈ ಸರಣಿಗೆ ಮುನ್ನ SENA ದೇಶಗಳಲ್ಲಿ ಕೇವಲ 25.7 ಸರಾಸರಿ ಹೊಂದಿದ್ದ ಗಿಲ್ ಮೇಲೆ ಸಾಕಷ್ಟು ಒತ್ತಡವಿತ್ತು. ಆದರೆ, ಸಮಯ ಬಂದಾಗ ಗಿಲ್ ತಮ್ಮ ಅತ್ಯುತ್ತಮ ಫಾರ್ಮ್ ಪ್ರದರ್ಶಿಸಿದ್ದಾರೆ. ಸರಣಿಯಲ್ಲಿ ತಮ್ಮ ಎರಡನೇ ಶತಕ ಸಿಡಿಸಿದ ಗಿಲ್, ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ಮೊದಲ 150ಕ್ಕೂ ಹೆಚ್ಚು ರನ್ ಗಳಿಸಿದ ಇನ್ನಿಂಗ್ಸ್ ಅನ್ನು ದ್ವಿಶತಕಕ್ಕೆ ವಿಸ್ತರಿಸಿದರು.
ಹಲವಾರು ದಾಖಲೆಗಳ ಬ್ರೇಕ್
ಗಿಲ್ ಕೇವಲ ಏಷ್ಯನ್ ನಾಯಕನಾಗಿ ಮಾತ್ರವಲ್ಲದೆ, ಇಂಗ್ಲೆಂಡ್‌ನಲ್ಲಿ 150+ ಸ್ಕೋರ್ ಮಾಡಿದ 23 ವರ್ಷಗಳ ನಂತರದ ಮೊದಲ ಭಾರತೀಯ ಬ್ಯಾಟರ್ ಎನಿಸಿಕೊಂಡರು. ಈ ಹಿಂದೆ 2002ರಲ್ಲಿ ಓವಲ್‌ನಲ್ಲಿ ರಾಹುಲ್ ದ್ರಾವಿಡ್ 217 ರನ್ ಗಳಿಸಿದ್ದರು. ನಾಯಕನಾಗಿ, ಅವರು 1990ರಲ್ಲಿ ಓಲ್ಡ್ ಟ್ರಾಫೋರ್ಡ್‌ನಲ್ಲಿ ಮೊಹಮ್ಮದ್ ಅಜರುದ್ದೀನ್ ಗಳಿಸಿದ್ದ 179 ರನ್‌ಗಳ ದಾಖಲೆಯನ್ನು ಮೀರಿಸುವ ಮೂಲಕ ಇಂಗ್ಲೆಂಡ್‌ನಲ್ಲಿ ಭಾರತೀಯ ನಾಯಕನ ಗರಿಷ್ಠ ವೈಯಕ್ತಿಕ ಟೆಸ್ಟ್ ಸ್ಕೋರ್ ದಾಖಲೆಯನ್ನು ತಮ್ಮದಾಗಿಸಿಕೊಂಡರು.
ಇಂಗ್ಲೆಂಡ್‌ನಲ್ಲಿ ಭಾರತೀಯ ನಾಯಕರ ಗರಿಷ್ಠ ಟೆಸ್ಟ್ ಸ್ಕೋರ್‌ಗಳು:
- 200* – ಶುಭಮನ್ ಗಿಲ್, ಬರ್ಮಿಂಗ್‌ಹ್ಯಾಮ್, 2025
- 179 – ಮೊಹಮ್ಮದ್ ಅಜರುದ್ದೀನ್, ಮ್ಯಾಂಚೆಸ್ಟರ್, 1990
- 149 – ವಿರಾಟ್ ಕೊಹ್ಲಿ, ಬರ್ಮಿಂಗ್‌ಹ್ಯಾಮ್, 2018
- 148 – ಮನ್ಸೂರ್ ಅಲಿ ಖಾನ್ ಪಟೌಡಿ, ಲೀಡ್ಸ್, 1967
- 147 – ಶುಭಮನ್ ಗಿಲ್, ಲೀಡ್ಸ್, 2025
ಏಷ್ಯನ್ ನಾಯಕರ SENA ಟೆಸ್ಟ್ ದ್ವಿಶತಕಗಳು: - ಶುಭಮನ್ ಗಿಲ್ – ಬರ್ಮಿಂಗ್‌ಹ್ಯಾಮ್, 2025 – 200*
- ತಿಲಕರತ್ನೆ ದಿಲ್ಶನ್ – ಲಾರ್ಡ್ಸ್, 2011 – 193
- ಮೊಹಮ್ಮದ್ ಅಜರುದ್ದೀನ್ – ಆಕ್ಲೆಂಡ್, 1990 – 192
- ಹನೀಫ್ ಮೊಹಮ್ಮದ್ – ಲಾರ್ಡ್ಸ್, 1967 – 187*
- ಮೊಹಮ್ಮದ್ ಅಜರುದ್ದೀನ್ – ಮ್ಯಾಂಚೆಸ್ಟರ್, 1990 – 179
ಗಿಲ್‌ನ ಪ್ರಾಬಲ್ಯ
25 ವರ್ಷ ವಯಸ್ಸಿನ ಗಿಲ್ 311 ಎಸೆತಗಳಲ್ಲಿ ತಮ್ಮ ಮೈಲಿಗಲ್ಲನ್ನು ತಲುಪಿದರು, ಅವರ ಇನ್ನಿಂಗ್ಸ್ 21 ಬೌಂಡರಿ ಮತ್ತು 2 ಸಿಕ್ಸರ್‌ಗಳಿಂದ ಕೂಡಿದೆ. ಕ್ರಿಸ್ ವೋಕ್ಸ್ ಬೌಲಿಂಗ್‌ನಲ್ಲಿ ಸತತ ಮೂರು ಬೌಂಡರಿಗಳೊಂದಿಗೆ 323 ಎಸೆತಗಳಲ್ಲಿ 222 ರನ್ ಗಳಿಸುವ ಮೂಲಕ ಸುನಿಲ್ ಗವಾಸ್ಕರ್ ಅವರ 1979ರ ಓವಲ್‌ನಲ್ಲಿನ 221 ರನ್‌ಗಳ ದಾಖಲೆಯನ್ನು ಮೀರಿ, ಇಂಗ್ಲೆಂಡ್‌ನಲ್ಲಿ ಟೆಸ್ಟ್ ಪಂದ್ಯದಲ್ಲಿ ಭಾರತೀಯ ಆಟಗಾರನ ಗರಿಷ್ಠ ವೈಯಕ್ತಿಕ ಸ್ಕೋರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಟೆಸ್ಟ್‌ನಲ್ಲಿ ದ್ವಿಶತಕ ಬಾರಿಸಿದ 13ನೇ ಭಾರತೀಯ ಆಟಗಾರರಾಗಿದ್ದಾರೆ. ಒಟ್ಟಾರೆ, ಇದು ಭಾರತೀಯ ಆಟಗಾರ ಟೆಸ್ಟ್ ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿದ 50ನೇ ನಿದರ್ಶನವಾಗಿದೆ. ವಿರಾಟ್ ಕೊಹ್ಲಿ ಅತಿ ಹೆಚ್ಚು (ಏಳು) ದ್ವಿಶತಕಗಳ ದಾಖಲೆ ಹೊಂದಿದ್ದಾರೆ.
ಮನ್ಸೂರ್ ಅಲಿ ಖಾನ್ ಪಟೌಡಿ, ಸುನಿಲ್ ಗವಾಸ್ಕರ್, ಸಚಿನ್ ತೆಂಡೂಲ್ಕರ್, ಎಂ.ಎಸ್. ಧೋನಿ ಮತ್ತು ವಿರಾಟ್ ಕೊಹ್ಲಿ ನಂತರ ಟೆಸ್ಟ್‌ನಲ್ಲಿ ದ್ವಿಶತಕ ಬಾರಿಸಿದ ಆರನೇ ಭಾರತೀಯ ನಾಯಕ ಗಿಲ್ ಆಗಿದ್ದಾರೆ. ಅಲ್ಲದೆ, ರೋಹಿತ್ ಶರ್ಮಾ, ಸಚಿನ್ ತೆಂಡೂಲ್ಕರ್ ಮತ್ತು ವೀರೇಂದ್ರ ಸೆಹ್ವಾಗ್ ಅವರ ನಂತರ ಟೆಸ್ಟ್ ಮತ್ತು ODI ಎರಡರಲ್ಲೂ ದ್ವಿಶತಕಗಳನ್ನು ಗಳಿಸಿದ ನಾಲ್ಕನೇ ಭಾರತೀಯ ಆಟಗಾರರಾಗಿದ್ದಾರೆ.
ಗಿಲ್ ತಮ್ಮ ಇಡೀ ಇನ್ನಿಂಗ್ಸ್‌ನಲ್ಲಿ ಕೇವಲ ಮೂರು ತಪ್ಪು ಹೊಡೆತಗಳನ್ನು ಆಡಿದರು. ಇದು ರಾಹುಲ್ ದ್ರಾವಿಡ್, ರಿಕಿ ಪಾಂಟಿಂಗ್, ಕುಮಾರ ಸಂಗಕ್ಕಾರರಂತಹ ದಿಗ್ಗಜರಿಗಿಂತಲೂ ಹೆಚ್ಚಿನ ನಿಯಂತ್ರಣವನ್ನು ತೋರಿಸುತ್ತದೆ. 25ನೇ ವಯಸ್ಸಿನಲ್ಲಿ, ಪಟೌಡಿ ನಂತರ ಟೆಸ್ಟ್‌ನಲ್ಲಿ ದ್ವಿಶತಕ ತಲುಪಿದ ಎರಡನೇ ಅತಿ ಕಿರಿಯ ಭಾರತೀಯ ನಾಯಕರಾಗಿದ್ದಾರೆ. ಇಂಗ್ಲೆಂಡ್‌ನಲ್ಲಿ ಭಾರತೀಯ ನಾಯಕನಾಗಿ ಗರಿಷ್ಠ ಸ್ಕೋರ್ ಮಾತ್ರವಲ್ಲದೆ, 2016ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ 200 ರನ್‌ಗಳ ವಿರಾಟ್ ಕೊಹ್ಲಿ ದಾಖಲೆಯನ್ನು ಮುರಿದು, ವಿದೇಶಿ ಟೆಸ್ಟ್‌ನಲ್ಲಿ ಭಾರತೀಯ ನಾಯಕನ ಗರಿಷ್ಠ ಸ್ಕೋರ್ ಅನ್ನು ಸಹ ಗಿಲ್ ತಮ್ಮದಾಗಿಸಿಕೊಂಡಿದ್ದಾರೆ.