ನವದೆಹಲಿ: ಟೀಮ್ ಇಂಡಿಯಾದ ನಾಯಕ ಶುಭಮನ್ ಗಿಲ್ ಅವರು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ತೋರಿದ ಅದ್ಭುತ ಪ್ರದರ್ಶನಕ್ಕೆ, ಭಾರತದ ಬ್ಯಾಟಿಂಗ್ ದಂತಕಥೆ ಸುನಿಲ್ ಗವಾಸ್ಕರ್ ಅವರು ಮುಕ್ತಕಂಠದಿಂದ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. 1971ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ತಮ್ಮ ಚೊಚ್ಚಲ ಸರಣಿಯಲ್ಲಿ ತಾವು ಗಳಿಸಿದ್ದ 774 ರನ್‌ಗಳ ದಾಖಲೆಗಿಂತಲೂ, ನಾಯಕನಾಗಿ ಗಿಲ್ ಗಳಿಸಿದ 754 ರನ್‌ಗಳು ಹೆಚ್ಚು ಶ್ರೇಷ್ಠ ಎಂದು ಗವಾಸ್ಕರ್ ಬಣ್ಣಿಸಿದ್ದಾರೆ.
ನಾಯಕನಾಗಿ ತಮ್ಮ ಮೊದಲ ಸರಣಿಯಲ್ಲೇ ಅಮೋಘ ಪ್ರದರ್ಶನ ನೀಡಿದ ಶುಭಮನ್ ಗಿಲ್, ಹತ್ತು ಇನ್ನಿಂಗ್ಸ್‌ಗಳಿಂದ ಒಟ್ಟು 754 ರನ್ ಗಳಿಸಿ, ಸರಣಿಯ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಹೊರಹೊಮ್ಮಿದರು. ಗವಾಸ್ಕರ್ ಅವರ ಸಾರ್ವಕಾಲಿಕ ದಾಖಲೆಯನ್ನು ಮುರಿಯಲು ಅವರಿಗೆ ಕೇವಲ 21 ರನ್‌ಗಳ ಅವಶ್ಯಕತೆಯಿತ್ತು. ಆದರೆ, ಅಂತಿಮ ಇನ್ನಿಂಗ್ಸ್‌ನಲ್ಲಿ ಕೇವಲ 11 ರನ್‌ಗಳಿಗೆ ಔಟಾಗುವ ಮೂಲಕ ಅವರು ಈ ಐತಿಹಾಸಿಕ ಸಾಧನೆಯಿಂದ ವಂಚಿತರಾದರು.
ಗಿಲ್ ದಾಖಲೆ ತಪ್ಪಿಸಿಕೊಂಡರೂ, ಅವರ ಪ್ರದರ್ಶನವನ್ನು ಕೊಂಡಾಡಿರುವ ಗವಾಸ್ಕರ್, “ನಾಯಕತ್ವದ ಹೆಚ್ಚುವರಿ ಜವಾಬ್ದಾರಿಯೊಂದಿಗೆ ಇಷ್ಟು ರನ್ ಗಳಿಸಿರುವುದು ನಿಜಕ್ಕೂ ಅದ್ಭುತ. ನನ್ನ ದಾಖಲೆಯನ್ನು ಮುರಿಯುವ ನಿರೀಕ್ಷೆಯಲ್ಲಿ ನಾನೇ ಅವರಿಗಾಗಿ ಉಡುಗೊರೆಯೊಂದನ್ನು ಸಿದ್ಧಪಡಿಸಿದ್ದೆ. ಆದರೂ, 754 ರನ್‌ಗಳು ಸಾಮಾನ್ಯ ಸಾಧನೆಯಲ್ಲ,” ಎಂದು ಸೋನಿ ಸ್ಪೋರ್ಟ್ಸ್ ಜೊತೆ ಮಾತನಾಡುತ್ತಾ ಹೇಳಿದರು.
ತಮ್ಮ ಚೊಚ್ಚಲ ಸರಣಿಯ ಪ್ರದರ್ಶನವನ್ನು ಗಿಲ್ ಅವರ ಪ್ರದರ್ಶನದೊಂದಿಗೆ ಹೋಲಿಸಿದ ಗವಾಸ್ಕರ್, “ನಾನು ಆಡಿದಾಗ ತಂಡದ ಕಿರಿಯ ಆಟಗಾರನಾಗಿದ್ದೆ. ಒಂದು ವೇಳೆ ನಾನು ವಿಫಲನಾಗಿದ್ದರೂ ಯಾರೂ ಹೆಚ್ಚು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ, ಗಿಲ್ ನಾಯಕನಾಗಿ ಈ ರನ್‌ಗಳನ್ನು ಗಳಿಸಿದ್ದಾರೆ. ಈ 754 ರನ್‌ಗಳು ಭಾರತೀಯ ಕ್ರಿಕೆಟ್‌ಗೆ ಮತ್ತು ತಂಡದ ಗೆಲುವಿಗೆ ದೊಡ್ಡ ಕೊಡುಗೆ ನೀಡಿವೆ.
ಕೇವಲ 20 ರನ್‌ಗಳ ವ್ಯತ್ಯಾಸವನ್ನು ನೋಡಬೇಡಿ, ಆ ರನ್‌ಗಳ ಹಿಂದಿರುವ ಮೌಲ್ಯವನ್ನು ನೋಡಿ,” ಎಂದು ಯುವ ನಾಯಕನ ಬೆನ್ನು ತಟ್ಟಿದ್ದಾರೆ.ಈ ಸರಣಿಯಲ್ಲಿ ಗಿಲ್, ಲೀಡ್ಸ್‌ನಲ್ಲಿ 147, ನಂತರ ಒಂದೇ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ 269 ಮತ್ತು 161 ರನ್ ಗಳಿಸಿ ಮಿಂಚಿದ್ದರು. ನಾಲ್ಕನೇ ಟೆಸ್ಟ್‌ನಲ್ಲಿಯೂ ಶತಕ (103) ಬಾರಿಸಿ ತಂಡದ ನೆರವಿಗೆ ನಿಂತಿದ್ದರು. ಅವರ ಈ ಅಮೋಘ ಪ್ರದರ್ಶನಕ್ಕಾಗಿ ‘ಸರಣಿ ಶ್ರೇಷ್ಠ’ ಪ್ರಶಸ್ತಿಯ ಪ್ರಬಲ ಸ್ಪರ್ಧಿಯಾಗಿದ್ದಾರೆ.”