ನವದೆಹಲಿ: 2003ರಲ್ಲಿ ಬೆಂಗಳೂರನ್ನು ಬೆಚ್ಚಿಬೀಳಿಸಿದ ಸಾಫ್ಟ್‌ವೇರ್ ಎಂಜಿನಿಯರ್ ಗಿರೀಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸರ್ವೋಚ್ಚ ನ್ಯಾಯಾಲಯ ಸೋಮವಾರ ಅತ್ಯಂತ ಅಪರೂಪದ ತೀರ್ಪನ್ನು ನೀಡಿದೆ. ನಿಶ್ಚಿತಾರ್ಥ ನಡೆದ ನಾಲ್ಕೇ ದಿನದಲ್ಲಿ ತನ್ನ ಪ್ರಿಯಕರನ ಜೊತೆ ಸೇರಿ ಭಾವೀ ಪತಿ ಗಿರೀಶ್‌ರನ್ನು ಕೊಲೆಗೈದ ಶುಭಾಗೆ ಸುಪ್ರೀಂಕೋರ್ಟ್ ಜೀವಾವಧಿ ಶಿಕ್ಷೆಯಿಂದ ಪಾರಾಗುವ ಒಂದು ಕೊನೆಯ ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ಟೆಕ್ಕಿ ಗಿರೀಶ್ ಹಂತಕರಾದ ಶುಭಾ ಶಂಕರ್, ಆಕೆಯ ಬಾಯ್‌ಫ್ರೆಂಡ್ ಅರುಣ್ ಮತ್ತು ಇತರೆ ಇಬ್ಬರು(ದಿನಕರನ್ ಮತ್ತು ವೆಂಕಟೇಶ್) ಅಪರಾಧಿಗಳಿಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಜೀವಾವಧಿ ಶಿಕ್ಷೆಯನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ.
ಆದರೆ, ಅದರ ಜೊತೆಗೇ ಕ್ಷಮಾದಾನ ನೀಡುವಂತೆ ಕೋರಿ ಕರ್ನಾಟಕ ರಾಜ್ಯಪಾಲರಿಗೆ ಅರ್ಜಿ ಸಲ್ಲಿಸಲು ಹಂತಕರಿಗೆ ಸುಪ್ರೀಂಕೋರ್ಟ್ 8 ವಾರಗಳ ಕಾಲಾವಕಾಶ ನೀಡಿದೆ. ರಾಜ್ಯಪಾಲರು ಕ್ಷಮಾದಾನ ನೀಡಿದರೆ ಎಲ್ಲ ನಾಲ್ವರು ಹಂತಕರೂ ಜೀವಾವಧಿ ಶಿಕ್ಷೆಯಿಂದ ಪಾರಾಗಲಿದ್ದಾರೆ.
ಈ ಪ್ರಕರಣದಲ್ಲಿ ಹಂತಕರ ಕುರಿತು ಮೃದುಧೋರಣೆ ತಳೆದಿರುವ ಸುಪ್ರೀಂ ಕೋರ್ಟ್ ನ್ಯಾಯಪೀಠ, “ಕೊಲೆ ನಡೆದ ಸಂದರ್ಭದಲ್ಲಿ ಬಹುತೇಕ ಆರೋಪಿಗಳು ಹದಿಹರೆಯದವರಾಗಿದ್ದರು. ಶುಭಾ ಶಂಕರ್ ಕೂಡ ಕಾನೂನು ವಿದ್ಯಾರ್ಥಿನಿಯಾಗಿದ್ದಳು. ಆಕೆಗೆ ಮನೆಯವರು ಬಲವಂತವಾಗಿ ಗಿರೀಶ್ ಜೊತೆ ಮದುವೆ ಮಾಡಿಸಲು ಮುಂದಾಗಿದ್ದರು. ಕುಟುಂಬಸ್ಥರು ಈ ಮದುವೆಗೆ ಆಕೆಯ ಮೇಲೆ ಒತ್ತಡ ಹೇರದಿದ್ದರೆ, ಆ ಅಮಾಯಕ ಯುವಕನ ಪ್ರಾಣ ಉಳಿಯುತ್ತಿತ್ತು” ಎಂದು ಅಭಿಪ್ರಾಯಪಟ್ಟಿದೆ.

ಕುಟುಂಬ ಕೈಗೊಂಡ ದುಡುಕಿನ ನಿರ್ಧಾರದಿಂದ ಯುವ, ಮಹತ್ವಾಕಾಂಕ್ಷಿ ಯುವತಿಯ ಧ್ವನಿಯೇ ಅಡಗಿಹೋಯಿತು, ಆಕೆಯ ಮನಸ್ಸಲ್ಲಿ ಸಂಘರ್ಷದ ಬೆಂಕಿ ಹೊತ್ತಿ ಉರಿಯತೊಡಗಿತು. ಈ ಮಾನಸಿಕ ಬಂಡಾಯದ ಜೊತೆಗೆ ಪ್ರಿಯಕರನೊಂದಿಗಿನ ಪ್ರಣಯ ಸಂಬಂಧವೂ ಸೇರಿ ಆಕೆಯನ್ನು ಇಂಥದ್ದೊಂದು ಕೃತ್ಯಕ್ಕೆ ಅಣಿಯಾಗುವಂತೆ ಮಾಡಿತು. ಈ ಮೂಲಕ ಅಮಾಯಕ ಯುವಕನೊಬ್ಬನ ಪ್ರಾಣ ಹೋದರೆ, ಉಳಿದವರ ಜೀವನವೇ ನಾಶವಾಯಿತು ಎಂದೂ ನ್ಯಾಯಪೀಠ ಹೇಳಿದೆ.
ಈ ಪ್ರಕರಣವನ್ನು ನಾವು ವಿಭಿನ್ನ ದೃಷ್ಟಿಕೋನದಲ್ಲಿ ನೋಡಿರುವುದಾಗಿ ತಿಳಿಸಿದ ನ್ಯಾಯಪೀಠ, “ನಾವು ಈ ಹೀನ ಅಪರಾಧ ಎಸಗಿದ ಅಪರಾಧಿಗಳಿಗೆ ಹೊಸ ಬದುಕು ಕಲ್ಪಿಸಲು ನಿರ್ಧರಿಸಿದ್ದೇವೆ. 8 ವಾರಗಳ ಒಳಗಾಗಿ ಅವರು ಕರ್ನಾಟಕದ ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಅವರಿಗೆ ಕ್ಷಮಾದಾನ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸುತ್ತಿದ್ದೇವೆ” ಎಂದು ಹೇಳಿತು. ಇವರ ಕ್ಷಮಾದಾನ ಅರ್ಜಿ ಇತ್ಯರ್ಥವಾಗುವವರೆಗೂ ಹಂತಕರನ್ನು ಬಂಧಿಸುವಂತಿಲ್ಲ. ಅಲ್ಲಿಯವರೆಗೂ ಅವರ ಶಿಕ್ಷೆಯು ಅಮಾನತಿನಲ್ಲಿರುತ್ತದೆ ಎಂದೂ ಕೋರ್ಟ್ ಹೇಳಿತು.
ಘಟನೆ ನಡೆದ ಹಲವು ವರ್ಷಗಳೇ ಕಳೆದಿವೆ. ಅಂದು ಹದಿಹರೆಯದವರಾಗಿದ್ದ ಅಪರಾಧಿಗಳು ಇಂದು ಮಧ್ಯವಯಸ್ಕರಾಗಿದ್ದಾರೆ. ಆ ಪೈಕಿ ಆರೋಪಿ ನಂ.3 ಈಗ 28 ವರ್ಷದವನಾಗಿದ್ದು, ಇತ್ತೀಚೆಗೆ ಮದುವೆಯಾಗಿ ಒಂದು ಮಗುವನ್ನೂ ಹೊಂದಿದ್ದಾನೆ. ಅಲ್ಲದೇ ಜೈಲಿನಲ್ಲಿ ಇವರೆಲ್ಲರ ನಡವಳಿಕೆಯೂ ಉತ್ತಮವಾಗಿತ್ತು. ಇವರು ಯಾರೂ ಕ್ರಿಮಿನಲ್ ಹಿನ್ನೆಲೆಯವರಾಗಿರಲಿಲ್ಲ. ಆ ಕ್ಷಣದಲ್ಲಿ ಅಪಾಯಕಾರಿ ಸಾಹಸಕ್ಕೆ ಕೈ ಹಾಕಿ ಈ ಹೀನ ಕೃತ್ಯ ಎಸಗಿದ್ದಾರೆ ಎಂದೂ ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

ಏನಿದು ಪ್ರಕರಣ?
ಇಂಟೆಲ್ ನಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಗಿರೀಶ್(27) ನನ್ನು ಕಾನೂನು ವಿದ್ಯಾರ್ಥಿನಿಯಾಗಿದ್ದ ಶುಭಾ ಶಂಕರ್(19) ಜತೆಗೆ 2003ರ ನವೆಂಬರ್ 30ರಂದು ನಿಶ್ಚಿತಾರ್ಥ ಮಾಡಲಾಗಿತ್ತು. ಆದರೆ, ಶುಭಾಗೆ ಈ ಮದುವೆ ಇಷ್ಟವಿರಲಿಲ್ಲ. ಆಕೆ ಅರುಣ್ ಎಂಬಾತನನ್ನು ಪ್ರೇಮಿಸುತ್ತಿದ್ದಳು. ಹೀಗಾಗಿ, ನಿಶ್ಚಿತಾರ್ಥ ನಡೆದ ನಾಲ್ಕೇ ದಿನದಲ್ಲಿ, 2003ರ ಡಿಸೆಂಬರ್ 3ರಂದು ಶುಭಾ ತನ್ನನ್ನು ಊಟಕ್ಕೆ ಕರೆದೊಯ್ಯುವಂತೆ ಗಿರೀಶ್ ಗೆ ಕೇಳಿಕೊಳ್ಳುತ್ತಾಳೆ. ಅದರಂತೆ ಗಿರೀಶ್ ಆಕೆಯನ್ನು ಕರೆದೊಯ್ಯುತ್ತಿರುತ್ತಾರೆ.
ದಾರಿ ಮಧ್ಯೆ, ಇಂದಿರಾನಗರ ಮತ್ತು ಕೋರಮಂಗಲದ ನಡುವಿನ ರಿಂಗ್ ರಸ್ತೆಯಲ್ಲಿ ಬೈಕ್ ನಿಲ್ಲಿಸಲು ಹೇಳುತ್ತಾಳೆ. ಎಚ್ಎಎಲ್ ನಲ್ಲಿ ವಿಮಾನ ಹಾರಾಟ ನೋಡಬೇಕು ಎನ್ನುತ್ತಾಳೆ. ಅದರಂತೆ ಗಿರೀಶ್ ಬೈಕ್ ನಿಲ್ಲಿಸುತ್ತಾನೆ. ಇಬ್ಬರೂ ವಿಮಾನ ಹಾರಾಟವನ್ನು ನೋಡುತ್ತಿರುವಾಗ, ಹಿಂದಿನಿಂದ ಬರುವ ಅರುಣ್ ಮತ್ತು ಸಹಚರರು ಗಿರೀಶ್ ತಲೆಗೆ ಶಾಕ್ ಆಬ್ಸರ್ಬರ್ ನಿಂದ ಹೊಡೆಯುತ್ತಾರೆ. ರಕ್ತದ ಮಡುವಿನಲ್ಲಿ ಬಿದ್ದ ಗಿರೀಶ್ ನನ್ನು ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಷ್ಟರಲ್ಲೇ ಆತ ಕೊನೆಯುಸಿರೆಳೆಯುತ್ತಾನೆ.
ತನಿಖೆ ಆರಂಭಿಸಿದ ಪೊಲೀಸರು ಶುಭಾಳ ಮೊಬೈಲ್ ಫೋನ್ ದತ್ತಾಂಶಗಳನ್ನು ಪರಿಶೀಲಿಸಿದಾಗ ಆಕೆ ಈ ಕೊಲೆಗೂ ಮುನ್ನ ಅರುಣ್ ಜತೆ ಹಲವು ಬಾರಿ ಫೋನ್ ಕರೆ ಮಾಡಿರುವುದು ತಿಳಿದುಬರುತ್ತದೆ. ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಬಳಿಕ, ಈ ಕೊಲೆಯ ಸಂಚಿನಲ್ಲಿ ತಾನೂ ಭಾಗಿಯಾಗಿರುವುದನ್ನು ಶುಭಾ ಒಪ್ಪಿಕೊಳ್ಳುತ್ತಾಳೆ. ನಾಲ್ವರು ಆರೋಪಿಗಳನ್ನೂ ಸೆಷನ್ಸ್ ನ್ಯಾಯಾಲಯ ಅಪರಾಧಿಗಳೆಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ನಂತರ ಕರ್ನಾಟಕ ಹೈಕೋರ್ಟ್ ಕೂಡ ಈ ತೀರ್ಪನ್ನು ಎತ್ತಿಹಿಡಿಯುತ್ತದೆ.



















