ಬೈಂದೂರು : ಬೈಂದೂರು ತಾಲೂಕಿನ ಇತಿಹಾಸ ಪ್ರಸಿದ್ಧ ನಾವುಂದ ಮಸ್ಕಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಜರಗಿತು.
ದೇವರಿಗೆ ವಿಶೇಷ ಹೂವಿನ ಅಲಂಕಾರ ಪೂಜೆ, ಹಣ್ಣು ಕಾಯಿ ಮತ್ತು ಮಂಗಳಾರತಿ ಸೇವೆ, ಮಹಾ ಪೂಜೆಯೊಂದಿಗೆ ಮಧ್ಯಾಹ್ನ ಅನ್ನಸಂತರ್ಪಣೆ ಸೇವೆ ನೆರವೇರಿತು. ಭಕ್ತರಿಂದ ಭಜನಾ ಸಂಕೀರ್ತನೆ ನಡೆಯಿತು.
ಬಾಲಕೃಷ್ಣ, ಮುದ್ದುಕೃಷ್ಣ ವೇಷ ಸ್ಪರ್ಧೆ, ಹಗ್ಗಜಗ್ಗಾಟ, ಭಕ್ತಿಗೀತೆ ಸ್ಪರ್ಧೆ, ಮೊಸರು ಕುಡಿಕೆ ಒಡೆಯುವ ಸ್ಪರ್ಧೆ ಹಾಗೂ ಓಕುಳಿ ಆಟ ಜರುಗಿತು. ಭಕ್ತರು ಶನಿವಾರ ರಾತ್ರಿಯಿಂದ ದೇವರ ಧಾರ್ಮಿಕ, ಸಾಂಸ್ಕೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಕೃಷ್ಣದೇವರ ನಾಮಸ್ಮರಣೆ ಮಾಡಿದರು.
ದೇವಸ್ಥಾನದ ಅರ್ಚಕ ನಾವುಂದ ರಾಘವೇಂದ್ರ ಕಾರಂತ್ ಮಾತನಾಡಿ, ಕೃಷ್ಣ ಪರಮಾತ್ಮನ ಮಹಿಮೆಯನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಕೃಷ್ಣ ಒಬ್ಬರ ಮನಸ್ಸನ್ನು ಮೀರಿದವನು. ಅವನು ಅವತಾರ ತಾಳಿ ನಮ್ಮ ನಡುವೆ ಮಾನವನಾಗಿ ಬದುಕಿದ್ದರೂ, ಅವನು ಪುರಬ್ರಹ್ಮ ಸ್ವರೂಪನಾಗಿರುವುದರಿಂದ ಯಾರೂ ಅವನನ್ನು ಗ್ರಹಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಬಾಬು ಶೆಟ್ಟಿ, ಮಸ್ಕಿ ಸತೀಶ್ ಭಟ್, ಸುರೇಶ ಖಾರ್ವಿ, ರಘು ಪೂಜಾರಿ, ಚಂದ್ರ ಪೂಜಾರಿ, ಬಾಬು ಪೂಜಾರಿ, ಗೌರಿ ಪೂಜಾರಿ, ಗಿರಿಜಾ ಮೊಗವೀರ, ಗ್ರಾಪಂ ಸದಸ್ಯ ರಾಮ ಎಸ್.ಖಾರ್ವಿ, ಗಣೇಶ ಪೂಜಾರಿ ಸೇರಿ ಭಕ್ತಾದಿಗಳು ಉಪಸ್ಥಿತರಿದ್ದರು.




















